Advertisement

Nagara Panchami Special; ಈ ಬಾರಿಯ ನಾಗರಪಂಚಮಿಗೆ ನೀವೇ ತಯಾರಿಸಿ ಅರಶಿನ ಎಲೆ ಕಡುಬು!

05:53 PM Aug 18, 2023 | ಶ್ರೀರಾಮ್ ನಾಯಕ್ |

ನಾಗರ ಪಂಚಮಿ ಹಿಂದೂಗಳ ಪವಿತ್ರ ಹಬ್ಬಗಳಲ್ಲಿಒಂದು. ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ನಾಗ ಪಂಚಮಿಯನ್ನು ಆಚರಿಸಲಾಗುತ್ತದೆ. ಈ ವರ್ಷ ನಾಗಪಂಚಮಿ ಆಗಸ್ಟ್ 21ರ ಸೋಮವಾರದಂದು ಬಂದಿದೆ.ಈ ಹಬ್ಬವನ್ನು ಭಾರತದ ವಿವಿಧ ಕಡೆಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

Advertisement

ಈ ದಿನ ನಾಗ ದೇವರಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗದೇವರಲ್ಲಿ ಬೇಡುವುದು ಹಿಂದಿನಿಂದಲೂ ಬಂದ ವಾಡಿಕೆ . ಇಂದಿಗೂ ಅದೇ ಪದ್ದತಿ ಆಚರಣೆಯನ್ನು ಮಾಡಲಾಗುತ್ತಿದೆ.

ಅಂದು ವಿಶೇಷವಾದ ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಲಾಗುತ್ತದೆ. ಕಡುಬು, ಲಡ್ಡು, ಪಂಚಕಜ್ಜಾಯ ಹೀಗೆ ಅನೇಕ ಬಗೆಯ ತಿನಿಸಿಗಳನ್ನು ಮಾಡಲಾಗುತ್ತದೆ.

ನಾಗರ ಪಂಚಮಿಯಂದು ಮಾಡುವ ವಿಶೇಷ ಭಕ್ಷ್ಯಗಳಲ್ಲಿ ಅರಶಿನ ಎಲೆಯಿಂದ ಮಾಡುವ ಕಡುಬು ಕೂಡಾ ಒಂದು. ಬನ್ನಿ ಹಾಗಾದರೆ ಈ ಬಾರಿಯ ನಾಗರ ಪಂಚಮಿಗೆ ನೀವು ಮನೆಯಲ್ಲಿ ಅರಶಿನ ಎಲೆ ಕಡುಬು ತಯಾರಿಸಿ..

ಅರಶಿನ ಎಲೆ ಕಡುಬು;

ಬೇಕಾಗುವ ಸಾಮಾಗ್ರಿಗಳು:

ಬೆಳ್ತಿಗೆ ಅಕ್ಕಿ -2 ಕಪ್‌ ,ಅರಶಿನ ಎಲೆ-20, ತೆಂಗಿನ ತುರಿ-1ಕಪ್‌, ಬೆಲ್ಲ-ಅರ್ಧ ಕಪ್‌, ಏಲಕ್ಕಿ 4ರಿಂದ5, ರುಚಿಗೆ ತಕ್ಕಷ್ಟು ಉಪ್ಪು.

Advertisement

ತಯಾರಿಸುವ ವಿಧಾನ:
-ಬೆಳ್ತಿಗೆ ಅಕ್ಕಿಯನ್ನು 2 ರಿಂದ 3 ಗಂಟೆಗಳ ಕಾಲ ನೆನೆ ಹಾಕಿರಿ . ನಂತರ ನೆನೆ ಹಾಕಿದ ಅಕ್ಕಿಯನ್ನು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ನಯವಾಗಿ ರುಬ್ಬಿಕೊಳ್ಳಿ . ರುಬ್ಬಿದ ಹಿಟ್ಟು ಜಾಸ್ತಿ ಗಟ್ಟಿಯೂ ಆಗದೇ ನೀರು ನೀರಾಗಿಯೂ ಇರದೆ ಹದವಾಗಿರಬೇಕು.

-ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನ ಕಾಯಿ, ಬೆಲ್ಲ ಹಾಕಿ ಬೆರೆಸಿ. ಆ ಮಿಶ್ರಣಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿರಿ.

-ಆಮೇಲೆ ತೊಳೆದು ಒರೆಸಿಟ್ಟಿರುವ ಅರಶಿನ ಎಲೆಗೆ ಅಕ್ಕಿ ಹಿಟ್ಟನ್ನು ಸವರಿ. ಅದರ ಮಧ್ಯೆ ಬೆಲ್ಲ ಹಾಗು ಕಾಯಿತುರಿ ಮಿಶ್ರಣವನ್ನು ಹರಡಿ ಎಲೆಯನ್ನು ಉದ್ದಕ್ಕೆ ಮಡಚಬೇಕು.

-ತದನಂತರ ಮಡಚಿದ ಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಸುಮಾರು 30 ನಿಮಿಷಗಳವರೆಗೆ ಹಬೆಯಲ್ಲಿ ಬೇಯಿಸಿದರೆ ರುಚಿಕರವಾದ ಅರಶಿನ ಎಲೆ ಕಡುಬು ಸವಿಯಲು ಸಿದ್ಧ.

-ಶ್ರೀರಾಮ್ ಜಿ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next