ಮಂಗಳೂರು: ಮಂಗಳೂರು ಸಮೀಪದ ಪೇಜಾವರದ ಸ್ಕ್ವಾಡ್ರನ್ ಲೀಡರ್ ಅಭಿನೀತ್ ಎ.ಕೆ. ಅವರು ನಾಗಲ್ಯಾಂಡ್ ರಾಜಭವನದ ಭದ್ರತಾ ವ್ಯವಸ್ಥೆಯ ಮುಖ್ಯಸ್ಥರಾಗಿ ಭಾರತೀಯ ವಾಯುಪಡೆಯಿಂದ ನಿಯೋಜನೆಗೊಂಡಿದ್ದು ಶೀಘ್ರದಲ್ಲೇ 2 ವರ್ಷಗಳ ಸೇವೆ ಪೂರ್ಣಗೊಳಿಸಲಿದ್ದಾರೆ.
ರಾಜಭವನ ಮತ್ತು ರಾಜ್ಯಪಾಲರ ಸಂಪೂರ್ಣ ಭದ್ರತಾ ಜವಾಬ್ದಾರಿಯ ಉಸ್ತುವಾರಿ ನೋಡಿಕೊಳ್ಳಬೇಕಾದ ಎಡಿಸಿ (ಎಯ್ಡ ಡಿ ಕ್ಯಾಂಪ್) ಹುದ್ದೆಗೆ ಭಾರತೀಯ ವಾಯುಪಡೆಯಿಂದ ಡೆಪ್ಯೂಟ್ ಮಾಡಲಾಗುತ್ತದೆ. ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವವರಲ್ಲಿ ಎಡಿಸಿಯಾಗಲು ಅರ್ಹತೆ ಇರುವವರ ಆಯ್ಕೆ ನಡೆಯುತ್ತದೆ. ಅನಂತರ ಖುದ್ದು ರಾಜ್ಯಪಾಲರು ಕೂಡ ಸಂದರ್ಶನ ನಡೆಸಿ ನೇಮಕ ಮಾಡಿಕೊಳ್ಳುತ್ತಾರೆ. ಇಂತಹ ಅವಕಾಶ ಸಿಗುವುದು ಅಪರೂಪ.
ಪೇಜಾವರ ಕೆಂಜಾರು ಕೈವಳಿ ಮನೆಯ ಸುಧಾ ಮತ್ತು ಆನಂದ ದಂಪತಿಯ ಪುತ್ರನಾದ ಅಭಿನೀತ್ ಮಂಗಳೂರಿನ ಸಂತ ಅಲೋಶಿಯಸ್, ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ವಿದ್ಯಾಭ್ಯಾಸ
ಮಾಡಿದ್ದಾರೆ.
2013ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದರು. ಏರ್‌ಫೋರ್ಸ್‌ನಲ್ಲಿ ಅಡ್ವಾನ್ಸ್ ಲೈಟ್‌ಹೆಲಿಕಾಪ್ಟರ್ (ಎಎಲ್‌ಎಚ್)ನಲ್ಲಿ ಟೆಕ್ನಿಕಲ್ ಆಫೀಸರ್ ಆಗಿರುವ ಇವರನ್ನು ನಿರ್ದಿಷ್ಟ ಅವಧಿಗೆ ಎಡಿಸಿಯಾಗಿ ಅವರನ್ನು ನಿಯೋಜನೆ ಮಾಡಲಾಗಿದೆ.
“ಇಂತಹ ಅವಕಾಶ ಸಿಕ್ಕಿರು ವುದು ಖುಷಿಯಾಗಿದೆ. ಎಡಿಸಿಯಾಗಿ ಫೆಬ್ರವರಿಗೆ 2 ವರ್ಷ ಪೂರ್ಣಗೊಳ್ಳಲಿದೆ. ಭಾರತೀಯ ವಾಯುಪಡೆ ಕೂಡ ಅಪಾರ ಅವಕಾಶಗಳನ್ನು ನೀಡುತ್ತದೆ. ಯುವಕರು ವಾಯುಪಡೆ ಸೇರ್ಪಡೆಗೆ ಆಸಕ್ತಿ ವಹಿಸಬೇಕು. ಆರಂಭದಲ್ಲಿ ಏರ್‌ಫೋರ್ಸ್ ಕಾಮನ್ ಎಡ್ಮಿಷನ್ ಟೆಸ್ಟ್, ಅನಂತರ ಮುಖ್ಯಪರೀಕ್ಷೆ ಬರೆಯಬೇಕು. ಪರೀಕ್ಷೆಗಳನ್ನು ಬರೆದು ಹಂತಹಂತವಾಗಿ ಉನ್ನತ ಹುದ್ದೆಗಳನ್ನು ಪಡೆಯಲು ಅವಕಾಶವಿದೆ’ ಎನ್ನುತ್ತಾರೆ ಅಭಿನೀತ್ ಅವರು.