Advertisement

ವೈರಲ್‌ ಆಗುತ್ತಿದೆ ನಾಗಿಣಿ ನೃತ್ಯ!

10:43 AM Mar 24, 2018 | |

ಕೆಲವೊಮ್ಮೆ ಹೀಗಾಗುತ್ತದೆ. ಅಚಾನಕ್‌ ಆಗಿ ಏನೋ ಮಾಡಿದರೆ, ಅದು ದೊಡ್ಡ ಪ್ರಮಾಣದಲ್ಲಿ ವೈರಲ್‌ ಆಗಿ ಬಿಡುತ್ತದೆ. ವಾಟ್ಸಾಪ್‌, ಫೇಸ್‌ಬುಕ್‌ ಮೂಲಕ ಒಬ್ಬರಿಂದ ಒಬ್ಬರಿಗೆ ದಾಟುತ್ತಾ ರಾತ್ರಿ ಕಳೆದು ಬೆಳಗಾಗುವುದರೊಳಗೆ ಲಕ್ಷಾಂತರ ಜನರನ್ನು ತಲುಪಿರುತ್ತದೆ. ಎಲ್ಲಾ ಜನರು ಮನಸ್ಸು ಗೆದ್ದಿರುತ್ತದೆ. ಆ ಕ್ಷಣದಿಂದಲೇ ಜನರು, ಏನೇ ಘಟನೆ ನಡೆದರೂ ಅದಕ್ಕೆ ವೈರಲ್‌ ಆದ ಘಟನೆಗೆ ಲಿಂಕ್‌ ಇಟ್ಟು ಪುನಃ ಪುನಃ ಆ ಘಟನೆ ಮರುಕಳಿಸುವಂತೆ ಮಾಡುತ್ತಾರೆ. ಇದೀಗ ಅಂಥದೊಂದು ವೈರಲ್‌ ಸ್ಥಾನ ಪಡೆದಿರುವುದು ನಾಗಿಣಿ ನೃತ್ಯ.

Advertisement

ಇದಕ್ಕೆ ಕಾರಣವಾಗಿದ್ದು, ಬಾಂಗ್ಲಾ ಬ್ಯಾಟ್ಸ್‌ಮನ್‌ ಮುಶ್ಫಿಕರ್‌ ರಹೀಂ. ಅದು, ಲಂಕಾ ಮತ್ತು ಬಾಂಗ್ಲಾ ನಡುವಿನ ತ್ರಿಕೋನ ಟಿ20 ಸರಣಿಯ ಪಂದ್ಯ. ಮೊದಲು ಬ್ಯಾಟಿಂಗ್‌ ಮಾಡಿದ ಲಂಕಾ ಪಡೆ 215 ರನ್‌ ಗೆಲುವಿನ ಗುರಿ ನೀಡಿತ್ತು. ಬಾಂಗ್ಲಾ ತಂಡಕ್ಕೆ ಈ ಗುರಿಯನ್ನು ಬೆನ್ನುಹತ್ತಲು ಸಾಧ್ಯವೇ ಇಲ್ಲ ಅಂತ ಕ್ರಿಕೆಟ್‌ ಜಗತ್ತು ಅಂದುಕೊಂಡಿತ್ತು. ಆದರೆ ಆಗಿದ್ದೇ ಬೇರೆ, ಬಾಂಗ್ಲಾ ತಂಡ ಇದನ್ನು ಚೇಸ್‌ ಮಾಡಿ ಇತಿಹಾಸ ನಿರ್ಮಿಸಿತು.

ಅಜೇಯ 72 ರನ್‌ ಬಾರಿಸಿ ಬಾಂಗ್ಲಾ ತಂಡದ ಗೆಲುವಿಗೆ ಕಾರಣವಾದ ಮುಶ್ಫಿಕರ್‌ ರಹೀಂ ಕ್ರೀಸ್‌ನಲ್ಲಿ ಗೆಲುವಿನ ಹೊಡೆತ ಬಾರಿಸುತ್ತಿದ್ದಂತೆ ನಾಗಿಣಿ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು. ಇದನ್ನು ನೋಡಿದ ಕ್ರೀಡಾಂಗಣದಲ್ಲಿದ್ದ ಬಾಂಗ್ಲಾ ಅಭಿಮಾನಿಗಳು ಹಾಗೇ ಮಾಡಿದರು! ಆ ಕ್ಷಣದಿಂದಲೇ ನಾಗಿಣಿ ನೃತ್ಯ ಒಂದು ಸೆನ್ಸೇಶನ್‌ ಆಯಿತು. ಸಾಮಾಜಿಕ ಜಾಲತಾಣಗಳ ಮೂಲಕ ವೈರಲ್‌ ಆಯಿತು.

ಇದು, ಎಷ್ಟರ ಮಟ್ಟಿಗೆ ವೈರಲ್‌ ಆಗಿತ್ತು ಎಂದರೇ ವೀಕ್ಷಕ ವಿವರಣೆ ನೀಡುತ್ತಿದ್ದ ಸುನೀಲ್‌ ಗಾವಸ್ಕರ್‌ ಮತ್ತು ಬ್ರೆಟ್‌ ಲೀ ಅವರನ್ನು ಕೂಡ ಬಿಟ್ಟಿಲ್ಲ. ಕ್ರೀಡಾಂಗಣದಲ್ಲಿ ಪ್ರತಿ ಸಿಕ್ಸರ್‌ಗೂ ಪ್ರೇಕ್ಷಕರು ನಾಗಿಣಿ ನೃತ್ಯ ಮಾಡುವುದು ಕಾಣಿಸುತ್ತಿತ್ತು.

ತಿರುಗು ಬಾಣವಾಯಿತು
ನಾಗಿಣಿ ನೃತ್ಯ ಪ್ರದರ್ಶಿಸಿದ ಬಾಂಗ್ಲಾ ತಂಡಕ್ಕೆ ಫೈನಲ್‌ ಪಂದ್ಯದಲ್ಲಿ ಅದುವೇ ತಿರುಗು ಬಾಣವಾಗಿದೆ. ಭಾರತ ಮತ್ತು ಬಾಂಗ್ಲಾ ನಡುವಿನ ಪಂದ್ಯ ಭಾರೀ ರೋಚಕತೆ ಹುಟ್ಟಿಸಿತ್ತು. ಭಾರತ ಸೋಲುವ ಹಂತದಲ್ಲಿದ್ದ ಪಂದ್ಯದಲ್ಲಿ ದಿನೇಶ್‌ ಕಾರ್ತಿಕ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿ ಬಾಂಗ್ಲಾದಿಂದ ಗೆಲುವನ್ನು ಕಸಿದುಕೊಂಡರು. ಅದರಲ್ಲಿಯೂ ಕೊನೆಯ ಎಸೆತದಲ್ಲಿ ದಿನೇಶ್‌ ಕಾರ್ತಿಕ್‌ ಸಿಕ್ಸರ್‌ ಬಾರಿಸಿದ್ದು, ಕ್ರೀಡಾಭಿಮಾನಿಗಳಿಗೆ ಮರೆಯಲಾಗದ ಕ್ಷಣ. ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಅಭಿಮಾನಿಗಳು ನಾಗಿಣಿ ನೃತ್ಯ ಪ್ರದರ್ಶಿಸಿದ್ದಾರೆ. ಇದನ್ನು ನೋಡಿದ ಬಾಂಗ್ಲಾ ಕ್ರಿಕೆಟಿಗರು ಮತ್ತು ಬಾಂಗ್ಲಾ ಅಭಿಮಾನಿಗಳು ನಿರಾಶರಾಗಿದ್ದಾರೆ. ಅದರಲ್ಲಿಯೂ ಭಾರತ ತಂಡವನ್ನು ಪ್ರೋತ್ಸಾಹಿಸಿದ ಶ್ರೀಲಂಕಾ ಅಭಿಮಾನಿಗಳ ನೃತ್ಯ ಗಮನ ಸೆಳೆಯಿತು. ಯಾಕೆಂದರೆ, ಲಂಕಾ ವಿರುದ್ಧ ಗೆದ್ದಾಗ ಬಾಂಗ್ಲಾ ನಾಗಿಣಿ ನೃತ್ಯ ಮಾಡಿತ್ತು. ಹೀಗಾಗಿ ಲಂಕಾ ಪ್ರೇಕ್ಷಕರು ಫೈನಲ್‌ನಲ್ಲಿ ಬಾಂಗ್ಲಾ ಸೋತಾಗ ನಾಗಿಣಿ ನೃತ್ಯ ಮಾಡಿ ಕೋಪ ತೀರಿಸಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next