Advertisement

ನಡಾಲ್‌ ಫ್ರೆಂಚ್‌ ಓಪನ್‌ ಆಚೆಗೂ ಮಿಂಚುವ ಅಗ್ರ ಕ್ರಮಾಂಕಿತ!

11:25 AM Sep 16, 2017 | |

ಟೆನಿಸ್‌ನಲ್ಲಿ ಸಾಮಾನ್ಯವಾಗಿ ಒಂದು ಮಾತು ಆಡುವುದನ್ನು ಗಮನಿಸಿದ್ದೇವೆ. ಪುರುಷರ ಟೆನಿಸ್‌ನಲ್ಲಿ ಹೆಚ್ಚು ವೈವಿಧ್ಯವಿದೆ. ಇಲ್ಲಿ 100ನೇ ರ್‍ಯಾಂಕಿಂಗ್‌ನ ಆಟಗಾರ ಕೂಡ ಆತನ ದಿನದಂದು ಅಗ್ರಶ್ರೇಯಾಂಕಿತ ಆಟಗಾರನನ್ನು ಸೋಲಿಸಬಲ್ಲ. ಇಲ್ಲಿ ಸ್ಪರ್ಧಾ ತುರುಸು ಕೂಡ ಅಧಿಕ. ಮಹಿಳಾ ಟೆನಿಸ್‌ ಆಧಿಪತ್ಯದಲ್ಲಿಯೇ ನೀರಸತನವಿದೆ. ಕ್ರಿಸ್‌ ಎವರ್ಟ್‌, ಮಾರ್ಟಿನಾ ನವ್ರಾಟಿಲೋವಾ, ಸ್ಟೆಫಿ ಗ್ರಾಫ್, ಮೊನಿಕಾ ಸೆಲೆಸ್‌, ಸೆರೆನಾ ವಿಲಿಯಮ್ಸ್‌…. ಈ ತರಹದ ಪ್ರಶಸ್ತಿ ವಿಜೇತರು ಆಯಾ ಕಾಲದ ಅಗ್ರಕ್ರಮಾಂಕಿರಾಗಿ ರಾಜ್ಯಭಾರ ಮಾಡುತ್ತಾರೆ.

Advertisement

ಒಂದೆರೆಡು ವರ್ಷಗಳ ಹಿಂದಿನವರೆಗೂ ಹೀಗೊಂದುವಾದ ಚಾಲ್ತಿಯಲ್ಲಿತ್ತು. ಅದು ನಿಜವೂ ಆಗಿತ್ತು. ಆದರೆ ಈಗ ಈ ವಾದ ತಿರುವುಮುರುವಾಗಿದೆ. 2017ರಲ್ಲಿ ನಾಲ್ಕು ಪುರುಷರ ಗ್ರ್ಯಾನ್‌ಸ್ಲಾಮ್‌ ಕೇವಲ ರೋಜರ್‌ ಫೆಡರರ್‌ ಹಾಗೂ ರಫಾಯೆಲ್‌ ನಡಾಲ್‌ ನಡುವೆ ಸಮಾನವಾಗಿ ಹಂಚಿಕೆಯಾಗಿದೆ. ಫೆಡರರ್‌ಗಳಿಸಿದ 19 ಹಾಗೂ ನಡಾಲ್‌ ಪಡೆದ 16ಗ್ರ್ಯಾನ್‌ಸ್ಲಾಮ್‌ ಜೊತೆಗೆ ನೊವಾಕ್‌ ಜೊಕೊವಿಚ್‌ಗಳಿಸಿದ 12 ಗ್ರ್ಯಾನ್‌ಸ್ಲಾಮ್‌ ವಿಶ್ವದ ಟಾಪ್‌ 4ರಲ್ಲಿ ಸ್ಥಾನ ಪಡೆದಿದೆ. 2003ರ ವಿಂಬಲ್ಡನ್‌ನಿಂದ ರೋಜರ್‌ ಫೆಡರರ್‌ರ ಪ್ರಶಸ್ತಿ ಅಭಿಯಾನ ಆರಂಭವಾದ ನಂತರ ನಡೆದ 58 ಗ್ರ್ಯಾನ್‌ಸ್ಲಾಮ್‌ಗಳಿಂದ ಕೇವಲ 10 ಚಾಂಪಿಯನ್‌ಗಳು ಮಾತ್ರ ಬೆಳಕಿಗೆ ಬಂದಿದ್ದಾರೆ. ಅವರಲ್ಲಿ ಸ್ಟಾನ್‌ ವಾವ್ರಿಂಕಾ ಹಾಗೂ ಇಂಗ್ಲೆಂಡ್‌ನ‌ ಆ್ಯಂಡಿ ಮರ್ರೆರದ್ದೇ ತಲಾ ಮೂರು ಗ್ರ್ಯಾನ್‌ಸ್ಲಾಮ್‌. ಈ ಐವರ ಹೊರತು ಉಳಿದಂತೆ ಐವರು ಒಂದು ಗ್ರ್ಯಾನ್‌ಸ್ಲಾಮ್‌ ಅದ್ಭುತಗಳು. ಈ ಮಾತಿನ ಅರ್ಥ ಇಷ್ಟೇ, ಮಹಿಳಾ ಟೆನಿಸ್‌ಗಿಂತ ಹೆಚ್ಚಾಗಿ ಪುರುಷರ ಟೆನಿಸ್‌ ಹೆಚ್ಚು ಚಲನಶೀಲವಾಗಿಲ್ಲ!

 ಇಂತಹ ಆರೋಪಗಳನ್ನು ಇದೀಗ ಯು.ಎಸ್‌.ಓಪನ್‌ ಗೆದ್ದಿರುವ ರಫಾಯೆಲ್‌ ನಡಾಲ್‌ ಸಂತೋಷದಿಂದ ಸ್ವೀಕರಿಸಬಹುದು. 31 ವರ್ಷದ ಸ್ಪಾನಿಷ್‌ ಆಟಗಾರ ನಡಾಲ್‌, ರೋಜರ್‌ಗಿಂತ ಕೇವಲ ಮೂರು ಪ್ರಶಸ್ತಿಗಳಿಂದಷ್ಟೇ ಹಿಂದಿದ್ದಾರೆ. ಅವತ್ತು ಮೆಲ್ಬೋನ್‌ನಲ್ಲಿ ರಫಾಯೆಲ್‌ನಡಾಲ್‌ ಹಾಗೂ ಫೆಡರರ್‌ ನಡುವಿನ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ನ ಅಂತಿಮ ಸೆಟ್‌ನಲ್ಲಿ ವಾಸ್ತವವಾಗಿ ನಡಾಲ್‌ 3-1ರಿಂದ ಮುಂದಿದ್ದರು. ಒಂದೊಮ್ಮೆ ಅವತ್ತು ನಡಾಲ್‌ ಗೆದ್ದಿದ್ದರೆ ಈಗ ಎಣಿಕೆಯಲ್ಲಿ ಫೆಡರರ್‌ ಬಳಿ 18 ಗ್ರ್ಯಾನ್‌ಸ್ಲಾಮ್‌ ಹಾಗೂ ನಡಾಲ್‌ 17 ಗಳಿಸಿರುತ್ತಿದ್ದರು. ಆದರೆ…..!

ಸವಾಲುಗಳ ಮಧ್ಯೆ ನಡಾಲ್‌ ಮಿಂಚು!
ನಡಾಲ್‌ ಈ ವರ್ಷ ಫ್ರೆಂಚ್‌ ಸೇರಿದಂತೆ ಎರಡು ಗ್ರ್ಯಾನ್‌ಸ್ಲಾಮ್‌ ಪಡೆದಿದ್ದಾರೆ. ನಿಜಕ್ಕಾದರೆ, ಅವರು ಗಾಯಗಳ ಸಮಸ್ಯೆಯ ಜೊತೆಗೆ ಕ್ಯಾರಿಯರ್‌ನ ಇತರ ವಿಷಯಗಳಲ್ಲಿ ಸಾಕಷ್ಟು ಗೊಂದಲಗಳನ್ನು ಹೊಂದಿದ ವರ್ಷವಿದು. ಫ್ರೆಂಚ್‌ ಓಪನ್‌ ನಂತರ ಅವರಿಗೆ ರ್ಯಾಕೆಟ್‌ ಹಿಡಿಯುವುದರಿಂದ ಗ್ರ್ಯಾನ್‌ಸ್ಲಾಮ್‌ ಗೆಲ್ಲುವವರೆಗೆ, ನಿರ್ದಿಷ್ಟಪಡಿಸುವುದಾದರೆ 14 ಗ್ರ್ಯಾನ್‌ಸ್ಲಾಮ್‌ ಗೆಲ್ಲುವವರೆಗೆ ಮಾರ್ಗದರ್ಶಕರಾಗಿದ್ದ ಚಿಕ್ಕಪ್ಪ ಟೋನಿ ರಿಚಿ ತಮ್ಮ ಕೋಚ್‌ ಸ್ಥಾನವನ್ನು ಬಿಟ್ಟುಕೊಟ್ಟರು. ನಡಾಲ್‌ ಮಾಜಿ ಟೆನಿಸಿಗ ಕಾರ್ಲೋಸ್‌ ಮೋಯಾ ಹಾಗೂ ಫ್ರಾನ್ಸಿಸ್ಕೋ ರೋಗ್‌ರನ್ನು ತಮ್ಮ ತಂಡದೊಳಗೆ ಸೇರಿಸಿಕೊಳ್ಳುವುದರ ಅರ್ಥ ಚಿಕ್ಕಪ್ಪನಿಗಾಗಿತ್ತು. ಸದ್ಯ ನಡಾಲ್‌ ಯಾವುದೇ ಕೋಚ್‌ ಇಲ್ಲದೆ ಆಡುತ್ತಿದ್ದಾರೆ. ಬರುವ ವರ್ಷ ಆತ್ಮೀಯ ಸ್ನೇಹಿತ ಮೋಯಾ ಸಲಹೆಗಳೊಂದಿಗೆ ಜೊತೆಯಲ್ಲಿರುತ್ತಾರೆ.

 ಅದೃಷ್ಟಕ್ಕೆ ಈ ವರ್ಷದ ಅಮೆರಿಕನ್‌ ಓಪನ್‌ ಗಮನಾರ್ಹವಾಗಿ ದುರ್ಬಲವಾಗಿತ್ತು. ಮರ್ರೆ, ಜೊಕೊವಿಚ್‌ ಅವರಷ್ಟೇ ಅಲ್ಲದೆ ವಾವ್ರಿಂಕಾ, ನಿಶಿಕೋರಿ, ರೋನಿಕ್‌ ಸ್ಪರ್ಧಾಕಣದಲ್ಲಿರಲಿಲ್ಲ. ರೋಜರ್‌ ಕ್ವಾರ್ಟರ್‌ ಫೈನಲ್‌ ಹಂತದಲ್ಲಿಯೇ ಪರಾಜಿತರಾಗಿದ್ದು ನಡಾಲ್‌ರಿಗೆ ಸಹಕಾರಿಯಾಯಿತು. ಗೆಲುವಿನ ಹಿರಿಮೆಯನ್ನು ಇಂತಹ ವಿಶ್ಲೇಷಣೆಗಳಿಂದ ಲಘುಗೊಳಿಸಬಾರದು ಎಂಬ ವಾದವೂ ಇದೆ. ಒಂದೊಂದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗೂ ಮುಂದಿನ ದಿನಗಳಲ್ಲಿ ನಡಾಲ್‌, ರೋಜರ್‌ ನಡುವಿನ ಸಾರ್ವಕಾಲಿಕ ಶ್ರೇಷ್ಠರನ್ನು ನಿಕ್ಕಿಪಡಿಸುವ ಸಾಮರ್ಥ್ಯವಿರುವಾಗ  ಗೆಲುವಷ್ಟೇ ಲೆಕ್ಕಕ್ಕೆ ಸಿಗಲಿದೆ.

Advertisement

 ನಡಾಲ್‌ ಸದ್ಯದ ವಿಶ್ವದ ಅಗ್ರಕ್ರಮಾಂಕಿತ ಆಟಗಾರ. 2017ರಲ್ಲಿ ಮಾಂಟೆ ಕಾರ್ಲೋ, ಮ್ಯಾಡ್ರಿಡ್‌ಗಳಲ್ಲೂ ಅವರು ಎಟಿಪಿ ಟೂರ್ನಿಯಲ್ಲಿ ಜಯಭೇರಿ ಬಾರಿಸಿದ್ದಾರೆ. ಗ್ರ್ಯಾನ್‌ಸ್ಲಾಮ್‌ ಲೆಕ್ಕವನ್ನು ಬದಿಗಿರಿಸಿ, “ಗಾಯಾಳು ಆದ ಪ್ರಸಂಗಗಳನ್ನು ಎಣಿಸಿದರೆ ನಡಾಲ್‌ರ ವಿಕಿಪೀಡಿಯಾ ಪುಟದಲ್ಲಿಯೇ 27 ಬಾರಿ “ಇಂಜುರಿ ಎಂಬ ಸಂದರ್ಭ ಉಲ್ಲೇಖವಾಗಿದೆ. ಗಾಯಗಳಿಗೆ ಸುಲಭತುತ್ತು ಎಂದು ವರ್ಣಿತವಾದ ಜೊಕೊವಿಕ್‌ರ ವಿಕಿ ಪುಟ ಕೇವಲ 12 ಬಾರಿ ಇಂಜುರಿ ಮಾತಾಡಿದೆ. ರೋಜರ್‌ ಫೆಡರರ್‌ರಂತೂ ನಡಾಲ್‌ಗಿಂತ 9 ಬಾರಿ ಕಡಿಮೆ ಸನ್ನಿವೇಶಗಳಲ್ಲಿ ಗಾಯಾಳುವಾಗಿದ್ದಾರೆ. ನೆನಪಿರಲಿ, ಗಾಯವೆಂಬುದು ಆಟಗಾರನ  ಸಾಮರ್ಥ್ಯದ ಜೊತೆಗೆ ಆತ್ಮವಿಶ್ವಾಸವನ್ನೂ ಕುಗ್ಗಿಸಿಬಿಡುತ್ತದೆ.

 ಗಾಯ ಕಾರಣ, ನಡಾಲ್‌ ಅಲ್ಲದ ರಫಾ!
 ಈ ವ್ಯಾಖ್ಯೆ ನಡಾಲ್‌ರ ವಿಷಯದಲ್ಲಿ ಕೂಡ ಅಕ್ಷರಶಃ ನಿಜವಾಗಿದೆ. 2014ರ ಯು.ಎಸ್‌.ಓಪನ್‌ ಗೆದ್ದ ನಂತರ ರಫಾಯೆಲ್‌ “ನಡಾಲ್‌ ಆಗಿರಲಿಲ್ಲ! 2015ರಲ್ಲಿ ತಮ್ಮ ಕ್ಯಾರಿಯರ್‌ನಲ್ಲಿ ಗ್ರ್ಯಾನ್‌ಸ್ಲಾಮ್‌  ಇಲ್ಲದ ಅಪರೂಪದ ಬರದ ವರ್ಷವನ್ನು ಅನುಭವಿಸಿದರು. ಫ್ರೆಂಚ್‌ ಓಪನ್‌ನ ಹೀನಾಯ ಸೋಲು ಕೂಡ ಮನಸ್ಥಿತಿಯನ್ನು ಉತ್ತಮಪಡಿಸುವಂಥದಲ್ಲ. ಈ ವರ್ಷ ಆಸ್ಟ್ರೇಲಿಯನ್‌ ಓಪನ್‌ನ ಮೊದಲ ಸುತ್ತಿನ ಪರಾಭವ ಗಾಯದ ಮೇಲೆ ಉಪ್ಪು ಎರಚಿತು, ಅಷ್ಟೇ! 

 ಖ್ಯಾತ ಆಟಗಾರರ ಟೆನಿಸ್‌ ಹಸಿವು ಪ್ರಶ್ನಾತೀತ. ಅವರು ತಾದಾತ್ಮತೆ ಅವರ್ಣನೀಯ. ಫೆಡರರ್‌ ಇರಲಿ, ನಡಾಲ್‌ ಆಗಲಿ ಟೆನಿಸ್‌ಗಾಗಿ ಜೀವ ಬಿಡುತ್ತಾರೆ. ಪರಿಣಾಮ 2017ರ ಅಷ್ಟೊ ಗ್ರ್ಯಾನ್‌ಸ್ಲಾಮ್‌ಗಳನ್ನು ಈ ಇಬ್ಬರೇ ಹಂಚಿಕೊಳ್ಳುತ್ತಾರೆ. ನಡಾಲ್‌ ತಮ್ಮ ಕ್ಯಾರಿಯರ್‌ನಲ್ಲಿ 862 ಗೆಲುವು ಹಾಗೂ 183 ಸೋಲುಗಳ ಅನುಪಾತದ ನಂತರವೂ ರ್ಯಾಕೆಟ್‌ ಝಳಪಿಸಲು ಮತ್ತಷ್ಟು ಉತ್ಸುಕರಾಗುತ್ತಾರೆ ಎಂದರೆ ಅವರ ಆಟದ ಪ್ರೀತಿಗೆ ದೊಡ್ಡ ಸಲಾಂ.

ಟೆನಿಸ್‌ ವಿಶ್ವದಲ್ಲಿ ನಡಾಲ್‌, ಫೆಡರರ್‌ ಮುಖಾಮುಖೀ ದಾಖಲಾರ್ಹ ಚರಿತ್ರೆ. ಇವರಿಬ್ಬರ 37 ಮುಖಾಮುಖೀಯಲ್ಲಿ 23-14ರಿಂದ ನಡಾಲ್‌ ಮೇಲುಗೈ ಸಾಧಿಸಿದ್ದಾರೆ. ಗ್ರಾನ್‌ಸ್ಲಾಮ್‌ನಲ್ಲಿ 9-3ರ ಹಿಡಿತ ಅವರದ್ದು. ವಿಚಿತ್ರ ಎಂದರೆ 2012ರ ನಂತರ ಮತ್ತೂಮ್ಮೆ ಫೆಡರರ್‌ ಗ್ರ್ಯಾನ್‌ಸ್ಲಾಮ್‌ ಗೆಲ್ಲುತ್ತಾರೆ. 2014ರ ತರುವಾಯ ಇದೇ ಮೊದಲ ಬಾರಿಗೆ ನಡಾಲ್‌ ಇನ್ನೊಂದು ಗ್ರ್ಯಾನ್‌ಸ್ಲಾಮ್‌ ಗೆಲ್ಲುತ್ತಾರೆ. ವರ್ಷಾಂತ್ಯಕ್ಕೆ ಇವರಿಬ್ಬರೇ ಎಲ್ಲ ನಾಲ್ಕು ಗ್ರ್ಯಾನ್‌ಸ್ಲಾಮ್‌ ಗೆಲ್ಲುತ್ತಾರೆ. ಈ ಸಂದರ್ಭದಲ್ಲಿ ನಡಾಲ್‌ ಅವರು ಫೆಡರರ್‌ರ 19 ಗ್ರ್ಯಾನ್‌ಸ್ಲಾಮ್‌ ದಾಖಲೆಯನ್ನು ಮುರಿದು ಮುನ್ನಡೆಯಲಿದ್ದಾರೆಯೇ ಎಂಬ ಪ್ರಶ್ನೆ ಏಳುತ್ತಿದೆ.

ಫಿಟ್‌ನೆಸ್‌ ಇದ್ದರೆ ನಡಾಲ್‌ಗೆ ಸಾಟಿಯಿಲ್ಲ!
ರೋಜರ್‌ ಬರುವ ವರ್ಷ ಕನಿಷ್ಠ ಮೂರು ಗ್ರ್ಯಾನ್‌ಸ್ಲಾಮ್‌ ಆಡುವಷ್ಟು ಫಿಟ್‌ನೆಸ್‌ ಪಡೆದಿರುತ್ತಾರೆ ಎಂದು ಭಾವಿಸಿ ಕನಿಷ್ಠ ಒಂದು ಗ್ರ್ಯಾನ್‌ಸ್ಲಾಮ್‌ ಜಯ ಅವರನ್ನು 20 ಗ್ರ್ಯಾನ್‌ಸ್ಲಾಮ್‌ ಗೆದ್ದ ಆಟಗಾರ ಎಂಬ ಸಿಂಹಾಸನದಲ್ಲಿ ಕೂರಿಸುತ್ತದೆ.  ಐದು ವರ್ಷ ಚಿಕ್ಕವರಾದ ನಡಾಲ್‌ ತಮ್ಮದೇ ಕ್ಷೇತ್ರ ರೋಲ್ಯಾಂಡ್‌ ಗ್ಯಾರಸ್‌ನಲ್ಲಿ 19ರ ಗುರಿ ಮುಟ್ಟಲೂ ಮೂರು ವರ್ಷ ಅಡಬೇಕು. ಫಿಟ್‌ನೆಸ್‌ ಇದ್ದರೆ ಅದು ಕಷ್ಟ ಅಲ್ಲ. ಟೆನಿಸ್‌ ಪಂಡಿತರ ಪ್ರಕಾರ, ಫೆಡರರ್‌ ಮುಖ್ಯ ವರ್ಷಗಳು ಈಗಾಗಲೇ ಮುಗಿದಿರುವುದರಿಂದ ನಡಾಲ್‌ ಗ್ರ್ಯಾನ್‌ಸ್ಲಾಮ್‌ ಗಳಿಕೆಯಲ್ಲಿ ಅಗ್ರ ಸ್ಥಾನ ಪಡೆಯುವ ಸಂಭಾವ್ಯತೆ ಹೆಚ್ಚು. ಬರುವ ವರ್ಷ ಫೆಡರರ್‌ ಎರಡು ಗ್ರ್ಯಾನ್‌ಸ್ಲಾಮ್‌ ಗೆದ್ದುಬಿಟ್ಟರೆ ಮಾತ್ರ ನಡಾಲ್‌ರಿಗೆ ಕಷ್ಟ ಕಷ್ಟ. ಇದರ ಜೊತೆಗೆ ಎಲ್ಲ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಪರಿಣತಿ ಹೊಂದಿರುವ ನೊವಾಕ್‌ ಜೊಕೊವಿಕ್‌ ಮತ್ತೆ ಫಾರಂಗೆ ಬಂದರೂ ನಡಾಲ್‌ ಬಸವಳಿಯಬೇಕಾಗುತ್ತದೆ!

ಕೊನೆ ಕೊಸರು
16ಗ್ರ್ಯಾನ್‌ಸ್ಲಾಮ್‌ಗಳಲ್ಲಿ 10 ಫ್ರೆಂಚ್‌ ಓಪನ್‌ ಗೆದ್ದಿರುವ ರಾಫೆಲ್‌ ನಡಾಲ್‌ರ ಸಾಧನೆ ಅವರ ಪ್ರತಿಭೆಯನ್ನೂ ತೋರಿಸುತ್ತದೆ ಮತ್ತು ಅದೇ ವೇಳೆ, ಒಂದು ಮಟ್ಟಿನ ದೌರ್ಬಲ್ಯದತ್ತಲೂ ಬೆಳಕು ಚೆಲ್ಲುತ್ತದೆ, ಅಲ್ಲವೇ?

 ಮಾ.ವೆಂ.ಸ.ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next