Advertisement

Naga Panchami 2024; ನಾಗರ ಪಂಚಮಿ ಸ್ವತ್ಛ ಪಂಚಮಿ-ನಾಗ ದೇವರಿಗೆ ಸಮರ್ಪಣೆ ‘ಉತ್ತಮ’ವಾಗಿರಲಿ

01:26 PM Aug 09, 2024 | Team Udayavani |

ಉತ್ತಮಂ ಸ್ವಾರ್ಜಿತಂ ಪುಷ್ಪಂ ಮಧ್ಯಮಂ ವನ್ಯಮುಚ್ಯತೇ |
ಅಧಮಂ ತು ಕ್ರಯಕ್ರೀತಂ ಪಾರಕ್ಯಮಧಮಾಧಮಮ್‌ ||

Advertisement

ವರ್ಷದ ಮೊದಲ ಹಬ್ಬ ನಾಗರಪಂಚಮಿ ಪರ್ವಕಾಲದಲ್ಲಿ (ಆ. 9 ಇಂದು) ಈ ಸುಭಾಷಿತವನ್ನು ಅನುಸಂಧಾನ ಮಾಡಿಕೊಳ್ಳಬೇಕಾಗಿದೆ.

“ನಾವೇ ಬೆಳೆದ ಹೂವು ಉತ್ತಮ, ವನದಲ್ಲಿ ಬೆಳೆದದ್ದು ಮಧ್ಯಮ, ಕ್ರಯ ಕೊಟ್ಟು ಕೊಂಡದ್ದು ಅಧಮ, ಪರಕೀಯರು ಕೊಟ್ಟದ್ದು ಅಥವಾ ಪರರ ಗಿಡಗಳಿಂದ ಅವರಿಗೆ ತಿಳಿಯದಂತೆ ಬಿಡಿಸಿಕೊಂಡು ತಂದದ್ದು ಅಧಮಾಧಮ’ ಎಂಬುದು ಈ ಸುಭಾಷಿತದ ಅರ್ಥ. ಹೂವಿನ ಸ್ಥಾನದಲ್ಲಿ ತರಕಾರಿ, ಆಹಾರಧಾನ್ಯಗಳನ್ನು ಇರಿಸಿ ನೋಡಿದರೂ, ಹಣ ಸಂಪಾದನೆ ಸಹಿತ ಯಾವುದನ್ನೇ ಆಗಲೀ ಅದನ್ನು ಇದೇ ಸ್ಥಾನದಲ್ಲಿರಿಸಿ ನೋಡಿದರೂ ಸಂದೇಶದಲ್ಲಿ ವ್ಯತ್ಯಾಸವಿಲ್ಲ. ಈ ಸುಭಾಷಿತಕ್ಕೆ ಇನ್ನೊಂದು ಸಾಲು ಈಗಿನ ಕಾಲಕ್ಕೆ ಸೇರಿಸಬಹುದು. “ದೇವರ ದೀಪಕ್ಕೆ ಕಡಿಮೆ ದರದ ಎಣ್ಣೆ ಇದೆಯಂತಲ್ಲ! ಅದನ್ನು ಕೊಡಿ’ ಎಂದು ಕೇಳಿ ಪಡೆದು ದೇವರಿಗೆ ಕೊಡುವವರಿದ್ದಾರೆ. ಇಂತಹ ಭೂಪರನ್ನು “ಅನಂತಾಧಮ’ ಎಂದು ಕರೆಯಬಹುದೋ?’.

ನಾಗರಪಂಚಮಿ ಇರಲಿ ಅಥವಾ ಇನ್ನಾವುದೇ ಹಬ್ಬವಿರಲಿ ಎರಡು ಬಗೆಯ ಆಚರಣೆಗಳು ಎಕ್ಸ್‌ಟ್ರೀಮ್‌ ಹಂತದಲ್ಲಿ ಕಾಣಸಿಗುತ್ತಿವೆ. ಮೊದಲನೆಯದು ತನಗಾದರೆ ಒಂದು ನ್ಯಾಯ, ಇತರರಿಗಾದರೆ ಇನ್ನೊಂದು ನ್ಯಾಯ. ಎರಡನೆಯದು ವೈಭವ ತೋರಿಸುವುದರಲ್ಲಿಯೇ ಮೈಮರೆತು ಉಂಟಾಗುವ ಸ್ಪರ್ಧೆ. ಇವೆರಡರ ನಡುವೆ ವಾಸ್ತವ ಅದೆಷ್ಟೋ ದೂರ ಹೋಗಿ ಹಿಂದಿರುಗಲೂ ಆಗದ ಸ್ಥಿತಿ ಬಂದೊದಗುತ್ತದೆ. ಕಾಲ ಉರುಳಿದಂತೆ ನಮ್ಮ ಜೀವನಶೈಲಿಯೂ ಬದಲಾಗುತ್ತ ಹೋಗುತ್ತದೆ. ಬದಲಾವಣೆಯಾಗುವಾಗ ಆದ ಬದಲಾವಣೆ ಸೂಕ್ತವೋ ಅಲ್ಲವೋ ಎಂಬ ಚಿಂತನೆಯೂ ಇದ್ದಿರುವುದಿಲ್ಲ.

ಭಕ್ತನಾದವನು ನಾಗರಪಂಚಮಿಯಲ್ಲಿ ಅರಶಿನ, ಹೂವು, ಎಳನೀರು, ಜೇನುತುಪ್ಪ, ಹಾಲು ಇಂತಹ ವಾಪಸು ಕೇಳದಂತಹ ಅನೇಕ ವಸ್ತುಗಳನ್ನು ನಿಸರ್ಗಕ್ಕೆ ಒಪ್ಪಿಸುತ್ತಾನೆ. ಈ ಒಪ್ಪಿಸುವ ವಸ್ತುಗಳ ತಾಜಾತನದ ಬಗ್ಗೆ ತಲೆ ಕೆಡಿಸಿಕೊಳ್ಳದ ಸ್ಥಿತಿಗೆ ನಮ್ಮನ್ನು ನಾವು ತಂದಿರಿಸಿಕೊಂಡಿದ್ದೇವೆ. ಮೇಲೆ ತಿಳಿಸಿದ ಸುಭಾಷಿತವನ್ನು ಓದಿದರೆ ಅದರಲ್ಲಿ ಉತ್ತಮ ಎಂದದ್ದನ್ನು ನಾವು ನಿಸರ್ಗಕ್ಕೆ (ನಾಗ/ದೇವ) ಕೊಡದ ಸ್ಥಿತಿಯಲ್ಲಿದ್ದೇವೆ. ಪ್ರಾಚೀನ ಶಾಸ್ತ್ರಗಳೆಲ್ಲವೂ ಎಲ್ಲಿ ನಮ್ಮ ಶ್ರಮವಿದೆಯೋ (ಬೆವರು ಸುರಿಸುವಿಕೆ) ಅದನ್ನು “ಉತ್ತಮ’ ಎಂದು ಕರೆದಿದೆ, ಹೀಗೆನ್ನುವಾಗ “ಹಣ’ ಮಾನ್ಯವಾಗಿರಲಿಲ್ಲ. ಸುಭಾಷಿತದಲ್ಲಿ ಯಾವುದನ್ನು ಅಧಮ, ಅಧಮಾಧಮ ಎಂದಿದೆಯೋ ಅದನ್ನು ಇನ್ನೂ ಮುಂದೆ ಹೋಗಿ “ಅನಂತಾಧಮ’ದ ಕೊಡುಗೆ ಸಲ್ಲಿಸುವುದಕ್ಕಾಗಿಯೋ ಎಂಬಂತೆ ಮುನ್ನಡೆಯುತ್ತಿದ್ದೇವೆ. ನಾವು ಅವಕಾಶವಿದ್ದರೂ ಯಾವುದನ್ನೂ ಬೆಳೆಯದೆ ಯಾರೋ ಬೆಳೆದದ್ದನ್ನು ಕ್ರಯ ಕೊಟ್ಟು ಖರೀದಿಸುವ ಸುಲಭ ಮಾರ್ಗವನ್ನು ತಮ್ಮದಾಗಿಸಿಕೊಂಡಿದ್ದೇವೆ. ಎಲ್ಲರೂ ಸುಲಭಮಾರ್ಗವನ್ನೇ ಬೆನ್ನಟ್ಟುತ್ತ ಹೋದರೆ ಮುಂದೊಂದು ದಿನ ಎಲ್ಲರಲ್ಲಿಯೂ ಹಣವಿರಬಹುದೆ ವಿನಾ ಲೋಕದಲ್ಲಿ ವಸ್ತುವಿರಲಾರದು. ಅಂತಹ ದುರ್ದಿನಗಳನ್ನು ಕೂಡಲೇ ತರಿಸಿಕೊಳ್ಳಬೇಕೋ? ದೂರ ದೂರ ತಳ್ಳಬೇಕೋ? ನಾಗರಪಂಚಮಿಯಂದು ನಾಗ ದೇವರಿಗೆ ನಾವೇ ಬೆಳೆದದ್ದನ್ನು ಸಮರ್ಪಿಸುವ ಸಂಕಲ್ಪವಾಗಲಿ.

Advertisement

– ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.