Advertisement

ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು

08:43 PM Jan 25, 2022 | Team Udayavani |

ಹುಣಸೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿಯ ಮೊದಲ ಹಂತದ ಮೂರು ದಿನಗಳ ಕಾಲ ದೊಡ್ಡ ಸಸ್ಯಹಾರಿ ಪ್ರಾಣಿಗಳ ಹಾಗೂ ಮಾಂಸಹಾರಿ ಸೈನ್ ಸರ್ವೆ ಅಂತ್ಯಗೊಂಡಿದ್ದು, ಸಿಬ್ಬಂದಿಗಳು, ಲದ್ದಿ, ಮಲ, ಹಿಕ್ಕೆಯನ್ನು ಸಂಗ್ರಹಿಸಿದರು, ಪ್ರಾಣಿಗಳ ಹೆಜ್ಜೆಗುರುತು, ಮರಪರಚಿರುವುದನ್ನು ಸಿಬ್ಬಂದಿಗಳು ಎಂ-ಸ್ಟ್ರೈಪ್ಸ್ ಎಕೊಲಾಜಿಕಲ್(ಆ್ಯಪ್) ಅಪ್ಲಿಕೇಷನ್‌ನಲ್ಲಿ ದಾಖಲಿಸಿದರು.

Advertisement

ಕಳೆದ ಮೂರು ದಿನ ಹಲವು ವಲಯಗಳಲ್ಲಿ ಹುಲಿ ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆ ಮತ್ತಿತರ ಪ್ರಾಣಿಗಳು ನೇರವಾಗಿ ಕಾಣಿಸಿಕೊಂಡಿದ್ದನ್ನು ಆಪ್‌ನಲ್ಲಿ ದಾಖಲಿಸಿದರು.

ಹುಲಿ ಪತ್ತೆ, ದಾಖಲು :
ಪ್ರಥಮ ಹಂತದ ಮೂರು ದಿನಗಳ ಕಾಲ ಗಣತಿಯಲ್ಲಿ ನಿತ್ಯ ಉದ್ಯಾನದ 91 ಬೀಟ್‌ಗಳಲ್ಲೂ 5ಕಿ.ಮೀ.ವರೆಗೆ ಮೂವರು ಅರಣ್ಯ ಸಿಬ್ಬಂದಿಗಳ ತಂಡ ಗಣತಿ ನಡೆಸಿದೆ. ಮತ್ತಿಗೋಡು ವಲಯದಲ್ಲಿ ಮಂಗಳವಾರದಂದು ಹುಲಿ ಜಿಂಕೆಯನ್ನು ಭೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿ ಸೋಮವಾರ-ಮಂಗಳವಾರ ಸಹ ಹುಲಿ ಗಣತಿದಾರರಿಗೆ ನೇರವಾಗಿ ಕಾಣಿಸಿಕೊಂಡಿದೆ. ಇದೇ ರೀತಿ ಗಣತಿ ಸಿಬ್ಬಂದಿಗಳಿಗೆ ನಾಗರಹೊಳೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಅಂತರಸಂತೆ, ಹುಣಸೂರು ವಲಯಗಳಲ್ಲಿ ಹುಲಿ ಕಾಣಿಸಿಕೊಂಡಿದ್ದರೆ, ವೀರನಹೊಸಹಳ್ಳಿ ವಲಯದಲ್ಲಿ ಜಾರ್‌ಗಲ್ – ತುಪ್ಪದಕೊಳ ಗಸ್ತಿನ ಅಂಚಿನಲ್ಲಿ ಹುಲಿ ಘರ್ಜಿಸಿರುವುದನ್ನು ಸಹ ದಾಖಲಿಸಿದ್ದಾರೆ. ಇದೇ ರೀತಿ ಎಲ್ಲ ವಲಯಗಳಲ್ಲೂ ಆನೆ, ಕಾಡೆಮ್ಮೆ ನೇರ ಕಾಣಿಸಿಕೊಂಡಿರುವುದನ್ನು ಆ್ಯಪ್ ನಲ್ಲಿ ದಾಖಲಿಸಿದ್ದಾರೆ.

ರಣಹದ್ದು ವೀಕ್ಷಣೆ : ಅಲ್ಲದೆ ರಣಹದ್ದುಗಳು ಮತ್ತು ಇತರೆ ಪಕ್ಷಿಗಳನ್ನು ವೀಕ್ಷಿಸಿ, ಅವುಗಳನ್ನು ಕೂಡ ದಾಖಲೆ ಮಾಡಿದ್ದಾರೆ.

ಲದ್ದಿ, ಹಿಕ್ಕೆ ಡೆಹರಾಡೂನ್‌ಗೆ ರವಾನೆ:
ಎಲ್ಲ ವಲಯಗಳಲ್ಲೂ ಹುಲಿ, ಆನೆ, ಕಾಡೆಮ್ಮೆ ಮತ್ತಿತರ ದೊಡ್ಡ ಸಸ್ಯಹಾರಿ ಪ್ರಾಣಿಗಳ ಮಲ, ಹಿಕ್ಕೆ ಹಾಗೂ ಲದ್ದಿಯನ್ನು ಆಪ್‌ನಲ್ಲಿ ದಾಖಲಿಸಿ ಡೆಹರಾಡೂನ್‌ನ ವೈಲ್ಡ್ ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸಲು ಸಂಗ್ರಹಿಸಿದರು. ಇನ್ನು ಅವುಗಳ ಹೆಜ್ಜೆ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆ್ಯಪ್ ನಲ್ಲಿ ದಾಖಲಿಸಿದರು.

Advertisement

ಜ.27 ರಿಂದ ಲೈನ್ ಟ್ರ್ಯಾಕ್ ಜಾಕ್ಟ್:
ಜ.27 ರಿಂದ ಫೆ.1 ರವರೆಗೆ 105 ಲೈನ್ ಟ್ರ್ಯಾಕ್ ಜಾಕ್ಟ್ ಮೂಲಕ ಎರಡು ಕಿ.ಮೀ.ವರೆಗೆ ಸಂಚರಿಸಿ ಹುಲಿಯ ಆಹಾರವಾದ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯಪ್ರಭೇಧಗಳ ಗಣತಿ ನಡೆಯಲಿದೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next