ನವದೆಹಲಿ : ಭಾರತೀಯ ಸೇನೆಯು ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ದಂಗೆ-ವಿರೋಧಿ ಕಾರ್ಯಾಚರಣೆಯ ಸಂದರ್ಭ ನಾಗರಿಕರ ಹತ್ಯೆ ಮಾಡಿದ ಕುರಿತು ನ್ಯಾಯಾಂಗ ತನಿಖೆಗೆ ಸರಕಾರ ಭಾನುವಾರ ಆದೇಶ ನೀಡಿದೆ.
ನಾಗಾಲ್ಯಾಂಡ್‌ನಲ್ಲಿ ನಡೆದ ಅಹಿತಕರ ಘಟನೆಯಿಂದ ದುಃಖಿತರಾಗಿದ್ದು, ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ರಾಜ್ಯ ಸರಕಾರ ರಚಿಸಿರುವ ಉನ್ನತ ಮಟ್ಟದ ಎಸ್‌ಐಟಿ ತಂಡ ಘಟನೆಯ ಕೂಲಂಕಷವಾಗಿ ತನಿಖೆ ನಡೆಸಿ, ದುಃಖತಪ್ತ ಕುಟುಂಬಗಳಿಗೆ ನ್ಯಾಯ ಒದಗಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.
ಭದ್ರತಾ ಪಡೆಗಳಿಂದ ಕನಿಷ್ಠ 11 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಘಟನೆಯು “ತಪ್ಪಾದ ಗುರುತಿಸುವಿಕೆಯಿಂದ ” ನಡೆದಿದೆ, ತನಿಖೆ ನಡೆಸುತ್ತಿದ್ದೇವೆ ಎಂದು ನಾಗಾಲ್ಯಾಂಡ್‌ನ ರಾಜಧಾನಿ ಕೊಹಿಮಾದ ಪೊಲೀಸರು ಹೇಳಿದ್ದಾರೆ.
ಮ್ಯಾನ್ಮಾರ್ ಗಡಿಯಲ್ಲಿರುವ ಜಿಲ್ಲೆಯಲ್ಲಿ ದಂಗೆಕೋರರ ಚಲನವಲನದ ಬಗ್ಗೆ ವಿಶ್ವಾಸಾರ್ಹ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಮತ್ತು ಅದರ ನಂತರದ ಘಟನೆಗಳಿಗೆ ತೀವ್ರ ವಿಷಾದವಿದೆ. ದುರದೃಷ್ಟಕರ ಜೀವಹಾನಿಯ ಕಾರಣವನ್ನು ಉನ್ನತ ಮಟ್ಟದ ವಿಚಾರಣಾ ನ್ಯಾಯಾಲಯದಿಂದ ತನಿಖೆ ನಡೆಸಲಾಗುತ್ತಿದೆ ಮತ್ತು ಕಾನೂನಿನ ಪ್ರಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಸೇನೆ ಹೇಳಿಕೆಯಲ್ಲಿ ತಿಳಿಸಿದೆ.
ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಗಳಿಗೆ ತೀವ್ರ ಗಾಯಗಳಾಗಿವೆ ಮತ್ತು ಒಬ್ಬ ಯೋಧ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ. ಘಟನೆಯ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.