Advertisement

ಪ್ಯಾರಿಸ್‌ನಲ್ಲಿ ಸಾಮ್ರಾಜ್ಯ ಸ್ಥಾಪಿಸಿದ ನಡಾಲ್‌

10:31 PM Jun 12, 2019 | Team Udayavani |

ಈ ಋತುವಿನ ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಸ್ಪೇನಿನ ರಫೆಲ್‌ ನಡಾಲ್‌ 12ನೇ ಫ್ರೆಂಚ್‌ ಪ್ರಶಸ್ತಿ ಜಯಿಸಿ ಸಂಭ್ರಮಿಸಿದ್ದಾರೆ.

Advertisement

ಸಿಂಗಲ್ಸ್‌ ವಿಭಾಗದ ಫೈನಲ್‌ ಪಂದ್ಯ 2018ರ ಪ್ರಶಸ್ತಿ ಸಮರದ ಪುನರಾವರ್ತನೆ. ಆ ಫೈನಲ್ಸ್‌ನಲ್ಲಿ ರಫೆಲ್‌ ನಡಾಲ್‌-ಡೊಮಿನಿಕ್‌ ಥೀಮ್‌ ಪ್ರಶಸ್ತಿಗಾಗಿ ಕಾದಾಟ ನಡೆಸಿದ್ದರು. ಈ ಬಾರಿಯೂ ಅವರಿಬ್ಬರೇ ಫೈನಲ್‌ನಲ್ಲಿ ಮುಖಾಮುಖೀ ಯಾದದ್ದು ಕಾಕತಾ ಳೀಯ. 2018ರ ಫೈನಲ್‌ ಸೋತಿದ್ದ ಥೀಮ್‌ ಈ ಬಾರಿ ಹೆಚ್ಚು ಪ್ರಬುದ್ಧತೆಯಿಂದ ಆಡಿದರೂ ಕ್ಲೇ ಕೋರ್ಟ್‌ ಕಿಂಗ್‌ ನಡಾಲ್‌ ಆಟದ ಎದುರು ಸೋಲೊಪ್ಪಿ ಕೊಳ್ಳಬೇಕಾಯಿತು.

2005ರಿಂದ ನಡಾಲ್‌ ಸಾಮ್ರಾಜ್ಯ
2005ರಲ್ಲಿ ಪ್ಯಾರಿಸ್‌ ಅಂಗಳದಲ್ಲಿ ಫ್ರೆಂಚ್‌ ಓಪನ್‌ ಕೂಟವನ್ನು ಆರಂಭಿಸಿದ ನಡಾಲ್‌ ಆನಂತರ ಹಿಂದಿರುಗಿ ನೋಡಿದ್ದೆ ಇಲ್ಲ. ನಡಾಲ್‌ ಮೊದಲ ಕೂಟದಲ್ಲೇ ಪ್ರಶಸ್ತಿ ಗೆದ್ದು ಮೊದಲ ಪ್ರಯತ್ನದಲ್ಲೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಜಯಿಸಿದ 2ನೇ ಟೆನಿಸಿಗ ಎನಿಸಿಕೊಂಡರು. ಅನಂತರ‌ ಅವರು ಪ್ಯಾರಿಸ್‌ನಲ್ಲಿ ತಮ್ಮದೇ ಸಾಮ್ರಾಜ್ಯ ಸ್ಥಾಪಿಸಿಕೊಂಡಿದ್ದಾರೆ. 2005 ರಿಂದ 2019ರ ವರೆಗೆ 15 ಆವೃತ್ತಿಗಳು ನಡೆದಿದ್ದು, ಅವುಗಳಲ್ಲಿ 12 ಪ್ರಶಸ್ತಿ ನಡಾಲ್‌ ಪಾಲಾಗಿದೆ. ಇಲ್ಲಿ ನಡಾಲ್‌ 3ನೇ ಬಾರಿ ಹ್ಯಾಟ್ರಿಕ್‌ ಸಾಧಿಸಿದ್ದಾರೆ. 2005-08ರ ವರಗೆ ಸತತ 4 ಸಲ, 2010-14 ತನಕ 5 ಬಾರಿ. ಇದೀಗ 2017, 18,19 ಸತತ 3ನೇ ಬಾರಿ ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದಿದ್ದಾರೆ.

18ನೇ ಗ್ರ್ಯಾನ್‌ ಸ್ಲಾಮ್‌ ಕಿರೀಟ
ನಡಾಲ್‌ಗೆ ಇದು 18ನೇ ಗ್ರ್ಯಾನ್‌ಸ್ಲಾಮ್‌ ಕಿರೀಟ. ಇದರೊಂದಿಗೆ ನಡಾಲ್‌ಗೆ ಒಂದೇ ಸ್ಲಾಮ್‌ ಪ್ರಶಸ್ತಿಯನ್ನು 12 ಬಾರಿ ಗೆದ್ದ ಮೊದಲ ಟೆನಿಸಿಗ ಎಂಬ ಹೆಗ್ಗಳಿಕೆೆ. ಇದೀಗ ನಡಾಲ್‌ 20 ಪ್ರಮುಖ ಪ್ರಶಸ್ತಿಗಳನ್ನು ಜಯಿಸಿದ ರೋಜರ್‌ ಫೆಡರರ್‌ ಅವರ ದಾಖಲೆಯಿಂದ ಕೇವಲ 2 ಹೆಜ್ಜೆ ಹಿಂದಿದ್ದು, ಜೊಕೋವಿಕ್‌ ಅವರಿಂದ 3 ಹೆಜ್ಜೆ ಮುಂದಿದ್ದಾರೆ. ವಿಶ್ವದ 2ನೇ ರ್‍ಯಾಂಕಿನ ಆಟಗಾರ ಪ್ಯಾರಿಸ್‌ನಲ್ಲಿ ಒಟ್ಟು 93 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಕೇವಲ 2 ಬಾರಿ ಸೋತಿದ್ದಾರೆ.

– ರಮ್ಯಾ ಕೆದಿಲಾಯ

Advertisement
Advertisement

Udayavani is now on Telegram. Click here to join our channel and stay updated with the latest news.

Next