Advertisement

ನಾಡಪ್ರಭು ಸ್ಮಾರಕ ಅಭಿವೃದ್ಧಿಗೆ ರೂಪುರೇಷೆ

12:01 PM Mar 13, 2018 | |

ಬೆಂಗಳೂರು: ನಾಡಪ್ರಭು ಕೆಂಪೇಗೌಡರಿಗೆ ಸಂಬಂಧಿಸಿದ ಸ್ಮಾರಕಗಳ ಸಂರಕ್ಷಣೆ ಜತೆಗೆ 10 ಕೋಟಿ ರೂ. ವೆಚ್ಚದಲ್ಲಿ ನಾನಾ ಅಭಿವೃದ್ಧಿ ಕಾರ್ಯಗಳಿಗೆ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಮಾಗಡಿಯ ಕೆಂಪಾಪುರವನ್ನು ಸುಂದರ ಸ್ಮಾರಕ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

Advertisement

ನಗರದ ಎಂ.ಜಿ.ರಸ್ತೆಯ ಮೆಯೋಹಾಲ್‌ನಲ್ಲಿ ತಾತ್ಕಾಲಿಕವಾಗಿ ರಚನೆಯಾಗಿರುವ ಪ್ರಾಧಿಕಾರದ ಕಚೇರಿಯನ್ನು ಸೋಮವಾರ ಉದ್ಘಾಟಿಸಿ ನಂತರ ಪ್ರಾಧಿಕಾರದ ಮೂರನೇ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಂಪೇಗೌಡರಿಗೆ ಸಂಬಂಧಪಟ್ಟ ಹಾಗೂ ಅವರ ಕಾಲದ ಸ್ಮಾರಕಗಳ ಸಂರಕ್ಷಣೆ, ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಭೆಯಲ್ಲಿ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.

ಬೆಂಗಳೂರು ಹಾಗೂ ಸುತ್ತಮುತ್ತ ಕೆಂಪೇಗೌಡರ ನೂರಾರು ಸ್ಮಾರಕಗಳಿವೆ. ಮುಖ್ಯವಾಗಿ ಹುತ್ತರಿದುರ್ಗ, ಹುಲಿಯೂರುದುರ್ಗ, ಮಾಗಡಿಯ ಕೋಟೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಜತೆಗೆ ಹುಲಿಯೂರುದುರ್ಗ, ಮಾಗಡಿಯಲ್ಲಿರುವ ದೇವಸ್ಥಾನಗಳನ್ನು ಮುಜರಾಯಿ ಇಲಾಖೆಯಿಂದ ಅಭಿವೃದ್ಧಿಪಡಿಸುವಂತೆ ಕೋರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿರುವ ಎಲ್ಲ ಯೋಜನಾ ಪ್ರಾಧಿಕಾರದ ಪ್ರಮುಖರ ಸಭೆ ಕರೆದು ಅವರಿಂದ ಪ್ರಾಧಿಕಾರಕ್ಕೆ ಒಂದಿಷ್ಟು ಅನುದಾನ ಕೋರಲು ನಿರ್ಧರಿಸಲಾಗಿದೆ. ಮಾಗಡಿ ರಸ್ತೆಯ ಸುಮನಹಳ್ಳಿಯಲ್ಲಿ ಪ್ರಾಧಿಕಾರಕ್ಕೆ ಐದು ಎಕರೆ ಮಂಜೂರಾಗಿದ್ದು, ಸರ್ಕಾರದ ಮುಖ್ಯ ವಾಸ್ತುಶಿಲ್ಪಿಗಳಿಂದ ಸುಂದರ ವಿನ್ಯಾಸ ರೂಪಿಸಿ ಭವ್ಯ ಭವನ ನಿರ್ಮಾಣವಾಗಲಿದೆ. ನಗರದ ನಾಲ್ಕು ದಿಕ್ಕುಗಳಲ್ಲಿರುವ ಕೆಂಪೇಗೌಡ ಗೋಪುರಗಳನ್ನು ನವೀಕರಿಸಿ ಆಕರ್ಷಕ ವಾತಾವರಣ ನಿರ್ಮಿಸಿ ನಿರ್ವಹಿಸುವಂತೆ ಬಿಬಿಎಂಪಿಯನ್ನು ಕೋರಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸ್ಮಾರಕವಾಗಿ ಅಭಿವೃದ್ಧಿ: ಕೆಂಪೇಗೌಡರ ಸಮಾಧಿ ಸ್ಥಳವಿರುವ ಮಾಗಡಿಯ ಕೆಂಪಾಪುರವನ್ನು ಸುಂದರ ಸ್ಮಾರಕ ಹಾಗೂ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈಗಾಗಲೇ ಎಚ್‌.ಎಂ.ಕೃಷ್ಣಮೂರ್ತಿ ಅಧ್ಯಕ್ಷತೆಯ ಸಮಿತಿ ವರದಿ ಸಲ್ಲಿಸಿದ್ದು, ಕೆಂಪೇಗೌಡರ ಸಮಾಧಿಯಿರುವ ಕೆಂಪಾಪುರ ಗ್ರಾಮದಲ್ಲಿ 4.24 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು ಅಭಿವೃದ್ಧಿಪಡಿಸಬಹುದು ತಿಳಿಸಿದೆ.

Advertisement

ಗ್ರಾಮದ 30 ಮನೆಗಳನ್ನು ಒಂದು ಕಿ.ಮೀ. ವ್ಯಾಪ್ತಿಯ ಬೇರೆಡೆಗೆ ಸ್ಥಳಾಂತರಿಸಿ ಮನೆ ನಿರ್ಮಿಸಿಕೊಡಲು ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆ ಸಮಿತಿ ಸ್ವಾಧೀನ ಪ್ರಕ್ರಿಯೆ ನಡೆಸಿ ಸೂಕ್ತ ಪರಿಹಾರ ಕೊಡಲು ಕ್ರಮ ವಹಿಸುವುದು. ಆ ಸ್ಥಳವನ್ನು ಸ್ಮಾರಕ, ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ನಿರ್ಧರಿಸಲಾಯಿತು ಎಂದು ಹೇಳಿದರು.

ವೆಬ್‌ಸೈಟ್‌ ಆರಂಭ: ಪ್ರಾಧಿಕಾರದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ವೆಬ್‌ಸೈಟ್‌ ಆರಂಭಿಸಲು ನಿರ್ಧರಿಸಲಾಗಿದೆ. ಹಾಗೇ ಕೆಂಪೇಗೌಡರ ಕಾಲದ ಸ್ಮಾರಕಗಳು, ಅವರ ಚಿಂತನೆ, ದೂರದೃಷ್ಟಿ, ಇಂದಿನ ವಸ್ತುಸ್ಥಿತಿ ಕುರಿತ ಸಾಕ್ಷ್ಯಚಿತ್ರವನ್ನು ವಾರ್ತಾ ಮತ್ತು ಪ್ರಚಾರ ಇಲಾಖೆಯಿಂದ ನಿರ್ಮಿಸಲು ಉದ್ದೇಶಿಸಲಾಗಿದೆ. ಕೆಂಪೇಗೌಡರ ಭಾವಚಿತ್ರವನ್ನು ಬಿಡಿಸುವ ಜವಾಬ್ದಾರಿಯನ್ನು ಕರ್ನಾಟಕ ಚಿತ್ರಕಲಾ ಪರಿಷತ್‌ಗೆ ವಹಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಈಗಾಗಲೇ ಪ್ರಾಧಿಕಾರಕ್ಕೆ ಸರ್ಕಾರ ಐದು ಕೋಟಿ ರೂ. ಅನುದಾನ ನೀಡಿದ್ದು, ಸ್ವಲ್ಪ ಹಣ ಬಿಡುಗಡೆಯಾಗಿದೆ. ಬಿಬಿಎಂಪಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯ ವತಿಯಿಂದಲೂ ಕೆಂಪೇಗೌಡ ಸಂಶೋಧನಾ ಕೇಂದ್ರ ಸೇರಿದಂತೆ ಇತರೆ ಕೆಲಸಗಳಾಗಿವೆ. ಪ್ರಾಧಿಕಾರಕ್ಕೆ ಅನುದಾನದ ಕೊರತೆಯಿಲ್ಲ. ಕೆಂಪೇಗೌಡ ಮ್ಯೂಸಿಯಂ ಮೆಯೋಹಾಲ್‌ನಲ್ಲೇ ಉಳಿಯಲಿದೆ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ನಾರಾಯಣಸ್ವಾಮಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ.ಪ್ರಶಾಂತ್‌, ಎಚ್‌.ಎಂ.ಕೃಷ್ಣಮೂರ್ತಿ, ಪಾಲಿಕೆ ಸದಸ್ಯ ದ್ವಾರಕನಾಥ್‌ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next