Advertisement

ನಡಂಬೂರು ಶಾಲೆಗೆ ಬೇಕಿದೆ ಖಾಯಂ ಶಿಕ್ಷಕರು

10:31 AM Apr 04, 2022 | Team Udayavani |

ಹಾಲಾಡಿ: ಸರಕಾರಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದ್ದರೂ, ಶಾಲೆಗಳಲ್ಲಿ ಶಿಕ್ಷಕರ ನೇಮಕ ಸಹಿತ ಇನ್ನಿತರ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸರಕಾರ ಆದ್ಯತೆ ತೋರದಿರುವುದು ಮಾತ್ರ ದುರಂತವೇ ಸರಿ. ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿ ಗ್ರಾಮದ ನಡಂಬೂರು ಎಂಬ ತೀರಾ ಗ್ರಾಮೀಣ ಭಾಗದ ಶಾಲೆಯೊಂದರಲ್ಲಿ ಮಕ್ಕಳಿದ್ದರೂ, ಖಾಯಂ ಶಿಕ್ಷಕರಿಲ್ಲದ ಪರಿಸ್ಥಿತಿ.

Advertisement

ಕೆಲವು ಸಮಯಗಳಿಂದ ಬೇರೊಂದು ಶಾಲೆಯಿಂದ ಪ್ರಭಾರ ನೆಲೆಯಲ್ಲಿ ಶಿಕ್ಷಕರೊಬ್ಬರನ್ನು ಶಿಕ್ಷಣ ಇಲಾಖೆಯು ನಿಯೋಜಿಸಿದ್ದು, ಸದ್ಯದ ಮಟ್ಟಿಗೆ ಪಾಠ- ಪ್ರವಚನಕ್ಕೆ ಮಕ್ಕಳಿಗೆ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ ಎನ್ನುವ ಪ್ರಶ್ನೆ ಪೋಷಕರದ್ದಾಗಿದೆ.

60 ವರ್ಷಗಳ ಇತಿಹಾಸ

ನಡಂಬೂರಿನ ಈ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ 63 ವರ್ಷಗಳ ಇತಿಹಾಸವಿದೆ. 1959ರಲ್ಲಿ ಆರಂಭಗೊಂಡ ಈ ಶಾಲೆಯು 60 ವರ್ಷ ಗಳಿಗೂ ಹೆಚ್ಚು ಕಾಲದಿಂದ ಸಾವಿರಾರು ಮಂದಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿಕೊಳ್ಳಲು ನೆರ ವಾದ ವಿದ್ಯಾ ದೇಗುಲ ಇದಾಗಿದೆ.

16 ವಿದ್ಯಾರ್ಥಿಗಳು

Advertisement

ಒಂದರಿಂದ 5ನೇ ತರಗತಿಯವರೆಗೆ ಇರುವ ಈ ಶಾಲೆಯಲ್ಲಿ ಒಂದು ಕಾಲದಲ್ಲಿ 120 ಕ್ಕೂ ಅಧಿಕ ಮಂದಿ ಒಂದು ಶೈಕ್ಷಣಿಕ ವರ್ಷದಲ್ಲಿ ಕಲಿತ ಇತಿಹಾಸವಿದೆ. ಆದರೆ ಶಿಕ್ಷಕರ ಕೊರತೆ, ಮತ್ತಿತರ ಕಾರಣಗಳಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಸ್ತುತ ಈ ಶೈಕ್ಷಣಿಕ ಸಾಲಿನಲ್ಲಿ 16 ಮಂದಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಂದನೇ ತರಗತಿಗೆ 6 ಮಂದಿ ಸೇರ್ಪಡೆಗೊಂಡಿದ್ದರು.

2 ವರ್ಷದಿಂದ ಖಾಲಿ

ಹಿಂದೆ ಇಲ್ಲಿದ್ದ ಶಿಕ್ಷಕರೊಬ್ಬರು ಬೇರೆಡೆ ವರ್ಗಾವಣೆಗೊಂಡ ಬಳಿಕ ಇಲ್ಲಿ ಖಾಯಂ ಶಿಕ್ಷಕರ ಹುದ್ದೆ ಖಾಲಿಯಾಗಿದೆ. ಖಾಯಂ ಶಿಕ್ಷಕರಿಲ್ಲದೆ ಇರು ವುದು ಇದು 3ನೇ ವರ್ಷವಾಗಿದ್ದು, ಅಲ್ಲಿಂದೀಚೆಗೆ ಇಲ್ಲಿಗೆ ಬೇರೊಂದು ಶಾಲೆಯ ಶಿಕ್ಷಕರನ್ನು ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗಿದೆ. ಅವರು ವಾರಕ್ಕೆ 3 ದಿನ ಬರುತ್ತಾರೆ. ಇವರೊಂದಿಗೆ ಒಬ್ಬರು ಗೌರವ ಶಿಕ್ಷಕಿಯಿದ್ದಾರೆ. 2 ಶಿಕ್ಷಕ ಹುದ್ದೆಗಳು ಖಾಲಿಯಿದ್ದು, ಮುಂದಿನ ಶೈಕ್ಷಣಿಕ ವರ್ಷಾರಂಭಕ್ಕೂ ಮುನ್ನ ಭರ್ತಿಯಾಗಲಿ ಎನ್ನುವ ಬೇಡಿಕೆ ಊರವರದ್ದಾಗಿದೆ.

ಶೀಘ್ರ ನೇಮಕವಾಗಲಿ

ನಡಂಬೂರು ಶಾಲೆಯಲ್ಲಿ ಶಿಕ್ಷಕರ ಸಮಸ್ಯೆ ಅನೇಕ ಸಮಯಗಳಿಂದ ಇದೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟವರಿಗೆಲ್ಲ ಈಗಾಗಲೇ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಖಾಯಂ ಶಿಕ್ಷಕರ ನೇಮಕಾತಿಯಾದರೆ ಖಂಡಿತ ಮಕ್ಕಳ ಸಂಖ್ಯೆಯೂ ಹೆಚ್ಚಬಹುದು. ಈ ನಿಟ್ಟಿನಲ್ಲಿ ಶೀಘ್ರ ಶಿಕ್ಷಕರ ನೇಮಕಾತಿ ಮಾಡುವಲ್ಲಿ ಶಿಕ್ಷಣ ಇಲಾಖೆ ಕ್ರಮಕೈಗೊಳ್ಳಬೇಕಾಗಿದೆ. – ಕಿರಣ್‌ ಕುಮಾರ್‌ ಶೆಟ್ಟಿ ನಡಂಬೂರು, ಸ್ಥಳೀಯ ಗ್ರಾ.ಪಂ. ಸದಸ್ಯ

ಕೌನ್ಸಿಲಿಂಗ್‌ ಪ್ರಕ್ರಿಯೆ

ನಡಂಬೂರು ಶಾಲೆಗೆ ಸದ್ಯಕ್ಕೆ ತಾತ್ಕಲಿಕ ನೆಲೆಯಲ್ಲಿ ಶಿಕ್ಷಕರನ್ನು ನಿಯೋಜಿಸಲಾಗಿದೆ. ಈಗ ಕೌನ್ಸಿಲಿಂಗ್‌ ಪ್ರಕ್ರಿಯೆ ನಡೆಯುತ್ತಿದ್ದು, ಹೆಚ್ಚುವರಿ ಶಿಕ್ಷಕರಿದ್ದು, ಅವರನ್ನು ಖಾಲಿಯಿರುವ ಶಾಲೆಗಳಿಗೆ ನಿಯೋಜಿಸಲು ಕ್ರಮಕೈಗೊಳ್ಳಲಾಗುತ್ತಿದೆ. – ಅರುಣ್‌ ಕುಮಾರ್‌ ಶೆಟ್ಟಿ, ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next