Advertisement

ನಾಗದೇವತೆ ಆರಾಧನೆಯ ವಿಶಿಷ್ಟ ಆಚರಣೆ: ಕರಾವಳಿಯ ಎಲ್ಲೆಡೆ ನಾಗತನು

01:17 PM Apr 09, 2020 | |

ಹೌದು, ಈಗ ಕರಾವಳಿಯ ಒಂದಲ್ಲ ಒಂದು ಊರಿನಲ್ಲಿ ಮಳೆಗಾಲ ಆರಂಭವಾಗುವ ವರೆಗೂ ನಾಗತನು ಎಂಬ ವಿಶಿಷ್ಟ ಧಾರ್ಮಿಕ ವಿಧಿ ನಡೆಯುತ್ತಲೇ ಇರುತ್ತದೆ.  ಮಳೆ ಸನ್ನಿಹಿತವಾದ ಬಳಿಕ ಜನವರಿಯ ತನಕವೂ ಅದಕ್ಕೆ ಫ‌ುಲ್‌ ಬ್ರೇಕ್‌. ಏನಿದು ನಾಗತನು?

Advertisement

ಕರಾವಳಿ ಪ್ರದೇಶ ನಾಗರಖಂಡವೆಂದೇ ಪ್ರಸಿದ್ಧಿ ಪಡೆದಿದೆ. ಹಿಂದೆ ಪರಶುರಾಮನು ಬ್ರಾಹ್ಮಣರಿಗೆ ಇಲ್ಲಿರುವ ಭೂಭಾಗವನ್ನು ದಾನವಾಗಿ ನೀಡಿದಾಗ ಅಲ್ಲಿ ನೆಲೆಸಿದ್ದ ನಾಗಗಳು ಅವನ ಬಳಿಗೆ ಬಂದು, “ಇದು ಆದಿಯಿಂದಲೂ ನಮ್ಮ ವಾಸದ ಭೂಮಿಯಾಗಿದೆ. ಇದನ್ನು ತಾವು ಬ್ರಾಹ್ಮಣರಿಗೆ ಕೊಟ್ಟರೆ ನಾವು ಏನು ಮಾಡಬೇಕು?’ ಎಂದು ಕೇಳಿದವಂತೆ. ಅದಕ್ಕೆ ಅವನು, “ಇಲ್ಲಿ ನಿಮ್ಮನ್ನು ಪ್ರತಿಷ್ಠಾಪನೆ ಮಾಡಿ ಬೇರೆ ಬೇರೆ ವಿಧಾನಗಳಿಂದ ಪೂಜಿಸಲು ಆದೇಶಿಸುತ್ತೇನೆ’ ಎಂದು ಹೇಳಿದನಂತೆ. ಆ ಪ್ರಕಾರ ಕರಾವಳಿಯ ಎಲ್ಲೆಡೆ ನಾಗಾರಾಧನೆ ಪದ್ಧತಿ ಬೆಳೆಯುತ್ತ ಹೋಯಿತು. ಸರ್ಪವೊಂದು ಸತ್ತರೆ ವಿಧಿಯುಕ್ತವಾಗಿ ಸಂಸ್ಕಾರ ಮಾಡಿ ಉತ್ತರಕ್ರಿಯೆಯನ್ನೂ ಇಲ್ಲಿ ಮಾಡಲಾಗುತ್ತದೆ. ಆಶ್ಲೇಷಾ ಬಲಿಯಂತಹ ಧಾರ್ಮಿಕ ಆಚರಣೆಗಳೂ ಇಲ್ಲಿ ನಡೆಯುತ್ತವೆ. ಹಾಗೆಯೇ ನಾಗಮಂಡಲ ಮೊದಲಾದ ವಿಭಿನ್ನ ಆರಾಧನೆಗಳಿಗೂ ಕರಾವಳಿ ಪ್ರಸಿದ್ಧವಾಗಿದೆ.

ನಾಗಾರಾಧನೆಯ ಹಿನ್ನೆಲೆಯನ್ನು ವಿಸ್ತೃತವಾಗಿ ಹೇಳುತ್ತಾರೆ ಬೆಳ್ತಂಗಡಿ ತಾಲೂಕಿನ ದೇವಾಲಯಗಳ ಹೆಸರಾಂತ ತಂತ್ರಿಗಳೂ, ನಾಗಪೂಜೆಯಲ್ಲಿ ಅನುಭವಿಗಳೂ ಆಗಿರುವ ಮಡಂತ್ಯಾರಿನ ಮುಂಡೂರು ಗೋಪಾಲಕೃಷ್ಣ ಅಲೆವೂರಾಯರು. ಅವರ ನೇತೃತ್ವದಲ್ಲಿ ನಾಗತನು ಎಂಬ ವಿಶೇಷ ಆರಾಧನೆ ನಡೆಯುತ್ತಿದ್ದು ಅದರ ವೀಕ್ಷಣೆಗೆ ಸಹಸ್ರಾರು ಭಕ್ತರು ಬರುತ್ತಾರೆ. ಸಂತಾನವಿಲ್ಲದವರು ಮತ್ತು ಮದುವೆಯಾಗವರು ನಾಗದೋಷ ನಿವಾರಣೆಗೆ ದೂರದ ಊರುಗಳಿಂದಲೂ ನಾಗತನು ಸೇವೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಿಸಿಲಿನ ತಾಪದಿಂದ ಕಂಗೆಟ್ಟ ನಾಗದೇವರಿಗೆ ತಂಪು ನೀಡಲು ನಡೆಸುವ ಧಾರ್ಮಿಕ ವಿಧಿಯೇ ಬಂಧು ನಾಗತನು ಕಾರ್ಯಕ್ರಮದ ಹಿನ್ನೆಲೆಯಂತೆ.

ತಂತ್ರಿಗಳ ಪ್ರಕಾರ, ನಾಗಗಳಿಗೂ ಸರ್ಪಗಳಿಗೂ ವ್ಯತ್ಯಾಸವಿದೆ. ನಾಗಗಳು ಕಶ್ಯಪ-ಸುರಸೆ ದಂಪತಿಯ ಸಂತಾನ. ಇವರಲ್ಲಿ ಅನಂತ, ಶೇಷ, ವಾಸುಕಿ, ತಕ್ಷಕ, ಕಾರ್ಕೋಟಕ ಮುಂತಾಗಿ ಅಷ್ಟಕುಲಗಳಿವೆ. ಅವುಗಳ ಸಂತಾನಗಳು ಬೇರೆ ಬೇರೆ ಇವೆ. ಈ ನಾಗಗಳ 85 ಮಂದಿ ಸಂತತಿಗೆ ಮಾಡುವ ನಿಸರ್ಗಪೂಜೆಯ ಒಂದು ಬಗೆಯೇ ನಾಗತನು. ನಾಗಾರಾಧನೆಯ ವಿಧಿಯ ಮೂಲಕ ನಿಸರ್ಗದಲ್ಲಿರುವ ಕೋಟಿಗಟ್ಟಲೆ ಸೂಕ್ಷ್ಮ ಜೀವಿಗಳಿಗೆ ಆಹಾರ ನೀಡಿ ಸಂತೃಪ್ತಿಗೊಳಿಸುವುದು ಅದರ ಹಿಂದಿರುವ ಉದ್ದೇಶ.

Advertisement

ನಾಗತನುವಿಗಾಗಿ ಕೆಂಪು, ಹಳದಿ, ಬಿಳಿ, ಹಸಿರು, ನೀಲಿ, ಕಪ್ಪು$ಮೊದಲಾದ ಬಣ್ಣಗಳಿಂದ 50 ಅಡಿಗಿಂತ ವಿಸ್ತಾರವಾದ ಆಶ್ಲೇಷಾ ಬಲಿಯ ಮಂಡಲವನ್ನು ರಚಿಸಲು ಮೂವರು ಪರಿಣತರಿಗೆ ನಾಲ್ಕು ತಾಸು ಬೇಕಾಗುತ್ತದೆ. ಚಿತ್ತಾಕರ್ಷಕ ವರ್ಣಗಳಿಂದ ಕಂಗೊಳಿಸುವ ಮಂಡಲ ಭಯ ಮತ್ತು ಭಕ್ತಿಯ ಪ್ರೇರಕವೂ ಹೌದು. ಸರ್ಪವನ್ನೇ ಹೋಲುವ ಈ ಬೃಹತ್‌ ಮಂಡಲದ ಹೊರಾವರಣದಲ್ಲಿ ನೇರಳೆಮರ ಮುಂತಾದ ಮರದ ಬಲಿಯ ಎಲೆಗಳನ್ನು ಹರಡುತ್ತಾರೆ. ಕೆಂಪು ಮತ್ತು ಹಳದಿ ವರ್ಣದ ಗೊಂಡೆ ಹೂಗಳು ಹಾಗೂ ಮಲ್ಲಿಗೆ ಹಾರಗಳಿಂದ ಸಿಂಗರಿಸುತ್ತಾರೆ.

ನಾಗತನು ಸಂಪನ್ನಗೊಳ್ಳುವುದು ರಾತ್ರಿಯ ಸಮಯ. ಒಂದೆಡೆ ವೇದಘೋಷ. ಇನ್ನೊಂದೆಡೆ ವೈದಿಕರು ಆಶ್ಲೇಷಾ ಬಲಿಯ ಮಂಡಲಕ್ಕೆ ಪೂಜೆ ಸಲ್ಲಿಸಿ ಮಂತ್ರಪೂರ್ವಕವಾಗಿ ನಾಗದೇವತೆಗಳು 85 ಮಂದಿಯನ್ನು ಆಹ್ವಾನಿಸುತ್ತಾರೆ. ಅಘÂìಪಾದ್ಯವೇ ಮುಂತಾದ ಶೋಡಶೋಪಚಾರಗಳಿಂದ ಅವರನ್ನು ಪ್ರಸನ್ನಗೊಳಿಸುತ್ತಾರೆ. ಅನ್ನಕ್ಕೆ ಅರಶಿಣದ ಹುಡಿ ಬೆರೆಸಿ ತಯಾರಿಸಿದ ಮೋದಕದಂತಿರುವ ಮುದ್ದೆಗಳನ್ನು ತಯಾರಿಸಿ ಅದರ ಮೇಲ್ಭಾಗದಲ್ಲಿ ತುಪ್ಪದಲ್ಲಿ ಕರಿದ ಒಂದು ಅಪ್ಪವನ್ನಿರಿಸಿ ಮಂಡಲದ ಮಧ್ಯೆ 85 ಮಂದಿ ನಾಗಗಳಿಗೂ ಒಂದೊಂದು ಮುದ್ದೆಯನ್ನು ಆಹಾರವಾಗಿ ನೀಡಲಾಗುತ್ತದೆ. ಈ ಮುದ್ದೆಗಳ ಮೇಲೆ ಉರಿಯುವ ಕೋಲುಬತ್ತಿಯನ್ನಿಡುತ್ತಾರೆ. ಬಲಿ ಮಂಡಲದ ಒಂಭತ್ತು ಭಾಗಗಳಲ್ಲಿ ತೆಂಗಿನ ಎಳೆಯ ಗರಿಗಳಿಂದ ತಯಾರಿಸಿರುವ ಚಿಕ್ಕ ಮಂಟಪಗಳನ್ನಿರಿಸಿ ಅದರಲ್ಲಿ ಬಲಿ ಸಾಮಗ್ರಿಗಳನ್ನು ತುಂಬಿಸುತ್ತಾರೆ. ಮೇಲ್ಭಾಗದಲ್ಲಿ ಕುಂಬಳಕಾಯಿಯ ಮೇಲೆ ದೀಪ ಉರಿಸಿಡಲಾಗುತ್ತದೆ. ಬಲಿಮಂಡಲದ ಸುತ್ತಲೂ ಸಹಸ್ರಾರು ಹಣತೆಗಳಲ್ಲಿ ಉರಿಯುವ ದೀಪಗಳು ಪೂರ್ಣವಾಗಿ ಭಕ್ತಿಯ ವಾತಾವರಣದಲ್ಲಿ ಸೇರಿದವರನ್ನು ತನ್ಮಯಗೊಳಿಸುತ್ತದೆ.

ಗ್ರಾಮದ ಪ್ರತಿ ಮನೆಯವರೂ ಹಾಲಿನ ಬಿಂದಿಗೆ ಸಹಿತ ಬರುತ್ತಾರೆ. ಸಾವಿರಾರು ಲೀಟರ್‌ ಪ್ರಮಾಣದ ಹಾಲು ಪಾತ್ರೆಗಳಲ್ಲಿ ಶೇಖರವಾಗುತ್ತದೆ. ಈಗ ನಾಗತನು ಆರಂಭವಾಗುತ್ತದೆ. ಚಂಡೆ ಮುಂತಾದ ವಾದ್ಯಗಳ ನಿನಾದದಲ್ಲಿ ನಾಗದೇವತೆ ಶುಚಿಭೂìತರಾಗಿರುವ ತಂತ್ರಿಗಳ ಮೈಮೇಲೆ ಆವೇಶಗೊಳ್ಳುತ್ತಿದ್ದಂತೆ ಅವರು ಮೈಮರೆಯುತ್ತಾರೆ. ಕೊಂಬುಗಿಂಡಿಯಲ್ಲಿ ಧಾರಾಕಾರವಾಗಿ ಹಾಲನ್ನು ಮಂಡಲದ ಸುತ್ತಲೂ ಹೊಯ್ಯುತ್ತ ಸಾಗುತ್ತಿದ್ದಂತೆ ಅವರ ನಡೆಯಲ್ಲಿ ನಾಗನ ಬಳುಕಾಟದ ಜತೆಗೆ ಅಸಾಧಾರಣ ವೇಗ ಕಾಣಿಸುತ್ತದೆ. ಆಮೇಲೆ ಹತ್ತಾರು ಮೂಟೆಗಳ ತುಂಬ ಅರಳನ್ನು ಮಂಡಲದ ಸುತ್ತಲೂ ಕೈಗಳಿಂದ ಬಾಚಿ ಬಾಚಿ ಸಮರ್ಪಿಸುತ್ತಾರೆ.

ಮುಂದಿನ ಭಾಗದಲ್ಲಿ ತಂತ್ರಿಗಳು ಪೂರ್ಣವಾಗಿ ನಾಗದೇವತೆಯನ್ನು ಆವಾಹಿಸಿಕೊಳ್ಳುತ್ತಾರೆ. ದೊಡ್ಡ ಪಾತ್ರೆಯಲ್ಲಿ ತಯಾರಾದ ಮಧುರಾಮೃತ ಅವರೆದುರಿಗೆ ಬರುತ್ತದೆ. ಹಾಲು, ಜೇನು, ತುಪ್ಪ, ಸಕ್ಕರೆ, ಎಳನೀರುಗಳೊಂದಿಗೆ ಅರಶಿಣದ ಹುಡಿ ಬೆರೆಸಿ ಈ ಮಧುರಾಮೃತವನ್ನು ತಯಾರಿಸುತ್ತಾರೆ. ನಾಗದೇವತೆ ಆವೇಶಿತಗೊಂಡ ತಂತ್ರಿಗಳು ಕೈಯಲ್ಲಿ ಹಿಡಿದ ಜೋಡಿ ಹಿಂಗಾರವನ್ನು ಮಧುರಾಮೃತದ ಪಾತ್ರೆಯಲ್ಲಿ ಅದ್ದಿ ಹೊರಗೆಳೆದು ಧಾರಾಕಾರವಾಗಿ ಅದನ್ನು ಮಂಡಲದ ಮಧ್ಯೆ ತರ್ಪಣವಾಗಿ ನೀಡುತ್ತಾರೆ. ನೂರಾರು ಲೀಟರ್‌ ಪ್ರಮಾಣದ ಮಧುರಾಮೃತ ತರ್ಪಣದ ಮೂಲಕ ನದಿಯಾಗಿ ಹರಿದು ನಾಗಗಳಿಗೆ ತನು(ತಂಪು) ನೀಡುತ್ತದೆ.

ತರ್ಪಣ ವಿಧಿ ಮುಗಿಯುತ್ತಿದ್ದಂತೆ ತಂತ್ರಿಗಳ ಮೈಗೆ ಆವೇಶಿತಗೊಂಡ ನಾಗವು ತೃಪ್ತವಾಗಿ ಸ್ವಸ್ಥಾನ ಸೇರುತ್ತದೆ. ಸೇರಿದ ಭಕ್ತರಿಗೆ ಪ್ರಸಾದ ವಿತರಣೆಯಾಗುತ್ತದೆ. ಇದು ಕೇವಲ ಅಂಧಶ್ರದ್ಧೆಯ ಪ್ರತೀಕವಲ್ಲವಂತೆ. ಋಗ್ವೇದದಲ್ಲಿ ಉಕ್ತವಾದ ಒಂದು ನಿಸರ್ಗಪೂಜೆಯ ವಿಧಾನವಿದು ಎಂಬುದು ಅವರ ಅಭಿಮತ.

ಪ.ರಾಮಕೃಷ್ಣ ಶಾಸ್ತ್ರೀ 

Advertisement

Udayavani is now on Telegram. Click here to join our channel and stay updated with the latest news.

Next