ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ನಾಗೇಂದ್ರಪ್ರಸಾದ್ ಅವಿರೋಧ ಆಯ್ಕೆಯಾಗಿದ್ದಾರೆ. ಭಾನುವಾರ ಸಂಘದ ಕಚೇರಿಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಮಧ್ಯಾಹ್ನ ಚುನಾವಣೆ ನಡೆಸಬೇಕು ಎಂದು ಮಾತುಕತೆ ನಡೆದಿತ್ತು. ಆದರೆ, ಪದಾಧಿಕಾರಿಗಳು ಹಾಗೂ ಸಮಿತಿ ಸದಸ್ಯರ ಒಮ್ಮತದ ತೀರ್ಮಾನದ ಮೇರೆಗೆ ನಾಗೇಂದ್ರಪ್ರಸಾದ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ನಾಗೇಂದ್ರಪ್ರಸಾದ್ ಈ ಹಿಂದೆ ಸಂಘದಲ್ಲಿ ಎರಡು ಅವಧಿಗೆ ಕಾರ್ಯದರ್ಶಿ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಈಗ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಾಗೇಂದ್ರಪ್ರಸಾದ್, ಒಂದು ವರ್ಷದ ಅವಧಿಯಲ್ಲಿ ಅನೇಕ ಯೋಜನೆಗಳನ್ನು ರೂಪಿಸಲು ನಿರ್ಧರಿಸಿದ್ದಾರೆ.
ನಿರ್ದೇಶಕರ ಸಂಘಕ್ಕೆ ಸ್ವಂತ ಕಟ್ಟಡ ಮಾಡುವುದು, ಕಾನ್ಫಿಡಾ ಶಾಲೆಯನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವುದು, ಹಿರಿಯ ನಿರ್ದೇಶಕರಿಗೆ ಆರ್ಥಿಕ ಭದ್ರತೆ ಒದಗಿಸುವುದು, ಹೊಸ ನಿರ್ದೇಶಕರಿಗೆ ಇನ್ನಷ್ಟು ಪ್ರೋತ್ಸಾಹ ನೀಡುವುದು ಸೇರಿದಂತೆ ಹೊಸ ಯೋಜನೆ ರೂಪಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಅಂದಹಾಗೆ, ನಾಗೇಂದ್ರ ಪ್ರಸಾದ್ ನೇತೃತ್ವದ ಸಂಘಕ್ಕೆ ನೂತನ ಪದಾಧಿಕಾರಿಗಳನ್ನೂ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ.
ಉಪಾಧ್ಯಕ್ಷರಾಗಿ ಜೋಸೈಮನ್, ಮುರಳಿ ಮೋಹನ್, ಕಾರ್ಯದರ್ಶಿಗಳಾಗಿ ದಯಾಳ್ ಪದ್ಮನಾಭ, ಸುನೀಲ್ ಪುರಾಣಿಕ್, ಖಜಾಂಚಿಯಾಗಿ ಕೆ.ಎನ್.ವೈದ್ಯನಾಥ್ ಆಯ್ಕೆಯಾದರೆ, ಸಮಿತಿಯಲ್ಲಿ ಚಂದ್ರಹಾಸ್, ಮುಸ್ಸಂಜೆ ಮಹೇಶ್, ಶಿವಕುಮಾರ್, ಶಾಂತಕುಮಾರ್, ಗುರುಪ್ರಸಾದ್, ಅನಂತ್‌ರಾಜು, ಮಳವಳ್ಳಿ ಸಾಯಿಕೃಷ್ಣ, ಬೂದಾಳ್ ಕೃಷ್ಣಮೂರ್ತಿ, ರಿಚರ್ಡ್ ಕ್ಯಾಸ್ಟಲಿನೋ ಇದ್ದಾರೆ.