Advertisement

ಘಾಟಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಾಗರಪಂಚಮಿ ಆಚರಣೆ

08:57 PM Aug 05, 2019 | Lakshmi GovindaRaj |

ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಹಬ್ಬಗಳ ಸಾಲಿನ ಮೊದಲ ಹಬ್ಬ ನಾಗರಪಂಚಮಿಯನ್ನು ತಾಲೂಕಿನಲ್ಲಿ ಸಂಭ್ರಮ-ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜನಪದರಲ್ಲಿ ಅಣ್ಣ ತಂಗಿಯರ ಬಾಂಧವ್ಯದ ಬೆಸುಗೆಯಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ನಾಗಪೂಜೆ ಪ್ರಮುಖವಾಗಿದೆ. ಈ ದಿನದಂದು ನಾಗರಕಲ್ಲುಗಳಿಗೆ, ಹುತ್ತಗಳಿಗೆ ಪೂಜೆ ಸಲ್ಲಿಸಿ ಮನೆಯಲ್ಲಿ ಸಿಹಿಯೂಟ ಮಾಡುವ ಮೂಲಕ ಆಚರಿಸಲಾಗುತ್ತದೆ.

Advertisement

ಭಾನುವಾರವಷ್ಟೇ ನಾಗರ ಚೌತಿ ಆಚರಿಸಲಾಯಿತು. ಮದುವೆಯಾದ ನವ ದಂಪತಿಗಳು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ಮಹಿಳೆಯರು ನಾಗ ಪ್ರತಿಷ್ಠಾಪನೆಯಾಗಿರುವ ದೇವಾಲಯಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲೆರೆದು ಪೂಜೆ ಸಲ್ಲಿಸಿದರು. ತಾಲೂಕಿನ ಘಾಟಿ ಪುಣ್ಯಕ್ಷೇತ್ರದಲ್ಲಿನ ನಾಗರಕಲ್ಲುಗಳಿಗೆ ಸಹಸ್ರಾರು ಭಕ್ತಾದಿಗಳು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ಸಹಸ್ರಾರು ಭಕ್ತರು ದೇವಾಲಯದಲ್ಲಿ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ನಾಗರಪಂಚಮಿ ವಿಶೇಷವಾಗಿ ಸುಬ್ರಹ್ಮಣ್ಯ ಸ್ವಾಮಿಯ ರಾಜಬೀದಿ ಉತ್ಸವ ನಡೆಯಿತು.

ನಾಗರ ಕಲ್ಲುಗಳನ್ನು ಪೂಜಿಸುವುದರಿಂದ ನಾಗದೋಷದಿಂದ ಉಂಟಾಗುವ ಎಲ್ಲಾ ಸಮಸ್ಯೆ ಬಗೆ ಹರಿಯುತ್ತದೆ. ಶ್ರೀಘಾಟಿ ಸುಬ್ರಹ್ಮಣ್ಯ ಕ್ಷೇತ್ರ ದೇವಸ್ಥಾನ ನಾಗದೋಷಗಳಿಗೆ ಹೆಸರವಾಸಿ ಪುಣ್ಯಕ್ಷೇತ್ರ. ಇಲ್ಲಿ ಮಕ್ಕಳ ದೋಷ. ಸ್ತ್ರೀ ದೋಷಗಳಿದ್ದರೆ ಇಲ್ಲಿ ಬಂದು ನಾಗರಕಲ್ಲುಗಳಿಗೆ 5 ವಾರ ಪೂಜೆ ಸಲ್ಲಿಸಿದರೆ ದೋಷ ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ನಿಧಿ ಹೇಳುತ್ತಾರೆ.

ನಗರದ ನೆಲದಾಂಜನೇಯಸ್ವಾಮಿ ದೇವಾಲಯ ಮೊದಲಾಗಿ, ಕೆರೆಕಟ್ಟೆ ನಾಗರಕಲ್ಲುಗಳು ಹಾಗೂ ವಿವಿಧ ದೇವಾಲಯದಲ್ಲಿನ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮದುವೆಯಾದ ಹೆಣ್ಣುಮಕ್ಕಳನ್ನು ತವರು ಮನೆಗೆ ಕರೆಸಿಕೊಂಡು ಅವರಿಗೆ ಉಡಿ ತುಂಬುವುದು, ಅವರು ತಮ್ಮ ತವರು ಮನೆಗೆ ಒಳಿತಾಗಲಿ ಎಂದು ಹಾರೈಸುವುದು. ವರ್ಷ ಪೂರ್ತಿ ಕೆಲಸ ಮಾಡುವ ರೈತಾಪಿ ಜನರಿಗೆ ಹಾವು ಕಚ್ಚಬಾರದು ಎನ್ನುವ ನಂಬಿಕೆಯಿಂದ ಹಾಲು ಎರೆದು ಪೂಜಿಸುವುದು ಹಬ್ಬದ ವಿಶೇಷತೆ.

Advertisement

Udayavani is now on Telegram. Click here to join our channel and stay updated with the latest news.

Next