ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಾಗರಾಜ್ ಅಲಿಯಾಸ್ ಬಾಂಬ್ ನಾಗ ತಮಿಳುನಾಡಿನ “ಶಿಪ್‌ಯಾರ್ಡ್’ವೊಂದರಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿ ಬಹಿರಂಗಗೊಂಡಿದೆ. ಈನಡುವೆ ಪೊಲೀಸರ ಕಾರ್ಯಾಚರಣೆ ಗತಿ ಕಂಡು ಆತಂಕಕ್ಕೊಳಗಾಗಿರುವ ನಾಗ, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸಿ, ಏ.20ರಂದು ನಗರಕ್ಕೆ ಬಂದು ತಾನೇ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾನೆ ಎನ್ನಲಾಗಿದೆ.
ಏ.14ರಂದು ಪೊಲೀಸರ ದಾಳಿಯ ಮುನ್ಸೂಚನೆ ಪಡೆದಿದ್ದ ಆರೋಪಿ ನಾಗರಾಜ್ ಒಂದು ದಿನ ಮೊದಲೇ ತಮಿಳುನಾಡಿನ ಧರ್ಮಪುರಿಗೆ ಓಡಿ ಹೋಗಿದ್ದಾನೆ. ಬಳಿಕ ತನ್ನ ಸಂಬಂಧಿಕರು ಹಾಗೂ ಅಂತಾರಾಜ್ಯ ಮಟ್ಟದಲ್ಲಿ ಕಪ್ಪು ಹಣ ದಂಧೆ ನಡೆಸುತ್ತಿರುವ ಕೆಲ ಉದ್ಯಮಿಗಳ ಸಹಾಯ ಪಡೆದು ತನ್ನ ಮಕ್ಕಳೊಂದಿಗೆ ಶಿಪ್‌ಯಾರ್ಡ್‌ನಲ್ಲಿ ರಹಸ್ಯವಾಗಿ ನೆಲೆಸಿದ್ದಾನೆ. ಈ ನಡುವೆ ಪೊಲೀಸರು ಬಂಧಿಸುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ವಕೀಲರನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ.
ಮತ್ತೂಂದೆಡೆ ನಾಗರಾಜ್‌ಗಾಗಿ ಹುಡುಕಾಟ ಆರಂಭಿಸಿರುವ ಪೊಲೀಸರ ತಂಡ ಖಚಿತ ಮಾಹಿತಿ ಮೇರೆಗೆ ತಮಿಳುನಾಡಿನ ರಾಣಿಪೇಟ್‌ಗೆ ತೆರಳಿದೆ. ಆದರೆ, ಶನಿವಾರದವರೆಗೆ ಆರೋಪಿಗಳ ಲೋಕೇಷನ್ ರಾಣಿಪೇಟ್‌ನಲ್ಲಿ ಪತ್ತೆಯಾಗುತ್ತಿತ್ತು. ಭಾನುವಾರ ಬೇರೆಡೆಯೇ ತೋರಿಸುತ್ತಿದೆ. ಹೀಗೆ ನಿತ್ಯ ತನ್ನ ಸ್ಥಳವನ್ನು ಆರೋಪಿ ಬದಲಾಯಿಸಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ಶಿಪ್‌ಯಾರ್ಡ್’ನಲ್ಲೇ ವ್ಯವಹಾರ: ಮೂಲತಃ ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ನಾಗರಾಜ್, ಕೆಲ ಸ್ಥಳೀಯ ಉದ್ಯಮಿಗಳ ಸಂಪರ್ಕ ಹೊಂದಿದ್ದ. ಹಾಗೇ ಕೆಲ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಕೋರರ ಜತೆಯೂ ವ್ಯವಹಾರ ನಡೆಸುತ್ತಿದ್ದ. ಹಾಗಾಗಿ ಡಿಸೆಂಬರ್‌ನಿಂದಲೇ ಈತ ಅಮಾನ್ಯಗೊಂಡ ನೋಟುಗಳ ಬದಲಾವಣೆಯಲ್ಲಿ ತೊಡಗಿದ್ದ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲ ರಾಜಕೀಯ ಮುಖಂಡರು, ಉದ್ಯಮಿಗಳ ಕಪ್ಪು ಹಣವನ್ನು ಶೇ.25ರಷ್ಟು ಕಮಿಷನ್ ಆಧಾರದ ಮೇಲೆ ಬದಲಾವಣೆ ಮಾಡಿಕೊಡುತ್ತಿದ್ದ.
ಹಾಗೇ ನೋಟುಗಳ ಬದಲಾವಣೆಗೆ ಬಂದ ಉದ್ಯಮಿಗಳಿಗೆ ಬೆದರಿಸಿ ಸಂಗ್ರಹಿಸಿಟ್ಟಿದ್ದ ಕೋಟ್ಯಂತರ ರೂ. ಮೌಲ್ಯದ ಹಳೇ ನೋಟುಗಳನ್ನು ತಮಿಳುನಾಡಿನ ಶಿಪ್‌ಯಾರ್ಡ್‌ಗಳಿಗೆ ಕೊಂಡೊಯ್ದು ಅಂತಾರಾಜ್ಯ ದಂಧೆಕೋರರ ಮೂಲಕ ಶೇ.30ರಷ್ಟು ಕಮಿಷನ್‌ಗೆ ಬದಲಾವಣೆ ಮಾಡಿಕೊಳ್ಳುತ್ತಿದ್ದ. ಇದಕ್ಕಾಗಿಯೇ ತಮಿಳುನಾಡು ಹಾಗೂ ರಾಜ್ಯದ ಬಹಳಷ್ಟು ಜನ ಅನಿವಾಸಿ ಭಾರತೀಯರನ್ನು ಸಂಪರ್ಕಿಸಿ ಅವರಿಗೂ ಶೇಕಡಾ ಪ್ರಮಾಣದಲ್ಲಿ ಕಮಿಷನ್ ಕೊಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸರು ಕಾರ್ಯಾಚರಣೆಯಿಂದ ಆತಂಕಗೊಂಡಿರುವ ಆರೋಪಿ ನಾಗರಾಜ್, ಏ.20ರಂದು ಶರಣಾಗುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
ವಕೀಲರ ಸಂಪರ್ಕ
ಪೊಲೀಸರು ಬಂಧನಕ್ಕೆ ಮುಂದಾಗುವ ಮೊದಲೇ ನಿರೀಕ್ಷಣಾ ಜಾಮೀನು ಪಡೆಯಲು ತನ್ನ ಸಂಬಂಧಿಕರ ಮೂಲಕ ವಕೀಲರನ್ನು ಸಂಪರ್ಕಿಸಿದ್ದಾನೆ ಎನ್ನಲಾಗಿದೆ. ಆದರೆ, ಈಗಾಗಲೇ ಆರೋಪಿ ನಾಗನ ಪ್ರತಿ ಚಲನ ವಲನಗಳ ಬಗ್ಗೆ ನಿಗಾವಹಿಸಿರುವ ಪೊಲೀಸರು ಸದ್ಯದಲ್ಲೇ ಆತನನ್ನು ಬಂಧಿಸಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.