ನಾನು ಬರುವುದನ್ನು ಕೊಂಚ ತಡ ಮಾಡಿದ್ದರೆ, ನೆರೆದಿದ್ದ ಯುವಕರ ಬಡಿಗೆಗಳಿಗೆ ನಾಗರಹಾವು ಬಲಿಯಾಗುತ್ತಿತ್ತು. ತಕ್ಷಣ ಅವರನ್ನೆಲ್ಲ ತಡೆದು, ಕ್ಷೇಮವಾಗಿ ಅದನ್ನು ಹಿಡಿಸಿ ಕಾಡಿಗೆ ಬಿಟ್ಟ ಪ್ರಕ್ರಿಯೆ ಎಲ್ಲರ ದೃಷ್ಟಿಯಲ್ಲಿ ಸ್ತುತ್ಯಾರ್ಹವೆನಿಸಿತ್ತು! ಹಲವು ತಿಂಗಳುಗಳ ಕಾಲ ಮನೆಯವರು, ಊರವರು ನನ್ನನ್ನು ಹೊಗಳಿದ್ದೇ ಹೊಗಳಿದ್ದು. ನಾನು ಅದನ್ನು ಕೇಳಿಸಿಕೊಂಡು ಮಹದಾನಂದ ಪಟ್ಟಿದ್ದೇ ಪಟ್ಟಿದ್ದು.
ಇದು ಬಹಳ ಹಿಂದಿನ ಘಟನೆ. ನನ್ನದು ಹರಪನಹಳ್ಳಿಯಲ್ಲಿ ಪುಟ್ಟದೊಂದು ಹೋಟೆಲ್ ಇತ್ತು. ಉದ್ಯಮ ಕೈಹಿಡಿದು ಅನ್ನಕ್ಕೆ ದಾರಿಯಾಗಿತ್ತು. ಒಂದು ದಿನ ಸಂಜೆ 5ರ ಸಮಯ. ಹೋಟೆಲ್ ಹಿಂದೆ ಪುಟ್ಟ ತೋಟ. ಒಮ್ಮೆಲೇ ಚೀತ್ಕಾರ ಕೇಳ ತೊಡಗಿತು. ನೋಡಿದರೆ, ಗಿಡದ ಬುಡವೊಂದರಲ್ಲಿ ನಾಗರಹಾವು ಪ್ರತ್ಯಕ್ಷವಾಗಿತ್ತು. ಕೆಲಸಗಾರರಾಗಲೇ ಜಮಾಯಿಸಿದ್ದರು. ಕೂಡಲೇ ಮ್ಯಾನೇಜರ್‌ರನ್ನು ಕರೆದು ಗಲ್ಲಾಪೆಟ್ಟಿಗೆಯ ಮೇಲೆ ಕೂರಿಸಿ, ಒಂದೇ ಧಾವಂತದಿಂದ ನಾನೂ ಅಲ್ಲಿಗೆ ಓಡಿದೆ. ನೋಡಿದರೆ, ಆರಡಿ ಉದ್ದದ ನಾಗರಹಾವು, ಹೆಡೆ ಎತ್ತಿ ಕೋಪದಿಂದ ಭುಸ್ ಭುಸ್ ಎನ್ನುತ್ತಿದೆ.
ಒಂದಷ್ಟು ಪಡ್ಡೆಗಳು ಕೈಯಲ್ಲಿ ಕೋಲು, ಕಲ್ಲುಗಳನ್ನು ಹಿಡಿದು ಅದನ್ನು ಕೊಲ್ಲಲು ಸಿದ್ಧರಾಗಿದ್ದರು. ಅವರನ್ನೆಲ್ಲ ತಕ್ಷಣ ತಡೆದೆ. ಮೊದಲೇ ನಾನು ದಕ್ಷಿಣ ಕನ್ನಡದವನು. ನಾಗಮಂಡಲ ಮಾಡುವ, ಜೀವಂತ ನಾಗರಕ್ಕೇ ಹಾಲೆರೆಯುವ ಜನ ನಾವು. ಹಾಗಾಗಿ, “ಯಾರೂ ಹಾವನ್ನು ಕೊಲ್ಲಕೂಡದು. ನಮ್ಮ ಸ್ಥಳದಲ್ಲಿ ಬಂದಿದೆ. ಅದಕ್ಕೆ ನಾನು ಜವಾಬ್ದಾರ’ ಎಂದು ಕೋಲು, ಕಲ್ಲು ಹಿಡಿದು ಸಿದ್ಧರಾಗಿದ್ದವರೆನ್ನೆಲ್ಲ ದೂರ ಸರಿಸಿದೆ. ಅಷ್ಟರಲ್ಲಾಗಲೇ ಹಾವು ಪಕ್ಕದ ಕಲ್ಲಿನ ರಾಶಿ ಒಳಕ್ಕೆ ಹೊಕ್ಕಿತ್ತು. ಈಗೇನು ಮಾಡುವುದು? ಹಾವನ್ನು ಬಿಡುವಂತಿಲ್ಲ, ಹಿಡಿದು ಕಾಡಿಗೆ ಬಿಡಲೇಬೇಕು, ಇಲ್ಲದಿದ್ದರೆ ಅಲ್ಲಿ ಓಡಾಡುವವರಿಗೆಲ್ಲ ಜೀವ ಭಯದಿಂದ ನಿದ್ರೆಬಾರದು.
ಹೀಗಾದರೆ, ತಪ್ಪು ನನ್ನ ತಲೆಯ ಮೇಲೆ ಬೀಳುತ್ತದೆ. ಒಂದು ಪಕ್ಷ ಯಾರಿಗಾದರೂ ಕಚ್ಚಿ ಬಿಟ್ಟರೋ ಮುಗಿಯಿತು. ಈ ಮಾಣಿಯಿಂದಲೇ ಇವೆಲ್ಲ ಆಗಿದ್ದು ಅಂತ ಮೈಮೇಲೆ ಬೀಳುವುದರಲ್ಲಿ ಯಾವ ಅನುಮಾನವೂ ಇಲ್ಲ ಅನಿಸಿತು. ಒಳ್ಳೆ ಕೆಲಸ ಆಯ್ತಲ್ಲಪ್ಪಾ ಅಂತ ಯೋಚಿಸುತ್ತಿರುವಾಗಲೇ, ನಮ್ಮೂರಿನಲ್ಲಿ ಹಾವು ಹಿಡಿಯುವ ಕಪ್ಪೆ ನಿಂಗಪ್ಪನಿಗೆ ಬುಲಾವ್ ಹೋಗಿತ್ತು. ನಿಂಗಪ್ಪ ಬಂದವನೇ ಎಲ್ಲರನ್ನೂ ಬದಿಗೆ ಸರಿಸಿ, ಒಂದೊಂದೇ ಕಲ್ಲುಗಳನ್ನು ಪಕ್ಕಕ್ಕಿಡುತ್ತಾ, ಕೈ ಹಾಕಿದ. ಆ ಕಡೆ ಬಾಲಸಿಕ್ಕಿತು. ಕೊನೆಗೂ ಹಾವನ್ನು ಹಿಡಿದೇ ಬಿಟ್ಟ. ಹಾಗೆ ಹೀಗೆ ನೋಡುವಷ್ಟರಲ್ಲಿ ಅದರ ತಲೆಯನ್ನು ಎಡಗೈಯಲ್ಲಿ ಹಿಡಿದು ಬಾಯಿ ಅಗಲಿಸಿ, ಇಕ್ಕಳದಿಂದ ವಿಷದ ಹಲ್ಲುಗಳನ್ನು ನೆಲಕ್ಕೆ ಬೀಳಿಸಿದ.
ಒಂದೈದು ನಿಮಿಷ ಹಾವಿನ ಹೆಡೆಯೆತ್ತಿಸಿ ಆಟವಾಡಿಸಿದ. ಹಾವು ಹಿಡಿದಿದ್ದಕ್ಕಾಗಿ ಅವನಿಗೆ ಸಂಭಾವನೆ ಕೊಟ್ಟೆ. ಪಡೆದು, ಅದನ್ನು ಸಮೀಪದ ಅನಂತನಹಳ್ಳಿಯ ಕಾಡಿಗೆ ಬಿಡಲು ತೆಗೆದುಕೊಂಡು ಹೋದ. ನಾನು ಬರುವುದನ್ನು ಕೊಂಚ ತಡ ಮಾಡಿದ್ದರೆ, ನೆರೆದಿದ್ದ ಯುವಕರ ಬಡಿಗೆಗಳಿಗೆ ನಾಗರಹಾವು ಬಲಿಯಾಗುತ್ತಿತ್ತು. ತಕ್ಷಣ ಅವರನ್ನೆಲ್ಲ ತಡೆದು, ಕ್ಷೇಮವಾಗಿ ಅದನ್ನು ಹಿಡಿಸಿ ಕಾಡಿಗೆ ಬಿಟ್ಟ ಪ್ರಕ್ರಿಯೆ ಎಲ್ಲರ ದೃಷ್ಟಿಯಲ್ಲಿ ಸ್ತುತ್ಯಾರ್ಹವೆನಿಸಿತ್ತು! ಹಲವು ತಿಂಗಳುಗಳ ಕಾಲ ಮನೆಯವರು, ಊರವರು ನನ್ನನ್ನು ಹೊಗಳಿದ್ದೇ ಹೊಗಳಿದ್ದು. ನಾನು, ಅದನ್ನು ಕೇಳಿಸಿಕೊಂಡು ಮಹದಾನಂದ ಪಟ್ಟಿದ್ದೇ ಪಟ್ಟಿದ್ದು. ಈಗ ಎಲ್ಲಾದರೂ ನಾಗರಹಾವು ಕಂಡರೆ, ಈ ಹೊಗಳಿಕೆಗಳೆಲ್ಲ ಮತ್ತೂಮ್ಮೆ ಕಿವಿಯಲ್ಲಿ ಅನುರಣಿಸುತ್ತವೆ.
* ಕೆ.ಶ್ರೀನಿವಾಸರಾವ್