ಸತೀಶ್‌ದೇಪುರ
ಮೈಸೂರು: ಕೊರೊನಾ ಲಾಕ್‌ಡೌನ್ ತೆರವು ಮಾಡುತ್ತಿದ್ದಂತೆ ಪ್ರವಾಸಿಗರು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದು, ದಿನದಿಂದ ದಿನಕ್ಕೆ ಮೈಸೂರು ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ಕಳೆದ ಏ.26ರಿಂದ ಲಾಕ್‌ಡೌನ್ ಘೋಷಣೆಯಾದ ನಂತರ ಎಲ್ಲಾ ಪ್ರವಾಸಿ ಕೇಂದ್ರಗಳು ಬಂದ್ ಆಗಿದ್ದವು. ಬಳಿಕ ಜು.05ರಂದು ಅನ್‌ಲಾಕ್ ಘೋಷಣೆಯಾದ ಬೆನ್ನಲ್ಲೇ ನಗರದ ಮೃಗಾಲಯ, ಚಾಮುಂಡಿಬೆಟ್ಟ,ಅರಮನೆ,ಕೆ.ಆರ್. ಎಸ್ ಸೇರಿ ಹಲವು ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದಂಡು ಕಾಣಿಸಿಕೊಂಡಿದೆ. ಇತ್ತ ನಾಗರಹೊಳೆ ಮತ್ತು ಬಂಡೀಪುರ ರಾಷ್ಟ್ರಿಯ ಹುಲಿ ಸಂರಕ್ಷಿತ ಉದ್ಯಾನಗಳಲ್ಲೂ ಸಫಾರಿ ಪ್ರಿಯರ ಸಂಖ್ಯೆಯೂ ಹೆಚ್ಚಿದೆ.
ಪ್ರವಾಸಿಗರು ಹೆಚ್ಚಳ: ಪ್ರವಾಸಿಗರ ಸಂಖ್ಯೆ ವಾರದ ರಜಾದಿನಗಳಾದ ಶನಿವಾರ, ಭಾನುವಾರ ಹೆಚ್ಚಳ ಕಂಡಿದ್ದು, ಮೃಗಾಲಯಕ್ಕೆ ಎರಡೂ ದಿನ 3600 ಮಂದಿ ಭೇಟಿ ನೀಡಿದ್ದರೆ, ಅರಮನೆಗೆ 4368 ಮಂದಿ ಭೇಟಿ ನೀಡಿರುವುದು ವಿಶೇಷ.ಹೋಟೆಲ್, ಲಾಡ್ಜ್ಗಳಲ್ಲಿ ಕೊಠಡಿಗಳ ಕಾಯ್ದಿರಿಸುವಿಕೆಯ ಪ್ರಮಾಣವೂ ಹೆಚ್ಚಿದೆ.
ಜೆಎಲ್‌ಆರ್‌ಗೂ ಬೇಡಿಕೆ: ಲಾಕ್‌ಡೌನ್‌ನಿಂದ ಬೇಸತ್ತಿದ್ದ ಜನ ಪ್ರಕೃತಿ ಸೊಬಗನ್ನು ಆಸ್ವಾದಿಸಲು ಪ್ರವಾಸಿ ತಾಣಗಳತ್ತ ಮುಖ ಮಾಡಿದ್ದಾರೆ. ಪರಿಣಾಮ ಸರ್ಕಾರಿ ಹಾಗೂ ಖಾಸಗಿ ರೆಸಾರ್ಟ್‌ಗಳು ಹೌಸ್‌ಫುಲ್ ಆಗಿವೆ. ನಾಗರಹೊಳೆಯ ಕಬಿನಿ, ಬಂಡೀಪುರದ ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಸಂಸ್ಥೆಯ ರೆಸಾರ್ಟ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಾರಂತ್ಯ ಬುಕಿಂಗ್ ಬಹುತೇಕ ಪೂರ್ಣಗೊಂಡಿರುವುದು ವಿಶೇಷ.