Advertisement
ಜಿಲ್ಲೆಯ ರಾಜಕಾರಣಕ್ಕೆ ಹೊಸಬರಾಗಿರುವ ಎಚ್.ನಾಗೇಶ್ ಕೇವಲ ಒಂದೇ ತಿಂಗಳಿನಲ್ಲಿ ಶಾಸಕರಾಗಿ ಆಯ್ಕೆಯಾಗಿಬಿಟ್ಟಿದ್ದರು. ಆದರೆ, ಶಾಸಕರಾಗಿ ಆಯ್ಕೆಯಾದಾಗಿನಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಎಚ್.ನಾಗೇಶ್ ತುಳಿದಿರುವ ದಾರಿ ರಾಜಕೀಯವಾಗಿ ವಿವಾದಕ್ಕೆ ಕಾರಣವಾಗಿದೆ.
Related Articles
Advertisement
ಬಿಜೆಪಿ ಪಾಳೆಯಕ್ಕೆ: ಮಂತ್ರಿ ಸ್ಥಾನ ಸಿಗಲಿಲ್ಲವೆಂದು ಅಸಮಾಧಾನಗೊಂಡಿದ್ದ ಎಚ್.ನಾಗೇಶ್, ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡು ಮುಂಬೈ ಹಾರಿಬಿಟ್ಟಿದ್ದರು. ಆದರೆ, ಆಪರೇಷನ್ ವಿಫಲವಾಗಿದ್ದರಿಂದ ಎಚ್.ನಾಗೇಶ್ ಮತ್ತೆ ವಾಪಸ್ಸಾಗಿದ್ದರು. ಪುನಃ ಹಳೆ ಗಂಡನ ಪಾದವೇ ಗತಿ ಎಂಬಂತೆ ಮೈತ್ರಿ ಸರ್ಕಾರಕ್ಕೆ ಬೆಂಬಲ ವ್ಕಕ್ತಪಡಿಸಿದ್ದರು. ಹಲವು ತಿಂಗಳುಗಳು ಕಾದರೂ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದರೆ, ತೀರಾ ಇತ್ತೀಚಿಗೆ ಎಚ್.ನಾಗೇಶ್ ಜೆಡಿಎಸ್ ಕೋಟಾದಲ್ಲಿ ಮಂತ್ರಿಯಾದರು. ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಬಹಿರಂಗವಾಗಿಯೇ ವಿರೋಧಿಸಿದ್ದರು. ಜಿಲ್ಲೆಯ ಇತರೇ ರಾಜಕಾರಣಿಗಳು ಮತ್ತು ಜನತೆಯಿಂದ ಎಚ್.ನಾಗೇಶ್‌ಗೆ ಅಭೂತ ಪೂರ್ವ ಸ್ವಾಗತವೇನು ಸಿಗಲಿಲ್ಲ. ಮಂತ್ರಿಯಾಗಿ 15 ದಿನ ಕಾದ ನಂತರ ವಾರದ ಹಿಂದಷ್ಟೇ ಸಣ್ಣ ಕೈಗಾರಿಕೆ ಸಚಿವರಾಗಿ ಅಧಿಕಾರ ಸ್ಪೀಕರಿಸಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಸ್ವ ಕ್ಷೇತ್ರದಲ್ಲಿ ಸನ್ಮಾನವನ್ನು ಏರ್ಪಡಿಸಿಕೊಂಡಿದ್ದರು.
ಮತ್ತೆ ವಿದಾಯ: ಇದೀಗ ಅನಿರೀಕ್ಷಿತ ಬೆಳವಣಿಗೆಯಲ್ಲಿ ಎಚ್.ನಾಗೇಶ್ ಸಚಿವ ಸ್ಥಾನಕ್ಕೆ ರಾಜ್ಯಪಾಲರ ಮೂಲಕ ರಾಜೀನಾಮೆ ನೀಡಿ, ವಿಶೇಷ ವಿಮಾನದಲ್ಲಿ ಮುಂಬೈ ತೆರಳಿ ಅತೃಪ್ತರ ಬಣವನ್ನು ಸೇರ್ಪಡೆಯಾಗಿದ್ದಾರೆ. ಎಚ್.ನಾಗೇಶ್‌ರ ಈ ದಿಢೀರ್ ನಿರ್ಧಾರಗಳು ಕೋಲಾರ ರಾಜಕಾರಣದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮುಳಬಾಗಿಲು ಕ್ಷೇತ್ರ ಸೇರಿದಂತೆ ಜಿಲ್ಲೆಯ ಜನತೆ ಎಚ್.ನಾಗೇಶ್‌ರ ರಾಜಕೀಯ ನಿಲುವುಗಳಿಗೆ ಬೇಸತ್ತಿದ್ದಾರೆ. ಇಂತವರ ಆಯ್ಕೆಗೆ ಕಾರಣಕರ್ತರಾದವರ ಮೇಲೂ ಕಿಡಿಕಾರುತ್ತಿರುವುದು ಕಂಡು ಬರುತ್ತಿದೆ. ರಿಯಲ್ ಎಸ್ಟೇಟ್ ಹಿನ್ನೆಲೆ, ಹಣದ ಥೈಲಿ ತಂದವರನ್ನು ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯ ಮುಖಂಡರು ಒಪ್ಪಿಕೊಂಡು ಆಯ್ಕೆ ಮಾಡಿಕೊಂಡರೆ ಇಂತದ್ದೇ ಪರಿಸ್ಥಿತಿ ನಿರ್ಮಾಣವಾಗುತ್ತದೆಯೆಂದು ಟೀಕಿಸುತ್ತಿದ್ದಾರೆ.
ಎಚ್.ನಾಗೇಶ್‌ರ ರಾಜಕೀಯ ಮೇಲಾಟವು ಅವರನ್ನು ಆಯ್ಕೆ ಮಾಡಿದ ಮತದಾರರಿಗೂ, ಪ್ರಜಾಪ್ರಭುತ್ವಕ್ಕೂ ಕಳಂಕ ತರುವಂತಾಗಿದೆಯೆಂಬ ಟೀಕೆ ಜಿಲ್ಲಾದ್ಯಂತ ಸಾರ್ವತ್ರಿಕವಾಗಿ ವ್ಯಕ್ತವಾಗುತ್ತಿದೆ.
● ಕೆ.ಎಸ್.ಗಣೇಶ್