ಬೆಂಗಳೂರು: ಅಪಹರಣ ಹಾಗೂ ಸುಲಿಗೆ ಪ್ರಕರಣದ ಆರೋಪಿ ಬಾಂಬ್ ನಾಗನ ಪತ್ತೆಗೆ ರಚಿಸಲಾಗಿರುವ ಪೊಲೀಸ್ ತಂಡ, ತಮಿಳುನಾಡು, ಕೇರಳ, ಆಂಧ್ರಪ್ರದೇಶದಲ್ಲಿ ಹುಡುಕಾಟ ಮುಂದುವರಿಸಿದೆ.
ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ನಾಗ ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಲ್ಲಿ ಓಡಾಡಿಕೊಂಡಿದ್ದಾನೆ. ದಿನಕ್ಕೊಂದು ಸಿಮ್ ಕಾರ್ಡ್ ಉಪಯೋಗಿಸಿ ಸಂಬಂಧಿಕರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳುತ್ತಿದ್ದಾನೆ. ಸಿಮ್ ಕಾರ್ಡ್ ಬದಲಾಗುತ್ತಿರುವುದರಿಂದ ಆತ ಇರುವ ಸ್ಥಳದ ಪತ್ತೆ ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗಿದೆ.
ನಿತ್ಯ ಬಂದು ಊಟ ಮಾಡ್ತಿದಾರೆ!: ನಾಗನ ಪತ್ನಿ ಪೊಲೀಸರಿಗೆ ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ. ತನ್ನ ಪತಿ ಪ್ರತಿನಿತ್ಯ ಮನೆಗೆ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದಾರೆ. ಅವರ ಕೆಲಸಗಳಲ್ಲಿ ಮಗ್ನರಾಗಿದ್ದಾರೆಯೇ ಹೊರತು ಎಲ್ಲೂ ಹೋಗಿಲ್ಲ ಎಂದು ಹೇಳುತ್ತಿದ್ದಾರೆ.
ಏಪ್ರಿಲ್ 24ಕ್ಕೆ ಮುಂದೂಡಿಕೆ: ಪ್ರಕರಣ ಸಂಬಂಧ ನಾಗರಾಜ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆ ನಡೆಸಿರುವ ಸೆಷನ್ಸ್ ಕೋರ್ಟ್ ಮುಂದಿನ ವಿಚಾರಣೆಯನ್ನು ಏಪ್ರಿಲ್ 24ಕ್ಕೆ ಮುಂದೂಡಿದೆ. ನಾನು ಹಲವು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು,
-ನನ್ನ ವಿರುದ್ಧ ಅಪಹರಣ ಹಾಗೂ ಕೊಲೆಬೆದರಿಕೆ ದೂರು ದಾಖಲಿಸಿರುವ ವ್ಯಕ್ತಿ ಬ್ಲ್ಯಾಕ್ ಅಂಡ್ ವೈಟ್ ದಂಧೆಯಲ್ಲಿ ತೊಡಗಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದು, ಆತನ ದೂರು ಆಧರಿಸಿ ನನ್ನನ್ನು ಬಂಧಿಸುವುದು ಸರಿಯಿಲ್ಲ. ಹೀಗಾಗಿ, ನನಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ ಕೋರಿ ನಾಗರಾಜ್ ಅರ್ಜಿಯಲ್ಲಿ ಕೋರಿದ್ದಾನೆ.