Advertisement

ನಡಾಲ್‌-ಫೆಡರರ್‌ ಸೆಮಿಫೈನಲ್‌ ಸೆಣಸಾಟ

12:30 AM Mar 17, 2019 | |

ಇಂಡಿಯನ್‌ ವೆಲ್ಸ್‌: ಇಂಡಿಯನ್‌ ವೆಲ್ಸ್‌ ಕೂಟದ ಕ್ವಾರ್ಟರ್‌ ಪೈನಲ್‌ ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೆನಿಸ್‌ ದಿಗ್ಗಜರಾದ ರಫೆಲ್‌ ನಡಾಲ್‌, ರೋಜರ್‌ ಫೆಡರರ್‌ ಈಗ ಸೆಮಿಫೈನಲ್‌ನಲ್ಲಿ ಪರಸ್ಪರ ಎದುರಾಗಲಿದ್ದಾರೆ. ಇಲ್ಲಿ ನಡೆದ ಪುರುಷರ ವಿಭಾಗದ ಪಂದ್ಯದಲ್ಲಿ ನಡಾಲ್‌ ಭಾರೀ ಹೋರಾಟ ನೀಡಿದ ರಶ್ಯದ ಕರೆನ್‌ ಕಶನೋವ್‌ ಅವರನ್ನು 7-6 (7-2), 7-6 (7-2) ಸೆಟ್‌ಗಳಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಫೆಡರರ್‌ ಪೋಲೆಂಡ್‌ನ‌ ಹ್ಯೂಬರ್ಟ್‌ ಹರ್ಕಾಝ್ ವಿರುದ್ಧ 6-4, 6-4 ಅಂತರದ ಜಯ ಸಾಧಿಸಿದರು.

Advertisement

ಎರಡೂ ಸೆಟ್‌ಗಳಲ್ಲೂ ಕರೆನ್‌ ಅವರಿಂದ ನಡಾಲ್‌ ತೀವ್ರ ಪೈಪೋಟಿ ಎದುರಿಸಿದರು. ಮೊದಲ ಸೆಟ್‌ನ ಆರಂಭದಲ್ಲಿ ನಡಾಲ್‌ ಮುನ್ನಡೆಯಲ್ಲಿದ್ದರೂ ಕರೆನ್‌ ದಿಟ್ಟ ಉತ್ತರ ನೀಡಿ ಆಟದ ಕುತೂಹಲವನ್ನು ಹೆಚ್ಚಿಸಿತೊಡಗಿದರು. ಸ್ಪರ್ಧೆ ಟೈ ಬ್ರೇಕರ್‌ಗೆ ವಿಸ್ತರಿಸಲ್ಪಟ್ಟಿತು. ಇಲ್ಲಿ ನಡಾಲ್‌ಗೆ ಅದೃಷ್ಟ ಒಲಿಯಿತು. ದ್ವಿತೀಯ ಸೆಟ್‌ನಲ್ಲೂ ಇವರಿಬ್ಬರ ನಡುವೆ ತೀವ್ರ ಹೋರಾಟ ನಡೆಯಿತು. ಈ ಸೆಟ್‌ ಕೂಡ ಟೈ ಬ್ರೇಕರ್‌ಗೆ ಸಾಗಿತು. ಇಲ್ಲಿಯೂ ನಡಾಲ್‌ ಅನುಭವ ನೆರವಿಗೆ ಬಂತು.

“ನನ್ನ ಯೋಜನೆ ಹಾಗೂ ಗುರಿ ನಾಳಿನ ಪಂದ್ಯಕ್ಕೆ ಸಿದ್ಧವಾಗುವುದು. ನನ್ನ ಮತ್ತು ಫೆಡರರ್‌ ವೃತ್ತಿಜೀವನದಲ್ಲಿ ಏನೇ ನಡೆದಿದ್ದರೂ ಇದಕ್ಕೆ ಹೊರತಾದ ಉತ್ತಮ ಬಾಂಧವ್ಯ ಹೊಂದಿದ್ದೇವೆ. ನಾವಿಬ್ಬರೂ ಮತ್ತೂಮ್ಮೆ ಅತ್ಯಂತ ಪ್ರಮುಖ ಸಂಗತಿಗಾಗಿ ಹೋರಾಡಲಿದ್ದೇವೆ’ ಎಂದಿದ್ದಾರೆ ನಡಾಲ್‌. 

ಫೆಡರರ್‌ಗೆ ಸುಲಭ ಜಯ
ಇನ್ನೊಂದು ಸೆಮಿಫೈನಲ್‌ನಲ್ಲಿ ರೋಜರ್‌ ಫೆಡರರ್‌ ಪೋಲೆಂಡ್‌ನ‌ ಹ್ಯೂಬರ್ಟ್‌ ಹರ್ಕಾಝ್ ಅವರನ್ನು ನೇರ ಗೇಮ್‌ಗಳಿಂದ ಸುಲಭದಲ್ಲಿ ಸೋಲಿಸಿದರು. “ನಡಾಲ್‌ ಎದುರಿನ ಆಟ ಈ ಕೋರ್ಟ್‌ನಲ್ಲಿ ಬೇರೆಯೇ ಶಕ್ತಿ ತುಂಬಲಿದೆ. ಪ್ರಾಮಾಣಿಕವಾಗಿ ಹೇಳುವುದಾದರೇ ಕಳೆದ ಐದು ಪಂದ್ಯಗಳು ಇಲ್ಲಿ ಗಣನೆ ಬರಲಿದೆ ಎಂಬ ಬಗ್ಗೆ ನಾನು ಯೋಚಿಸಿಲ್ಲ’ ಎಂದು ಫೆಡರರ್‌ ಹೇಳಿದ್ದಾರೆ. ನಡಾಲ್‌ 5 ಬಾರಿಯ ಇಂಡಿಯನ್‌ ವೆಲ್ಸ್‌ ಚಾಂಪಿಯನ್‌ ಫೆಡರರ್‌ ವಿರುದ್ಧ 39ನೇ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ. ಕಳೆದ 38 ಮುಖಾಮುಖೀಯಲ್ಲಿ ನಡಾಲ್‌ 23-15 ಜಯ ದಾಖಲೆ ಹೊಂದಿದ್ದರೂ, ಹಾರ್ಡ್‌ ಕೋರ್ಟ್‌ ಕೂಟಗಳಲ್ಲಿ ನಡಾಲ್‌ ವಿರುದ್ಧ ಫೆಡರರ್‌ 11-9 ಜಯದ ದಾಖಲೆ ಹೊಂದಿದ್ದಾರೆ.

ಬಿಯಾಂಕಾ-ಕೆರ್ಬರ್‌ ಪ್ರಶಸ್ತಿ ಕಾದಾಟ
“ಇಂಡಿಯನ್‌ ವೆಲ್ಸ್‌’  ವನಿತೆಯರ ಸಿಂಗಲ್ಸ್‌ ಪ್ರಶಸ್ತಿಗಾಗಿ ಬಿಯಾಂಕಾ ಆ್ಯಂಡ್ರಿಸ್ಕೂ ಮತ್ತು ಆ್ಯಂಜೆಲಿಕ್‌ ಕೆರ್ಬರ್‌ ಕಾದಾಟ ನಡೆಸಲಿದ್ದಾರೆ. ಸೆಮಿಫೈನಲ್‌ ಸಮರದಲ್ಲಿ ಬಿಯಾಂಕಾ ಉಕ್ರೇನಿನ ಎಲಿನಾ ಸ್ವಿಟೋಲಿನಾ ಅವರನ್ನು 6-3, 2-6, 6-4 ಸೆಟ್‌ಗಳಿಂದ ಸೋಲಿಸುವಲ್ಲಿ ಯಶಸ್ವಿಯಾದರು. 20 ವರ್ಷದ ಬಳಿಕ, “ಇಂಡಿಯನ್‌ ವೆಲ್ಸ್‌ ಟೆನಿಸ್‌’ ಕೂಟದ ಫೈನಲ್‌ ಪ್ರವೇಶಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಬಿಯಾಂಕಾ ಪಾತ್ರರಾಗಿದ್ದಾರೆ. ಬಿಯಾಂಕಾಗೆ ಈಗ ಕೇವಲ 18 ವರ್ಷ. 1999ರಲ್ಲಿ ಇಂಡಿಯನ್‌ ವೆಲ್ಸ್‌ ಪ್ರಶಸ್ತಿ ಜಯಿಸಿದ ಸೆರೆನಾ ವಿಲಿಯಮ್ಸ್‌ಗೆ ಆಗ ಕೇವಲ 17 ವರ್ಷ. 

Advertisement

ಬಿಯಾಂಕಾ 6ನೇ ಶ್ರೇಯಾಂಕಿತೆ ಸ್ವಿಟೋಲಿನಾ ಅವರನ್ನು ಸೋಲಿಸಲು 2 ಗಂಟೆ 12 ನಿಮಿಷ ತೆಗೆದುಕೊಂಡರು. ಮೊದಲ ಸೆಟ್‌ನ ಆರಂಭದಲ್ಲಿ 0-3 ಅಂಕಗಳ ಹಿನ್ನಡೆಯಲ್ಲಿದ್ದ ಬಿಯಾಂಕಾ ಅನಂತರ ಆಕ್ರಮಣ ಆಟಕ್ಕಿಳಿದರು. ಸ್ವಿಟೋಲಿನಾ ದ್ವಿತೀಯ ಸೆಟ್‌ನಲ್ಲೂ ಮೇಲುಗೈ ಸಾಧಿಸಿ ಹೋರಾಟವನ್ನು ಸಮಬಲಕ್ಕೆ ತಂದರು. ಆದರೆ ನಿರ್ಣಾಯಕ ಸೆಟ್‌ನಲ್ಲಿ ಮತ್ತೆ ಆಕ್ರಮಣ ಆಟಕ್ಕಿಳಿದ ಬಿಯಾಂಕಾ ಪಂದ್ಯವನ್ನು ತಮ್ಮದಾಗಿಸಿಕೊಂಡರು. 

ಬೆಲಿಂಡಾ ಬೆನ್ಸಿಕ್‌ ಪರಾಭವ
ಇನ್ನೊಂದು ಸೆಮಿಫೈನಲ್‌ನಲ್ಲಿ 3 ಬಾರಿಯ ಗ್ರ್ಯಾನ್‌ಸ್ಲಾಮ್‌ ಚಾಂಪಿಯನ್‌ ಆ್ಯಂಜೆಲಿಕ್‌ ಕೆರ್ಬರ್‌ ಸ್ವಿಸ್‌ ತಾರೆ ಬೆಲಿಂಡಾ ಬೆನ್ಸಿಕ್‌ ಅವರನ್ನು 6-4, 6-2 ನೇರ ಸೆಟ್‌ಗಳಿಂದ ಸೋಲಿಸಿದರು. ಕೆರ್ಬರ್‌ ಇಂಡಿಯನ್‌ ವೆಲ್ಸ್‌ ಫೈನಲ್‌ ಪ್ರವೇಶಿಸಿದ್ದು ಇದೇ ಮೊದಲು.

Advertisement

Udayavani is now on Telegram. Click here to join our channel and stay updated with the latest news.

Next