Advertisement
ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಅಲ್ಲಲ್ಲಿ ಪಾರಂಪರಿಕ ಯಕ್ಷಗಾನ ಉಳಿಸಿ ಬೆಳೆಸುವ ಕೆಲಸ ಮೇಳಗಳ ಹೊರತಾಗಿಯೂ ಹವ್ಯಾಸಿ ರಂಗದಲ್ಲೂ ನಡೆಯುತ್ತಿದೆ. ಯಕ್ಷಗಾನದ ಗಂಡುಮೆಟ್ಟಿನ ನೆಲ ಎಂದು ಪ್ರಸಿದ್ಧಿಯ ಬ್ರಹ್ಮಾವರದ ಸಮೀಪದ ಮಟಪಾಡಿ ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಆಶ್ರಯದಲ್ಲಿ ಮಟಪಾಡಿ ವೀರಭದ್ರ ನಾಯಕ್ ರಂಗಮಂಟಪದಲ್ಲಿ ನಡುಬಡಗು ತಿಟ್ಟಿನ ಪ್ರಸಿದ್ಧ ಕಲಾವಿದರಿಂದ ನಡೆದ ಸಂಪ್ರದಾಯ ಶೈಲಿಯ ಯಕ್ಷಗಾನ ಬಯಲಾಟ ಯಕ್ಷರಂಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಸ್ಮರಣೀಯ, ಅನುಸರಣೀಯ ಪ್ರದರ್ಶನವೆನಿಸಿಕೊಂಡು ಗತ ವೈಭವವನ್ನು ಸಾರಿತು. ಈ ರೀತಿಯ ಅನ್ಯತ್ರ ಅಲಭ್ಯವಾದ ಕಾರ್ಯಕ್ರಮ ಒಂದು ರೀತಿಯಲ್ಲಿ ಪ್ರಸ್ತುತ ಸ್ಥಿತಿಯಲ್ಲಿ ಸಾಹಸ ಎನಿಸಿತು.
Related Articles
Advertisement
ವೈಭವಯುತ ಪೌರಾಣಿಕ ಆಖ್ಯಾನಗಳಿಗೆ ಸಾಕ್ಷಿಯಾದ ಯುವ ಪ್ರೇಕ್ಷಕರು ಹಳೆಯ ಪರಂಪರೆಯ ಆಟದೊಳಗಣ ಹೊಸತನವನ್ನು ಕಂಡುಕೊಂಡರು. ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವ ಮಾತಿನಂತೆ ಹಿರಿಯ ಕಲಾವಿದರೊಂದಿಗೆ ಯುವ ಕಲಾವಿದರು ಮೇಳೈಸುವ ಮೂಲಕ ಪ್ರಸಂಗಗಳಿಗೆ ಕಳೆ ನೀಡಿ ನಡು ಬಡಗುತಿಟ್ಟಿನ ವೈಭವವನ್ನು ನಾವು ಮುಂದುವರಿಸಲು ಶಕ್ತರಿದ್ದೇವೆ, ಅದು ಸಾಧ್ಯವೂ ಇದೆ ಎಂದುವ ಸಂದೇಶವನ್ನು ಸಾರಿದರು.
ಪ್ರದರ್ಶನದ ಆದಿಯಿಂದ ಅಂತ್ಯದೊರೆಗೆ ಬೆಳ್ಳಿ ವರ್ಣದ ಭುಜಕೀರ್ತಿಗಳ (ಸಿಲ್ವರ್ ಕಲರ್) ಝಗಝಗಿಸುವಿಕೆ.ಕಟ್ಟು ಮೀಸೆಗಳು ಸದಾ ನೆನಪಿನಲ್ಲಿ ಉಳಿಯುವಂತೆ ಮಾಡಿದವು. ಈಗ ವೃತ್ತಿ ಮೇಳಗಳಲ್ಲಿ ಬೆರಳೆಣಿಕೆಯ ಕಲಾವಿದರು ಕಟ್ಟು ಮೀಸೆಯನ್ನು ಕಟ್ಟಿಕೊಳ್ಳುತ್ತಾರೆ. ಆದರೆ ಈ ಪ್ರದರ್ಶನದಲ್ಲಿ ಎಲ್ಲಾಪುರುಷ ಪಾತ್ರಧಾರಿಗಳು ರಾಜಿಯಿಲ್ಲದೆ ಕಟ್ಟು ಮೀಸೆಯೊಂದಿಗೆ ರಂಗಕ್ಕೆ ಬಂದಿದ್ದು ಹೆಚ್ಚುಗಾರಿಕೆ ಎನಿಸಿತು.
ಭಾಗಿಯಾದ, ಪಾತ್ರ ಗಳ ಮೂಲಕ ಹಿರಿಯ ಪರಂಪರೆಯ ಕಲಾವಿದರೊಂದಿಗೆ ಹೆಜ್ಜೆ ಹಾಕಿದ ಪ್ರತಿಭಾ ಸಂಪನ್ನ ಯುವ ಕಲಾವಿದರು, ಪ್ರದರ್ಶನಕ್ಕೆ ಸಾಕ್ಷಿಯಾದ ಯುವಕಲಾವಿದರು ಮತ್ತು ಸಂಯೋಜಕರು ಸಮಾರಂಭದ ಮೂಲಕ ಪಾರಂಪರಿಕ ಯಕ್ಷಗಾನದ ಉಜ್ವಲತೆಯನ್ನು ಕಂಡುಕೊಳ್ಳಬೇಕಾಗಿದೆ.
ರಾಮಾಶ್ವಮೇಧ ಕಥೆಯಲ್ಲಿನ ”ಮಾಯಾಪುರಿ ಮಾಹಾತ್ಮೆ”ಯಲ್ಲಿ ಹಿರಿಯ ಸ್ತ್ರೀ ವೇಷಧಾರಿಗಳಾದ ಹಾರಾಡಿ ರಮೇಶ್ ಗಾಣಿಗ ಅವರು ಮದನಾಕ್ಷಿಯಾಗಿ , ತಾರಾವಳಿಯಾಗಿ ವಿಷ್ಣುಮೂರ್ತಿ ಬಾಸ್ರಿ ಅವರು ಪರಂಪರೆಯ ಕಸೆ ಸ್ತ್ರೀ ವೇಷದ ಒಡ್ಡೋಲಗ ಸಹಿತ ನ್ಯಾಯ ಒದಗಿಸಿದರು. ಕುಮುದಿನಿಯಾಗಿ ಇನ್ನೋರ್ವ ಸ್ತ್ರೀ ವೇಷಧಾರಿ ಜಯಾನಂದ ಹೊಳೆಕೊಪ್ಪ ಅವರು ಅರ್ಥಪೂರ್ಣ ಮಾತುಗಳಲ್ಲೇ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಡರು. ಹಿರಿಯ ಅನುಭವಿ ಕಲಾವಿದರಾದ ಉಪ್ಪುಂದ ನಾಗೇಂದ್ರ ರಾವ್ ಪುಷ್ಕಳನಾಗಿ, ಬೆದ್ರಾಡಿ ನರಸಿಂಹ ಅವರು ಶತ್ರುಘ್ನನಾಗಿ, ಚಂದ್ರ ಕುಮಾರ್ ನೀರ್ಜೆಡ್ದು ನಾರದನಾಗಿ,ಆಲೂರು ಸುಧಾಕರ ದಮನನಾಗಿ, ಹಿರಿಯ ಹಾಸ್ಯ ಕಲಾವಿದ ಮಾಹಾಬಲ ದೇವಾಡಿಗ ಅವರು ದೂತಿಯಾಗಿ ಪ್ರಸಂಗಕ್ಕೆ ಪೂರ್ಣ ಪ್ರಮಾಣದಲ್ಲಿ ನ್ಯಾಯ ಒದಗಿಸಿದರು.
”ವೀರಮಣಿ ಕಾಳಗ”ದಲ್ಲಿ ಹಿರಿಯ ಕಲಾವಿದ ಪರಂಪರೆಯ ಕೊಂಡಿ ಎನಿಸಿಕೊಂಡಿರುವ ನರಾಡಿ ಭೋಜರಾಜ್ ಶೆಟ್ಟಿ ಅವರು ವೀರಮಣಿಯಾಗಿ ಸಾಂಪ್ರದಾಯಿಕ ಅಟ್ಟೆ ಇಟ್ಟು ಮಾಡಿರುವ ಕೆಂಪು ಮುಂಡಾಸಿನ ವೇಷದಲ್ಲಿ ರಂಗಸ್ಥಳವನ್ನು ಪೂರ್ಣವಾಗಿ ಆಕ್ರಮಿಸಿಕೊಂಡರು. ಈಗ ಅಟ್ಟೆ ಇಟ್ಟು ಮುಂಡಾಸು ವೇಷ ಮಾಡುವ ಕ್ರಮ ಮರೆಯಾಗಿದೆ. ಆ ಪರಂಪರೆಯ ವೇಷ ಕಟ್ಟಿಕೊಳ್ಳುವುದನ್ನು ನೋಡುವುದಕ್ಕಾಗಿಯೇ ಹಲವರು ಬಣ್ಣದ ಮನೆ(ಚೌಕಿ)ಯಲ್ಲಿ ಸೇರಿದ್ದರು. (ನರಾಡಿಯವರು ಮತ್ತು ಆಲೂರು ಸುಧಾಕರ ಅವರು ಅಟ್ಟೆ ಕಟ್ಟಿ ಕೊಳ್ಳುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ) ಹನುಮಂತನಾಗಿ ಬೇಳಂಜೆ ಸುಂದರ ಅವರು ಪರಂಪರೆಯ ಹಸುರು ಧಿರಿಸಿನ ವೇಷದಲ್ಲಿ ವಿಭಿನ್ನವಾಗಿ ಕಂಡು ಬಂದರು. ಈಗ ಎಲ್ಲಾ ಕಲಾವಿದರು ನಾಟಕೀಯ ಹನುಮಂತನ ಪಾತ್ರವನ್ನೇ ಮಾಡುವುದರಿಂದ ಯಕ್ಷಗಾನದ ಹನುಮಂತನ ವೇಷಭೂಷಣ ಕಾಣುವ ಭಾಗ್ಯ ದೊರಕಿತು. ಜನಾರ್ದನ ಗುಡಿಗಾರ್ ಬಂಗಾಡಿಯವರು ಕಟ್ಟು ಮೀಸೆ ಕಟ್ಟಿಕೊಂಡು ಶತ್ರುಘ್ನನಾಗಿ ಸಾಹಿತ್ಯಭರಿತ ಮಾತಿನಲ್ಲೇ ನೆನಪಿನಲ್ಲಿ ಉಳಿದರು.
ರಘುರಾಮ ಮಡಿವಾಳ ಮಂದಾರ್ತಿ ಅವರು ಈಶ್ವರನಾಗಿ, ಮುಂದಾಡಿ ಕೃಷ್ಣ ನಾಯ್ಕಮತ್ತು ಬೇಳಂಜೆ ಪ್ರಭಾಕರ ಶೆಟ್ಟಿ ಅವರು ಶುಭಾಂಗ- ರುಕ್ಮಾಂಗ ಜೋಡಿ ವೇಷದಲ್ಲಿ ಪುಂಡು ವೇಷಗಳ ಹಿತಮಿತ ವೈಭವವನ್ನು ತೋರಿದರು.
ಕುಂಜಾಲು ಶೈಲಿಯ ನೆನಪುಮಾಯಾಪುರಿ ಮತ್ತು ವೀರಮಣಿ ಕಾಳಗ ಎರಡೂ ಪ್ರಸಂಗಗಳಿಗೆ ಭಾಗವತರಾದ ಕಿಗ್ಗ ಹಿರಿಯಣ್ಣ ಆಚಾರ್ಯ ಮತ್ತು ನಾಗರಕೋಡಿಗೆ ನಾಗೇಶ್ ಕುಲಾಲ್ ಅವರು ತಮ್ಮ ಏರು ಶ್ರುತಿಯ ಕಂಠ ಸಿರಿಯ ಭಾಗವತಿಕೆಯ ಮೂಲಕ ನ್ಯಾಯ ಒದಗಿಸಿಕೊಟ್ಟರು. ಕಿಗ್ಗ ಅವರ ಕೆಲ ಹಾಡುಗಳಲ್ಲಿ ಮರೆಯಾಗುತ್ತಿರುವ ಕುಂಜಾಲು ಶೈಲಿಯ(ಭಾಗವತ ಶ್ರೇಷ್ಠ ದಿವಂಗತ ಶೇಷಗಿರಿ ಕಿಣಿ ಅವರ ಶೈಲಿ) ಭಾಗವತಿಕೆಯ ಹೆಚ್ಚುಗಾರಿಕೆ ಕಂಡು ಬಂದಿತು. ಮದ್ದಳೆಯಲ್ಲಿ ಶ್ರೀಧರ್ ಭಂಡಾರಿಯವರು, ಚಂಡೆಯಲ್ಲಿ ಅಗ್ರಗಣ್ಯರಾದ ಮಂದಾರ್ತಿ ರಾಮಕೃಷ್ಣ ಅವರು ರಂಗದ ಕಾವೇರಿಸಿದರು. ಕರ್ಣಾರ್ಜುನ ಕಣ್ಣಿಗೆ ಹಬ್ಬ ನಡು ಬಡಗು ತಿಟ್ಟಿನ ಮೇಲ್ಪಂಕ್ತಿಯ ಪ್ರಸಂಗಗಳಲ್ಲಿ ಒಂದಾದ ‘ಕರ್ಣಾರ್ಜುನ ಕಾಳಗ’ ಪ್ರೇಕ್ಷಕರಿಗೆ ಕುರುಕ್ಷೇತ್ರದ ದರ್ಶನವನ್ನು ಮಾಡಿಸಿತು. ಆರಂಭದಲ್ಲಿ ವೃಷಸೇನ ಕಾಳಗದಲ್ಲಿ ಕೊಳಲಿ ಕೃಷ್ಣ ಶೆಟ್ಟಿ ಅವರು ಅಬ್ಬರಿಸಿ ಕರ್ಣ ಸುತ ವೃಷಸೇನನಾಗಿ ತಾನಿನ್ನೂ ಚಿರ ಯುವಕ ಎನ್ನುವ ಸಂದೇಶ ಸಾರಿದರು. ಕೌರವನಾಗಿ ಹಿರಿಯ ಕಲಾವಿದ ಹಾರಾಡಿ ಸರ್ವೋತ್ತಮ ಗಾಣಿಗ ಅವರು, ಭೀಮನಾಗಿ ಆಜ್ರಿ ಉದಯ್ ಶೆಟ್ಟಿ, ಅರ್ಜುನನಾಗಿ ಆಜ್ರಿ ಅರುಣ್ ಶೆಟ್ಟಿ ಅವರು ಪರಂಪರೆಯ ಚೌಕಟ್ಟಿನಲ್ಲಿ ಅಭಿನಯಿಸಿ ನಾವೂ ಪರಂಪರೆಯ ಶೈಲಿ ಉಳಿಸುವಲ್ಲಿ ಬದ್ಧರಿದ್ದೇವೆ ಎನ್ನುವುದನ್ನು ತೋರ್ಪಡಿಸಿದರು. ಕರ್ಣನಾಗಿ ಅಜ್ರಿ ಗೋಪಾಲ್ ಗಾಣಿಗ ಅವರು ಭಾವ ಪೂರ್ಣ ಅಭಿನಯ , ತಮ್ಮ ಏರು ಶ್ರುತಿಯ ಕಂಠ ಸಿರಿಯಿಂದ ಸಂಪ್ರದಾಯಿಕವಾದ ಪರಿಪೂರ್ಣ ವೇಷಭೂಷಣದ(ನಾಡು ಬಡಗಿನಲ್ಲಿ ಕರ್ಣನ ವೇಷಗಾರಿಗೆ ವಿಶೇಷ) ಮೂಲಕ ರಂಗವನ್ನು ಆಕ್ರಮಿಸಿಕೊಂಡರು. ಇವರಿಗೆ ಇದಿರಾಗಿ ಅರ್ಜುನನಾಗಿ ಕೋಟ ಸುರೇಶ್ ಅವರು, ಕೃಷ್ಣನಾಗಿ ಸ್ತ್ರೀ ವೇಷಧಾರಿ ಮಾಧವ ನಾಗೂರು ಅವರು, ಶಲ್ಯನಾಗಿ ಕೋಡಿ ವಿಶ್ವನಾಥ್ ಗಾಣಿಗ ಅವರು ಪರಿಪೂರ್ಣವಾಗಿ ರಂಗವನ್ನು ಆಕ್ರಮಿಸಿಕೊಂಡು ಪ್ರಸಂಗದ ಶ್ರೀಮಂತಿಕೆ, ವೇಷಭೂಷಣಗಳ ಗತ ವೈಭವ, ಮಾತುಗಾರಿಕೆಯ ಮೂಲಕ ಯಕ್ಷ ರಂಗದಲ್ಲಿ ರಣರಂಗದ ಕಾವನ್ನು ನಿರ್ಮಾಣ ಮಾಡಿ ರಣರಂಗದ ಕಾವನ್ನು ನಿರ್ಮಾಣ ಮಾಡಿದರು. ಹಿಮ್ಮೇಳದ ಬಿಸಿ
ಕರ್ಣಾರ್ಜುನ ಕಾಳಗ ಪ್ರಸಂಗಕ್ಕೆ ಹಿಮ್ಮೇಳದಲ್ಲಿ ಭಾಗವತರಾಗಿ ಅನುಭವಿ, ಪೌರಾಣಿಕ ಪ್ರಸಂಗಗಳಿಗೆ ಹೇಳಿ ಮಾಡಿಸಿದಂತಹ ಹೆರಂಜಾಲು ಗೋಪಾಲ ಗಾಣಿಗ ಅವರು ಜತೆಯಲ್ಲಿ ಯುವ ಸಮರ್ಥ ಭಾಗವತ ಹೊಸಾಳ ಉದಯ್ ಕುಮಾರ್ ಅವರು ಕ್ಷಣ ಕ್ಷಣಕ್ಕೂ ತಮ್ಮ ಏರು ಶ್ರುತಿಯ ಪದ್ಯಗಳ ಮೂಲಕ ರೋಮಾಂಚನ ಮೂಡಿಸಿದರು. ರಂಗಸ್ಥಳದ ಕಾವನ್ನು ಕೊನೆಯವರೆಗೂ ಮೀನಾಕ್ಷಿ ಕಲ್ಯಾಣ ಮುಗಿದು ಮಂಗಳ ಪದ್ಯದ ವರೆಗೂ ಇಬ್ಬರು ಸಮರ್ಥ ಭಾಗವತರು ಉಳಿಸಿಕೊಂಡು ಮುಮ್ಮೇಳ ಕಲಾವಿದರ ಉತ್ಸಾಹ ಇನ್ನಷ್ಟು ಹೆಚ್ಚಿಸುವಂತೆ ಮಾಡಿ ಪ್ರಸಂಗಗಳ ಯಶಸ್ಸಿನಲ್ಲಿ ಬಹುದೊಡ್ಡ ಪಾಲು ಪಡೆದುಕೊಂಡರು. ಇಬ್ಬರು ಯಕ್ಷಗಾನದ ಅಪರೂಪದ ಪ್ರಸಂಗಗಳಿಗೆ ಹೊಂದುವಂತಹ ಹಲವು ರಾಗಗಳ ಬಳಕೆ ಮಾಡಿದ್ದು ಮತ್ತೆ ಮತ್ತೆ ಕೇಳಬೇಕು ಅನಿಸುವಂತಿತ್ತು. ರಂಗೇರಿದ ಮೀನಾಕ್ಷಿ ಕಲ್ಯಾಣದ ಬಿಸಿ ಮೀನಾಕ್ಷಿ ಕಲ್ಯಾಣದಲ್ಲಿ ಮೀನಾಕ್ಷಿಯಾಗಿ ಹೆನ್ನಾಬೈಲು ಸಂಜೀವ ಶೆಟ್ಟಿಯವರು ಯುವ ಕಲಾವಿದರು ನಾಚುವಂತೆ ಬಿರುಸಿನ, ಚುರುಕಿನ ನಾಟ್ಯದ ಮೂಲಕ ಕಸೆ ಸ್ತ್ರೀ ವೇಷಕ್ಕೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿದರು. ಕೊನೆಯಲ್ಲಿ ಈಶ್ವರನಾಗಿ ಹಿರಿಯ ಕಲಾವಿದ 79 ರ ಹರೆಯ ಐರೋಡಿ ಗೋವಿಂದಪ್ಪ ಅವರು ಪರಂಪರೆಯ ವೇಷ ಭೂಷಣದೊಂದಿಗೆ ಹಾರಾಡಿ ಶೈಲಿ ರುಂಡಮಾಲನಾಗಿ ಕಾಣಿಸಿಕೊಂಡು ಪ್ರದರ್ಶನದ ಕಳೆ ಹೆಚ್ಚಿಸಿದರು.ಸಂಜೀವ ಶೆಟ್ಟಿಯವರ ಮೀನಾಕ್ಷಿಗೆ ಸರಿ ಸಾಟಿಯಾಗಿ ಪದ್ಮಗಂಧಿನಿಯಾಗಿ ಪ್ರದೀಪ್ ನಾರ್ಕಳಿ, ಮೀನಾಕ್ಷಿಯ ಮಂತ್ರಿಯಾಗಿ ದಿನೇಶ್ ಕನ್ನಾರು ಅವರು ಆಕರ್ಷಕ ಮಂಡಿಗಳ ಮೂಲಕ ಗಮನ ಸೆಳೆದರು. ನಂದಿಯಾಗಿ ಮುಂದಾಡಿ ಕೃಷ್ಣ, ಸದ್ಯ ಮರೆಯಾಗಿರುವ ಜೋಡು ಮುಂಡಾಸಿನ ಕಿರಾತನ ಪಾತ್ರದಲ್ಲಿ ಬುಕ್ಕಿಗುಡ್ಡೆ ಮಾಹಾಬಲ ನಾಯ್ಕ ಅವರು ಗಮನ ಸೆಳೆದರು. ಶೂರಸೇನನಾಗಿ ಕಟ್ಟಿನ ಬೈಲು ಶಿವರಾಮ ಶೆಟ್ಟಿ, ಶೂರಸೇನನ ಮಂತ್ರಿಯ ಪಾತ್ರವನ್ನು ಪೇತ್ರಿ ಶ್ಯಾಮ ನಾಯ್ಕ್ ನಿರ್ವಹಿಸಿದರು. ಹಿರಿಯ ಮತ್ತು ಕಿರಿಯ ಕಲಾವಿದರು ಒಂದಾಗಿ ಪರಂಪರೆಯ ಯುದ್ಧ ನೃತ್ಯ ಸೇರಿ ಚೌಕಟ್ಟಿನೊಳಗೆ ವ್ಯವಹರಿಸಿ ಆಡಿದ ಪ್ರಸಂಗ ಅರ್ಥಪೂರ್ಣವಾಗಿ ಮಂಗಳವಾಯಿತು. ನಮ್ಮತನ, ಪರಂಪರೆ, ಮರೆಯಾದ ಶೈಲಿ, ಆಹಾರ್ಯ ಉಳಿಸಲು ಸಾಧ್ಯವಿದೆ. ಗತ ವೈಭವ ಮರುಕಳಿಸಲು ಸಾಧ್ಯವಿದೆ ಎನ್ನುವುದನ್ನು ಕಲಾವಿದರು, ಮೇಳಗಳ ಯಜಮಾನರು ಮತ್ತು ಪ್ರೇಕ್ಷಕರಿಗೆ ಈ ಪ್ರದರ್ಶನ ಸಾರಿ ಹೇಳಿತು. ಗಣ್ಯಾತಿ ಗಣ್ಯರು, ಹಲವು ಮೇಳಗಳ ಕಲಾವಿದರು, ಹವ್ಯಾಸಿ ಯಕ್ಷಗಾನ ಕಲಾವಿದರು ಸೇರಿ ಎರಡೂ ಸಾವಿರಕ್ಕೂ ಮೀರಿದ ಪ್ರೇಕ್ಷಕರು ಪ್ರದರ್ಶನಕ್ಕೆ ಸಾಕ್ಷಿಯಾಗಿ ಸಂಯೋಜನೆ, ಸಂಘಟನೆ ಮತ್ತು ಕಲಾವಿದರ ನಿರ್ವಹಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತಪಡಿಸಿದರು. ಇದೊಂದು ಅಚ್ಚಳಿಯದ ನೆನಪಾಗಿ ಉಳಿಯಿತು.