Advertisement
ಬುಧವಾರ ನಾಗೇಂದ್ರ ಹಾಗೂ ದದ್ದಲ್ ನಿವಾಸಗಳಲ್ಲಿ ಶೋಧ ನಡೆಸಿದ್ದ ಇ.ಡಿ. ಗುರುವಾರವೂ ಮುಂದುವರಿಸಿತು. ಇಬ್ಬರನ್ನೂ 6 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿದ್ದು, ಪ್ರಶ್ನೆಗಳ ಸುರಿಮಳೆ ಹರಿಸಿದೆ. ನಾಗೇಂದ್ರ ಹಾಗೂ ದದ್ದಲ್ ಹಗರಣದಲ್ಲಿ ಶಾಮೀಲಾಗಿರುವುದಕ್ಕೆ ಇನ್ನಷ್ಟು ಸಾಕ್ಷ್ಯಕ್ಕಾಗಿ ಇ.ಡಿ. ತಡಕಾಡುತ್ತಿದೆ. ನಾಗೇಂದ್ರ ಅವರ ಪಿ.ಎ. ಹರೀಶ್ ಹಾಗೂ ಮತ್ತೋರ್ವ ಆಪ್ತ, ದದ್ದಲ್ ಆಪ್ತ ಪಂಪಣ್ಣ ಹಾಗೂ ದದ್ದಲ್ ಬಾವಮೈದುನನ್ನು ಗುರುವಾರ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. ಅವರ ಮೂಲಕವೇ ದದ್ದಲ್ ಹಾಗೂ ನಾಗೇಂದ್ರ ಹಗರಣದ ವ್ಯವಹಾರ ಕುದುರಿಸಿರುವ ಶಂಕೆ ವ್ಯಕ್ತವಾಗಿದೆ.
ವಾಲ್ಮೀಕಿ ನಿಗಮಕ್ಕೆ ಸೇರಿದ ದುಡ್ಡು ಅಕ್ರಮವಾಗಿ ಆಂಧ್ರದ ಫಸ್ಟ್ ಫೈನಾನ್ಸ್ ಸೊಸೈಟಿಗೆ ವರ್ಗವಾಗಿದೆ. ಅಲ್ಲಿಂದ ಐಟಿ ಕಂಪೆನಿ, ಸೆಕ್ಯೂರಿಟಿ ಏಜೆನ್ಸಿ, ಡಿಟೆಕ್ಟಿವ್ ಕಂಪೆನಿ, ಚಿನ್ನದಂಗಡಿ, ಬಾರ್, ಖಾಸಗಿ ವ್ಯಕ್ತಿಗಳ ಖಾತೆ ಸೇರಿದಂತೆ ಒಟ್ಟಾರೆ 200 ಖಾತೆಗಳಿಗೆ ತಲಾ 10ರಿಂದ 20 ಲಕ್ಷ ರೂ. ವರೆಗೆ ವರ್ಗಾವಣೆ ಮಾಡಲಾಗಿದೆ. ಬ್ಯಾಂಕ್ ಸಿಬಂದಿಯನ್ನು ಮನೆಗೆ ಕರೆಸಿದ ಇ.ಡಿ.
ಮತ್ತಿಕೆರೆಯ ಐಸಿಐಸಿಐ ಬ್ಯಾಂಕ್‌ನಲ್ಲಿ ನಾಗೇಂದ್ರ ಖಾತೆ ಹೊಂದಿದ್ದರು ಎನ್ನಲಾಗಿದೆ.ಹೀಗಾಗಿ ಇ.ಡಿ.ಯ ಮತ್ತೊಂದು ತಂಡ 2 ವಾಹನಗಳಲ್ಲಿ ಬ್ಯಾಂಕ್ ಅಧಿಕಾರಿಗಳನ್ನೇ ನಾಗೇಂದ್ರ ಫ್ಲ್ಯಾಟ್‌ಗೆ ಕರೆತಂದಿತ್ತು. ಅವರ ಮೂಲಕ ಹಗರಣದಲ್ಲಿ ವರ್ಗ ಮಾಡಲಾದ ದುಡ್ಡು ನಾಗೇಂದ್ರ ಬ್ಯಾಂಕ್ ಖಾತೆಗೆ ಸಂದಾಯವಾಗಿದೆಯೇ ಎಂಬುದನ್ನು ಪರಿಶೀಲಿಸಿದೆ.
Related Articles
Advertisement
ನಾಗೇಂದ್ರಗೆ ಪ್ರಶ್ನೆಗಳ ಸುರಿಮಳೆಬೆಂಗಳೂರಿನ ಡಾಲರ್ಸ್ ಕಾಲನಿಯಲ್ಲಿರುವ ನಾಗೇಂದ್ರ ಫ್ಲ್ಯಾಟ್‌ನಲ್ಲಿ ಗುರುವಾರ ಮಾಜಿ ಸಚಿವರಿಗೆ ಹಗರಣಕ್ಕೆ ಸಂಬಂಧಿಸಿದಂತೆ ನೂರಾರು ಪ್ರಶ್ನೆಗಳನ್ನು ಕೇಳಿದ್ದಾರೆ. ವಾಲ್ಮೀಕಿ ನಿಗಮದಿಂದ 187 ಕೋಟಿ ರೂ. ವರ್ಗಾವಣೆಯಾಗಿರುವುದು ನಿಮ್ಮ ಗಮನಕ್ಕೆ ಬಂದಿರಲಿಲ್ಲವೇ? ನಿಮಗೆ ಅಧಿಕಾರಿಗಳು ಮಾಹಿತಿ ನೀಡಿರಲಿಲ್ಲವೇ? ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರ್ ಡೆತ್ ನೋಟ್‌ನಲ್ಲಿ ನಿಮ್ಮ ಹೆಸರನ್ನು ಬರೆದಿಟ್ಟಿದ್ದರಲ್ಲ ಇದಕ್ಕೆ ಏನು ಹೇಳುತ್ತೀರಿ? ನಿಮ್ಮ ಗಮನಕ್ಕೆ ಬಂದರೆ ಏಕೆ ದೂರು ನೀಡಲಿಲ್ಲ ಎಂದು ಅಧಿಕಾರಿಗಳು ಪ್ರಶ್ನೆಗಳನ್ನು ಇಟ್ಟಿದ್ದರು. ಆದರೆ ನಾಗೇಂದ್ರ ಇದ್ಯಾವುದಕ್ಕೂ ಸಮರ್ಪಕವಾದ ಉತ್ತರ ನೀಡದೇ ಹಾರಿಕೆಯ ಮಾತುಗಳನ್ನು ಹೇಳಿ ಸುಮ್ಮನಾಗಿದ್ದಾರೆಂದು ತಿಳಿದು ಬಂದಿದೆ. ದದ್ದಲ್ ಗೂ ಬಿಸಿ
ಯಲಹಂಕದಲ್ಲಿರುವ ಶಾಸಕ ಬಸವನಗೌಡ ದದ್ದಲ್ ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ನಿಗಮಕ್ಕೆ ಸಂಬಂಧಿಸಿದ ದಾಖಲೆಗಾಗಿ ಇಂಚಿಂಚೂ ಹುಡುಕಿದ್ದಾರೆ. ಬಂಧಿತ ಆರೊಪಿ ಸತ್ಯನಾರಾಯಣ ವರ್ಮನಿಂದ ಶೇಷಾದ್ರಿಪುರ ಸ್ಲಂ ಬೋರ್ಡ್ ಬಳಿ ಬಸವನಗೌಡ ದದ್ದಲ್ ಆಪ್ತ ಪಂಪಣ್ಣ ನಿಗಮಕ್ಕೆ ಸಂಬಂಧಿಸಿದ 55 ಲಕ್ಷ ರೂ. ಪಡೆದಿದ್ದ ಎನ್ನಲಾಗಿದೆ. ಸತ್ಯನಾರಾಯಣ ವರ್ಮಾನನ್ನು ಇ.ಡಿ. ಈ ಹಿಂದೆ ವಿಚಾರಣೆ ನಡೆಸಿದ್ದ ಸಂದರ್ಭದಲ್ಲಿ ಆತ ಈ ವಿಚಾರವನ್ನು ಬಾಯ್ಬಿಟ್ಟಿದ್ದ. ಇದೀಗ ಅಧಿಕಾರಿಗಳು ಈ ಬಗ್ಗೆ ದದ್ದಲ್‌ಗೆ ಪ್ರಶ್ನಿಸಿದ್ದಾರೆ. ಆದರೆ ದದ್ದಲ್ ತನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನನ್ನ ಪಿ.ಎ. ಬಳಿಯೇ ಕೇಳಿ. ನಾನು ಹಗರಣದಲ್ಲಿ ಶಾಮೀಲಾಗಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ ಪಂಪಣ್ಣನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಇ.ಡಿ. ಅಧಿಕಾರಿಗಳು ನಿಗಮದ ದುಡ್ಡು ಪಡೆದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ.