ಚಿಂಚೋಳಿ: ತಾಲೂಕಿನಲ್ಲಿ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದ್ದ ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಯ ದುರಸ್ತಿ ಕಾಮಗಾರಿ ಪೂರ್ಣವಾಗಿದ್ದು, ಹೂಡದಳ್ಳಿ ಮತ್ತು ದೋಟಿಕೊಳ್ಳ ಗ್ರಾಮಗಳ ದುರಸ್ತಿ ಕಾರ್ಯ ನಡೆಯುತ್ತಿವೆ ಎಂದು ಸಣ್ಣನೀರಾವರಿ ಇಲಾಖೆ ಎಇಇ ಶಿವಶರಣಪ್ಪ ಕೇಶ್ವಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆ ಮಳೆಯ ನೀರಿನ ರಭಸಕ್ಕೆ ಕಳೆದ 2020 ಅಕ್ಟೋಬರ್‌ನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಇದರ ದುರಸ್ತಿಗಾಗಿ ಸರ್ಕಾರದಿಂದ ನಾಲ್ಕು ಕೋಟಿ ರೂ. ಮಂಜೂರಿ ಆಗಿರುವುದರಿಂದ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಲಾಗಿದೆ ಎಂದು ಹೇಳಿದರು.
ನಾಗಾಇದಲಾಯಿ ಗ್ರಾಮದ ಸಣ್ಣ ನೀರಾವರಿ ಕೆರೆಯ ಬಂಡಿಂಗ ಒಟ್ಟು 620 ಮೀಟರ್ ಉದ್ದ ಇದ್ದು, ಇದರಲ್ಲಿ ನೀರಿನ ರಭಸಕ್ಕೆ 80ಮೀಟರ್ ಕೊಚ್ಚಿಕೊಂಡು ಹೋಗಿತ್ತು. 15ಮೀಟರ್ ಎತ್ತರ, 2.5ಮೀಟರ್ ಅಗಲ ವೇಸ್ಟವೇರ್ ಅಭಿವೃದ್ಧಿ ಮಾಡಲಾಗಿದೆ. ಕೆರೆಯ ಕೆನಾಲ್ ಅಭಿವೃದ್ಧಿ ಮತ್ತು 200ಮೀಟರ್ ರಸ್ತೆ ಅಭಿವೃದ್ಧಿ ಕೆಲಸ ನಡೆಸಲಾಗಿದೆ. ಇದರಿಂದ ಗ್ರಾಮದ ರೈತರಿಗೆ ನೀರಿನ ಪ್ರಯೋಜನ ಪಡೆದುಕೊಳ್ಳಲು ಅನುಕೂಲಕರವಾಗಲಿದೆ ಎಂದರು.
ಹೂಡದಳ್ಳಿ ಗ್ರಾಮದ ಕೆರೆಗೆ ಸರ್ಕಾರದಿಂದ 3.50ಕೋಟಿ ರೂ.ನೀಡಲಾಗಿದೆ. ಅದರ ಅಭಿವೃದ್ಧಿ ಕೆಲಸ ಶೇ. 80ರಷ್ಟು ಪೂರ್ಣಗೊಂಡಿದೆ. ದೋಟಿಕೊಳ್ಳ ಗ್ರಾಮದ ಸಣ್ಣನೀರಾವರಿ ಬಂಡಿಂಗದಲ್ಲಿ ಮಳೆ ನೀರಿನ ರಭಸಕ್ಕೆ ಹಾನಿಯಾಗಿದ್ದು, ಕೆಲಸ ಪ್ರಾರಂಭಿಸಬೇಕಾಗಿದೆ. ಛತ್ರಸಾಲಾ, ರುದನೂರ, ಚಿಂಚೋಳಿ, ಕನಕಪುರ, ಭೂಯ್ನಾರ (ಕೆ), ಫತ್ತುನಾಯಕ ತಾಂಡಾ, ಕಂಚನಾಳ, ಅಡಕಿಮೋಕ ತಾಂಡಾ, ಬ್ರಿಡ್ಜ ಕಮ್ ಬ್ಯಾರೇಜ್ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಜಿಲ್ಲೆಯಲ್ಲಿಯೇ ಅತಿ ಹೆಚ್ಚು 18 ಸಣ್ಣ ನೀರಾವರಿ ಕೆರೆಗಳನ್ನು ತಾಲೂಕು ಹೊಂದಿದೆ. ಹೀಗಿದ್ದರೂ ರೈತರ ಹೊಲಗಳಿಗೆ ನೀರು ಹರಿದು ಹೋಗಲು ಕೆನಾಲ್‌ಗಳು ಬಹಳಷ್ಟು ಹದಗೆಟ್ಟಿವೆ. ಸರ್ಕಾರದಿಂದ ಕೆನಾಲ್ ಅಭಿವೃದ್ಧಿಗೆ ಅನುದಾನ ನೀಡಿಲ್ಲ ಎಂದು ತಿಳಿಸಿದರು.