Advertisement

Nagamangala ಸಣ್ಣ ಘಟನೆ ಹೇಳಿಕೆ: ಬಿಜೆಪಿಯ ಸರ್ಟಿಫಿಕೇಟ್ ಅಗತ್ಯವಿಲ್ಲ:ಪರಮೇಶ್ವರ್ ಕಿಡಿ

07:22 PM Sep 13, 2024 | Team Udayavani |

ಬೆಂಗಳೂರು: ”ನಾಗಮಂಗಲದಲ್ಲಿ ನಡೆದದ್ದು ಸಣ್ಣ ಘಟನೆ” ಎಂಬ ಹೇಳಿಕೆ ಕುರಿತು ಬಿಜೆಪಿ, ಜೆಡಿಎಸ್ ಮತ್ತು ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ  ಹೇಳಿಕೆಗೆ ತೇಪೆ ಹಚ್ಚಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಯತ್ನಿಸಿದ್ದಾರೆ.

Advertisement

ಶುಕ್ರವಾರ (ಸೆ13 ) ರಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಡಾ.ಜಿ.ಪರಮೇಶ್ವರ್ ”ಯಾವ ಸರಕಾರವೂ ನೀವು ಹೋಗಿ ಗಲಾಟೆ ಮಾಡಿ ಎಂದು ಹೇಳುತ್ತದಾ? ಈ ರೀತಿ ಆಗಬಾರದಿತ್ತು ಎಂದು ಹೇಳಿದರೆ ಅದನ್ನೇ ದೊಡ್ಡದು ಮಾಡುತ್ತಾರೆ. ಕನ್ನಡ ಭಾಷೆಯೇ ಅರ್ಥವಾಗುವುದಿಲ್ಲವೇ? ನಾವು ಹಳ್ಳಿಯಿಂದ ಬಂದವರು. ಹಳ್ಳಿ ಭಾಷೆಯನ್ನೇ ಕೆಲವೊಮ್ಮೆ ಬಳಸುತ್ತೇವೆ” ಎಂದರು.

”ನಾವು ಗಲಭೆ ನಿಯಂತ್ರಣ ಮಾಡಿದ್ದೇವೆ. ಒಂದಂತೂ ಸ್ಪಷ್ಟವಾಗಿ ಹೇಳುತ್ತೇನೆ ಯಾರಿಗೂ ಕಾನೂನು ಕೈಗೆತ್ತಿಕೊಳ್ಳಲು ಅವಕಾಶ ಕೊಡುವುದಿಲ್ಲ. ಯಾರನ್ನೂ ಬಿಡುವುದಿಲ್ಲ. ಯಾವುದೇ ಸಮಾಜವನ್ನು ತುಷ್ಟೀಕರಣ ಮಾಡುವ ಅವಶ್ಯಕತೆ ನಮಗಿಲ್ಲ. ನನ್ನ ಹೇಳಿಕೆಯ ಶಬ್ದಗಳನ್ನು ತಿರುಚಲಾಗುತ್ತಿದೆ” ಎಂದರು.

”ನಾನು ಗೃಹ ಸಚಿವನಾಗಿ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ಘಟನೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿಲ್ಲ. ನನಗೆ ಬಿಜೆಪಿಯವರ ಸರ್ಟಿಫಿಕೇಟ್ ಅಗತ್ಯವಿಲ್ಲ. ಜವಾಬ್ದಾರಿ ಇಲ್ಲದೆ ಈ ಸ್ಥಾನದಲ್ಲಿ ಕುಳಿತಿಲ್ಲ.ದಯಮಾಡಿ ರಾಜಕೀಯ ಮಾಡಲು ಹೋಗಬೇಡಿ ಎಂದು ವಿಪಕ್ಷದವರಿಗೆ ಮನವಿ ಮಾಡಿದ್ದೇವೆ. ಆದರೂ ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದರು. ಕಾನೂನು ಪ್ರಕಾರ ಕ್ರಮಕೈಗೊಂಡಿದ್ದೇವೆ. ಸುಮ್ಮನೆ 55 ಮಂದಿಯನ್ನು ಬಂಧಿಸಿದ್ದೇವಾ? ಎಂದು ಪರಮೇಶ್ವರ್ ಪ್ರಶ್ನಿಸಿದರು.

ವರದಿ ಬಂದ ಬಳಿಕ ಘಟನೆಯಿಂದ ಜೀವನೋಪಾಯಕ್ಕೆ ತೊಂದರೆಯಾದವರಿಗೆ ಪರಿಹಾರ ನೀಡುವ ಬಗ್ಗೆ ಸರಕಾರ ಪರಿಗಣಿಸುತ್ತದೆ ಎಂದು ಗೃಹ ಸಚಿವರು ಹೇಳಿದರು.

Advertisement

ಬಿಜೆಪಿ , ಜೆಡಿಎಸ್ ಕಿಡಿ
ಡಾ.ಜಿ. ಪರಮೇಶ್ವರ್ ಅವರ ಹೇಳಿಕೆ ಕುರಿತು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವ್ಯಾಪಕ ಆಕ್ರೋಶ ಹೊರ ಹಾಕಿದ್ದಾರೆ. ಮಂಡ್ಯ ಸಂಸದ, ಕೇಂದ್ರ ಸಚಿವ, ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ನಾಗಮಂಗಲಕ್ಕೆ ಭೇಟಿ ನೀಡಿದರು. ”ಹಿಂಸಾಚಾರ ವ್ಯವಸ್ಥಿತ ಪೂರ್ವ ಯೋಜಿತ ಎಂದು ಸ್ಥಳ ಪರಿಶೀಲನೆಯಿಂದ ತಿಳಿದುಬಂದಿದೆ” ಎಂದು ಹೇಳಿದರು.

”ಘಟನೆಯನ್ನು ಸಣ್ಣ ಮತ್ತು ಆಕಸ್ಮಿಕ ಎಂದು ಪರಮೇಶ್ವರ್ ಹೇಳಿದ್ದಾರೆ. ಅವರು ಜನರಿಗೆ ಯಾವ ರೀತಿಯ ಸಂದೇಶವನ್ನು ಕಳುಹಿಸುತ್ತಿದ್ದಾರೆ? ಆಕಸ್ಮಿಕ ಎಂದು ಕರೆಯುತ್ತಿದ್ದೀರಿ. ಅಂತಹ ಮೆರವಣಿಗೆ ನಡೆಯುವಾಗ ಘಟನೆ ಸಂಭವಿಸಿದ್ದು, ಸೂಕ್ಷ್ಮ ಪ್ರದೇಶವಾಗಿದ್ದು, ಸೂಕ್ತ ಕ್ರಮ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ, 30-40 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ ಜನರ ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ” ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next