ಬೆಂಗಳೂರು: ನಾಗಸಂದ್ರ ಮೆಟ್ರೋ ನಿಲ್ದಾಣದ ಎದುರು ರಸ್ತೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು ಹಾಡಹಗಲೇ ದುಷ್ಕರ್ಮಿಗಳು, ಜನರನ್ನು ಬೆದರಿಸಿ ಸುಲಿಗೆ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿವೆ.
ನಾಗಸಂದ್ರ ಮೆಟ್ರೋ ರೈಲು ಇಳಿದು ಎದುರಿನ ತುಮಕೂರು ಕಡೆ ಹೋಗುವ ರಸ್ತೆಯಲ್ಲಿ ಪ್ರಯಾಣಿಕರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಒಂದೇ ತಿಂಗಳಲ್ಲಿ 5-6 ಪ್ರಕರಣಗಳು ನಡೆದಿದ್ದು ಸ್ವತಃ ಮೆಟ್ರೋ ಸಿಬ್ಬಂದಿ ಕಳ್ಳರ ದಾಳಿಗೆ ಸಿಲುಕಿರುವುದು ತಡವಾಗಿ ಬೆಳಕಿಗೆ ಬಂದಿದೆ.
“ಕೆ.ಆರ್.ಮಾರುಕಟ್ಟೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಎಂಆರ್‌ಸಿ ಸಿಬ್ಬಂದಿ ಕೆಲಸ ಮುಗಿಸಿ ರೆಡ್ಡಿಕಟ್ಟೆಯಲ್ಲಿರುವ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅಳುತ್ತ ಮೆಟ್ರೋ ನಿಲ್ದಾಣದ ಕಡೆಗೆ ವಾಪಸ್ ಬಂದ ಸಿಬ್ಬಂದಿಯನ್ನು ಆಟೋದಲ್ಲಿ ರೆಡ್ಡಿಕಟ್ಟೆಗೆ ಬಿಟ್ಟುಬಂದೆ’ ಎಂದು ನಾಗಸಂದ್ರ ನಿಲ್ದಾಣದ ಬಳಿಯ ಆಟೋ ಚಾಲಕ ನರಸಿಂಹಮೂರ್ತಿ “ಉದಯವಾಣಿ’ಗೆ ಮಾಹಿತಿ ನೀಡಿದರು.
ಇದಾದ ವಾರದಲ್ಲಿ ಮತ್ತೆ ಎಲೆಕ್ಟ್ರಾನಿಕ್ ಸಿಟಿಯ ಇಬ್ಬರು ಯುವಕರು ಅದೇ ರಸ್ತೆಯಿಂದ ಮೆಟ್ರೋ ನಿಲ್ದಾಣದತ್ತ ಗಾಬರಿಯಾಗಿ ಓಡಿ ಬಂದರು. ನಿಲ್ದಾಣದ ಬಳಿ ಇದ್ದ ಆಟೋ ಚಾಲಕರೆಲ್ಲಾ ವಿಚಾರಿಸಿದಾಗ, ದುಷ್ಕರ್ಮಿಗಳು ಮೊಬೈಲ್ ಕಿತ್ತುಕೊಂಡರು. ಹಣ ಸುಲಿಗೆ ಮಾಡಲು ಮುಂದಾದರು.
ನಿರಾಕರಿಸಿದಾಗ, ಲಾಂಗ್‌ನಿಂದ ಹಲ್ಲೆಗೆ ಮುಂದಾದರು ಎಂದು ಅಲವತ್ತುಕೊಂಡರು. ನಂತರ ಈ ಸಂಬಂಧ ಬಾಗಲಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದಾಗಿಯೂ ಹೇಳಿದರು. ಆ ಮೇಲೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಬೆಳೆಸಿದರು ಎಂದು ನರಸಿಂಹಮೂರ್ತಿ ವಿವರಿಸಿದರು.
ಹಾಡಹಗಲೇ ಕಳ್ಳತನ: ಇಷ್ಟೇ ಅಲ್ಲ, ಮಧ್ಯಾಹ್ನ 2ರ ಸುಮಾರಿಗೆ ತನ್ನ ಕಣ್ಮುಂದೆಯೇ ಕಿವಿಯಲ್ಲಿ ಇಯರ್ ಫೋನ್ ಹಾಕಿ ಹಾಡು ಕೇಳುತ್ತಾ ಹೋಗುತ್ತಿದ್ದ ಒಬ್ಬ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ಹೋದರು. ಕೇವಲ ತಿಂಗಳಲ್ಲಿ 3 ಪ್ರಕರಣಗಳು ತನ್ನ ಗಮನಕ್ಕೆ ಬಂದಿವೆ ಎಂದು ಮತ್ತೂಬ್ಬ ಆಟೋ ಚಾಲಕ ಕೃಷ್ಣ ಹೇಳಿದರು.
ಮೆಟ್ರೋ ನಿಲ್ದಾಣದ ಎದುರು ವಿನಾಯಕನಗರ ಮತ್ತಿತರ ವಸತಿ ಪ್ರದೇಶಗಳಿವೆ. ಕಾರ್ಲೆ ಗಾರ್ಮೆಂಟ್ ಫ್ಯಾಕ್ಟರಿ ಕಾರ್ಮಿಕರೂ ವಾಸವಿದ್ದಾರೆ. ಆದರೆ, ಪೊಲೀಸರ ಭಯ ಇಲ್ಲ. ಪಲ್ಸರ್‌ನಲ್ಲಿ ಬಂದಿದ್ದ ಇಬ್ಬರು ಅನಾಯಾಸವಾಗಿ ವ್ಯಕ್ತಿಯ ಮೊಬೈಲ್ ಕಿತ್ತು ಪರಾರಿಯಾದರು. ಆ ಬೈಕ್‌ಗೆ ನಂಬರ್ ಪ್ಲೇಟ್ ಇರಲಿಲ್ಲ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ಪ್ರತ್ಯಕ್ಷದರ್ಶಿ ವಿನಾಯಕ ತಿಳಿಸಿದ್ದಾರೆ.