Advertisement
ಮಂಗಳೂರಿನ ಶ್ರೀ ಶರವು ಮಹಾಗಣಪತಿ, ಪಾಂಡೇಶ್ವರ ಶ್ರೀ ಮಹಾಲಿಂಗೇಶ್ವರ, ಶ್ರೀ ಮಂಗಳಾದೇವಿ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಕೆಮ್ಮಿಂಜೆ ಷಣ್ಮುಖ ಸುಬ್ರಹ್ಮಣ್ಯ, ಬಳ್ಳಮಂಜ ಅನಂತೇಶ್ವರ ಸ್ವಾಮಿ, ಈಶ್ವರ ಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯ, ನಳಿಳು ಸುಬ್ರಹ್ಮಣ್ಯ, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ, ಕೊಕ್ರಾಡಿ ಶಾಲಿಪು ಸುಬ್ರಹ್ಮಣ್ಯ ದೇವಸ್ಥಾನ, ಸುಳ್ಯದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ, ಯೇನೆಕಲ್ಲು ಶ್ರೀ ಶಂಖಪಾಲ ದೇಗುಲ, ಪಂಜ ಪೈಂದೋಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ದ.ಕ. ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ನಾಗರಪಂಚಮಿ ಆಚರಣೆ ಶ್ರದ್ಧಾಭಕ್ತಿಯಿಂದ ನಡೆಯಿತು.
ಕುಡುಪು ದೇವಸ್ಥಾನದಲ್ಲಿ ಸುಮಾರು 16,000ಕ್ಕೂ ಮಿಕ್ಕಿ ನಾಗ ತಂಬಿಲ ಮತ್ತಿತರ ಸೇವೆಗಳು ನಡೆದವು. ವಿವಿಧ ಕ್ಷೇತ್ರದ ನಾಗಸನ್ನಿಧಿಗಳಲ್ಲಿ ಶ್ರೀ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ, ಸೀಯಾಳಾಭಿಷೇಕ ನೆರವೇರಿತು. ಬಹುತೇಕ ಕ್ಷೇತ್ರಗಳಲ್ಲಿ, ಕುಟುಂಬದ ನಾಗಬನಗಳಲ್ಲಿ ಮಧ್ಯಾಹ್ನ ಭಕ್ತರಿಗೆ ವಿಶೇಷ ಅನ್ನಸಂತರ್ಪಣೆ ನಡೆಯಿತು.
ಉಡುಪಿ ಶ್ರೀಕೃಷ್ಣ ಮಠದಲ್ಲಿರುವ ವಾದಿರಾಜ ಪ್ರತಿಷ್ಠಾಪಿತ ಸುಬ್ರಹ್ಮಣ್ಯ ದೇವರ ಗುಡಿ (ತಕ್ಷಕ ಪೊಟರೆ), ನಾಲ್ದಿಕ್ಕುಗಳಲ್ಲಿರುವ ನಾಗಾಲಯ ಗಳಾದ ಮುಚ್ಲಕೋಡು, ಗೋಡು, ಮಾಂಗೋಡು, ಅರಿತೋಡು, ಪಡುಬಿದ್ರಿ ಬಳಿಯ ಸಾಂತೂರು, ಪಾದೆಬೆಟ್ಟು, ಕಾರ್ಕಳ ತಾಲೂಕು ಸೂಡ ಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಯಿತು. ಕುಂದಾಪುರ ತಾಲೂಕಿನ ಕಾಳಾವರ, ಉಳ್ಳೂರು, ತೆಕ್ಕಟ್ಟೆ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಶುಕ್ರವಾರ ಪೂಜೆ ನಡೆಸಲಾಗುತ್ತಿದೆ. ಶುಕ್ರವಾರ ಆಚರಣೆಯ ಕ್ಷೇತ್ರಗಳಲ್ಲಿಯೂ ಗುರುವಾರವೂ ಪೂಜೆ ಸಲ್ಲಿಸಲಾಯಿತು. ಇದಲ್ಲದೆ ಎಲ್ಲ ದೇವಾಲಯಗಳಲ್ಲಿರುವ ನಾಗನ ಬನಗಳಲ್ಲಿ ಪೂಜೆ ನಡೆಯಿತು. ಮಂಜೇಶ್ವರವೂ ಸೇರಿದಂತೆ ಕಾಸರಗೋಡು ಜಿಲ್ಲೆಯ ವಿವಿಧ ನಾಗನ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಿತು.
Related Articles
ಮೂಲಬನಗಳಲ್ಲಿ
ನಾಡಿನ ಉದ್ದಗಲಕ್ಕೆ ಹರಡಿರುವ ವಿವಿಧ ಕುಟುಂಬಗಳ ಮೂಲಬನಗಳಲ್ಲಿ ನಾಗದೇವರಿಗೆ ತಂಬಿಲ, ಕ್ಷೀರಾಭಿಷೇಕ, ಸೀಯಾಳಾಭಿಷೇಕ ಮುಂತಾದ ಸೇವೆಗಳು ನಡೆದವು. ಮಾರುಕಟ್ಟೆಗಳಲ್ಲಿ ಪೂಜಾ ಸಾಮಗ್ರಿಗಳ ಬೆಲೆ ಗಗನಕ್ಕೇರಿತ್ತು. ಬಹುತೇಕ ಎಲ್ಲ ಆಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿದ್ದರಿಂದ ದೇವಸ್ಥಾನಗಳ ಮುಂಭಾಗದಲ್ಲಿ ವಾಹನದಟ್ಟಣೆ ಹೆಚ್ಚಿತ್ತು. ಮಳೆ ಸುರಿಯದ ಹಿನ್ನೆಲೆಯಲ್ಲಿ ಬಹುತೇಕ ಜನರು ಮುಂಜಾನೆಯಿಂದಲೇ ಮೂಲಬನಗಳಿಗೆ ಹೋಗಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು.
Advertisement
– ಚಿತ್ರ: ರಮಾನಂದ ಪೈ