Advertisement

ನಾಡಕಚೇರಿ-ಅಟಲ್‌ಜೀ ಸೇವಾ ಕೇಂದ್ರ : ಉಡುಪಿ ಜಿಲ್ಲೆಗೆ 4ನೇ ಸ್ಥಾನ

04:58 AM Feb 04, 2019 | |

ಮಣಿಪಾಲ: ಕಂದಾಯ ವ್ಯಾಪ್ತಿಯ 40 ಸೇವೆಗಳೊಂದಿಗೆ ಇ-ಕ್ಷಣ ವಿಭಾಗದ ಮೂಲಕ ಹತ್ತಾರು ಸೇವೆಗಳನ್ನು ಒದಗಿಸುತ್ತಿರುವ ಉಡುಪಿ ಜಿಲ್ಲೆಯ ನಾಡ ಕಚೇರಿ-ಅಟಲ್‌ಜೀ ಜನಸ್ನೇಹಿ ಕೇಂದ್ರಗಳು ತಿಂಗಳ ಅವಧಿಯಲ್ಲಿ ಸುಮಾರು 8 ಸಾವಿರ ಅರ್ಜಿಗಳಲ್ಲಿ 7 ಸಾವಿರ ಅರ್ಜಿಗಳನ್ನು ವಿಲೇಗೊಳಿಸಿ ರಾಜ್ಯದಲ್ಲಿ ಸತತ ಅಗ್ರ 4 ಸ್ಥಾನಗಳಲ್ಲಿ ಒಂದನ್ನು ಕಾಯ್ದುಕೊಂಡಿವೆ. ಪ್ರಮಾಣ ಪತ್ರ, ದೃಢೀಕೃತ ದಾಖಲೆಗಳಿಗೆ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಈ ಕೇಂದ್ರಗಳನ್ನು 2012ರ ಡಿ.12ರಂದು ಆರಂಭಿಸಲಾಗಿತ್ತು.

Advertisement

ಶೀಘ್ರ ವಿಲೇಗೆ ರ್‍ಯಾಂಕಿಂಗ್‌
ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಸ್ವೀಕೃತ ಅರ್ಜಿ ಗಳನ್ನು ನಿಗದಿತ ಅವಧಿಗಿಂತ ಎಷ್ಟು ಮುಂಚಿತವಾಗಿ ವಿಲೇ ಮಾಡಲಾಗುತ್ತದೋ ಅಷ್ಟು ಉನ್ನತ ರ್‍ಯಾಂಕಿಂಗ್‌ ಪಡೆಯಲು ಸಾಧ್ಯ. ಈ ರ್‍ಯಾಂಕಿಂಗ್‌ಗೆ
ಡಿಸ್‌ಪೋಸಲ್‌ ಇಂಡೆಕ್ಸ್‌ (ಡಿಐ) ಎಂದು ಕರೆಯಲಾಗುತ್ತಿದ್ದು, ಜನವರಿಯಲ್ಲಿ ಉಡುಪಿ ಜಿಲ್ಲೆಯ ಡಿಐ 9.85. ಉತ್ತರ ಕನ್ನಡ (11.19) ಅತ್ಯುನ್ನತ ರ್‍ಯಾಂಕಿಂಗ್‌ ಪಡೆದರೆ, ಬೆಳಗಾವಿ (10.43), ರಾಮನಗರ (10.4) ಡಿಐ ಹೊಂದಿವೆ. ಉಡುಪಿ ಸಹಿತ ಈ ನಾಲ್ಕು ಜಿಲ್ಲೆಗಳು ರಾಜ್ಯದಲ್ಲಿ ಅಗ್ರ 4 ಸ್ಥಾನಗಳಲ್ಲಿದ್ದು, ಸ್ಥಾನಗಳನ್ನು ಪರಸ್ಪರ ಹಂಚಿಕೊಳ್ಳುತ್ತಿವೆ. ದ.ಕ. ಆರನೇ ಸ್ಥಾನದಲ್ಲಿದೆ. 

ಜಿಲ್ಲೆಯಲ್ಲಿ ವಂಡ್ಸೆ ಅಗ್ರಸ್ಥಾನಿ 
ಜಿಲ್ಲೆಯಲ್ಲಿ 9 ಅಟಲ್‌ಜೀ ಕೇಂದ್ರಗಳಿದ್ದು, ಸಿದ್ದಾಪುರದಲ್ಲಿ ಫ್ರಂಟ್‌ ಆಫೀಸ್‌ ಇದೆ. ಅರ್ಜಿಗಳ ಶೀಘ್ರ ವಿಲೇಯಲ್ಲಿ ಜಿಲ್ಲೆಗೆ ವಂಡ್ಸೆ ಮೊದಲ ಸ್ಥಾನಿ, ಬೈಂದೂರು, ಅಜೆಕಾರು, ಕೋಟ, ಕುಂದಾಪುರ, ಬ್ರಹ್ಮಾವರ, ಕಾಪು, ಕಾರ್ಕಳ, ಉಡುಪಿ ಅನಂತರದ ಸ್ಥಾನಗಳಲ್ಲಿವೆ. ಜಾತಿ ಆದಾಯ ಪ್ರಮಾಣಪತ್ರಗಳು ಒಟಿಸಿ ವ್ಯವಸ್ಥೆಯಿಂದಾಗಿ ಶೀಘ್ರ ಲಭ್ಯವಾಗುತ್ತಿವುದರಿಂದ ಮತ್ತು ಗ್ರಾಪಂಗಳಲ್ಲೂ ಈ ಸೇವೆ ಇರುವುದರಿಂದ ಅಟಲ್‌ಜೀ ಕೇಂದ್ರಗಳ ಒತ್ತಡ ತುಸು ಕಡಿಮೆಯಾಗಿದೆ. 

ಹೇಗಿದೆ ವ್ಯವಸ್ಥೆ?
ಉಪ ತಹಶೀಲ್ದಾರರು ಮುಖ್ಯಸ್ಥರಾಗಿರುವ ಅಟಲ್‌ಜೀ ಕೇಂದ್ರಗಳಲ್ಲಿ ಓರ್ವ ದ್ವಿ.ದರ್ಜೆ ವಿಷಯ ನಿರ್ವಾಹಕರು ಮತ್ತು ಇಬ್ಬರು ಆಪರೇಟರ್, ಒಬ್ಬರು ಡಿ ದರ್ಜೆ ನೌಕರರಿದ್ದಾರೆ.  ಈ ಕೇಂದ್ರಗಳಿಗೆ ನೀಡುವ ಅರ್ಜಿ ಸ್ಥಿತಿಯನ್ನು ನೋಂದಣಿ ಸಂಖ್ಯೆ ಸಹಾಯ ದಿಂದ ಟ್ರ್ಯಾಕಿಂಗ್‌ ಸಾಧ್ಯ. ಎಸ್‌ಎಂಎಸ್‌ ಅಪ್‌ಡೇಟ್‌ ಕೂಡ ಇದೆ. ಅರ್ಜಿಗಳ ವಿಲೇಗೆ ನಿಗದಿತ ಸಮಯವಿದ್ದರೂ ಪಿಂಚಣಿ ಸಂಬಂಧಿ ಸೇವೆಗಳು ಹೊರತುಪಡಿಸಿ ಉಳಿದ ಸೇವೆಗಳು ಸಕಾಲ ವ್ಯಾಪ್ತಿಗೆ ಬರುತ್ತವೆ. 

ಇ-ಕ್ಷಣ; ಪ್ರಧಾನ ಕಾರ್ಯದರ್ಶಿ ಶ್ಲಾಘನೆ 
ಜಿಲ್ಲೆಯ ಇ-ಕ್ಷಣ ಸೇವೆಗಳ ಉತ್ತಮ ಸಾಧನೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸಮಾಲೋಚಕರಿಗೆ ಶ್ಲಾಘನಾ ಪತ್ರವನ್ನು 5 ಬಾರಿ ರವಾನಿಸಿದ್ದಾರೆ. ಈ ಸೇವೆ 2018ರ ಫೆ.13ರಂದು ಆರಂಭವಾಗಿತ್ತು. ಜಿಲ್ಲಾ ಸ್ಪಂದನ ಕೇಂದ್ರ 2016ರ ಡಿ.11ರಂದು ಆರಂಭವಾಗಿದೆ.  
ಜನರು ಪದೇ ಪದೆ ಅರ್ಜಿಗಳೊಂದಿಗೆ ದಾಖಲೆಗಳ ಪ್ರತಿ ಇರಿಸುವ ಅನಗತ್ಯ ಕಿರಿಕಿರಿ ತಪ್ಪಿಸಲು ಸರಕಾರ ಅಟಲ್‌ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನೀಡುವ ದಾಖಲೆಗಳ ಗಣಕೀಕೃತ ಸಂಖ್ಯೆ ಉಲ್ಲೇಖೀಸಿ ಅರ್ಜಿ ಸಲ್ಲಿಸಬಹುದಾದ ಕಾಗದ ರಹಿತ ಪ್ರಮಾಣಪತ್ರ ಸೇವೆ ಆರಂಭಿಸಿದೆ. ದಾಖಲೆಯ ಸಂಖ್ಯೆ ಉಲ್ಲೇಖೀಸಿ ಅರ್ಜಿ ಸಲ್ಲಿಸಿದರೆ ದಾಖಲೆಗಳ ಪ್ರತಿ ಲಗತ್ತಿಸಬೇಕಿಲ್ಲ. ಆದರೆ ಜಿಲ್ಲೆಯಲ್ಲಿ ಈ ಸೇವೆಗೆ ಆಸಕ್ತಿ ತೋರಿದಂತಿಲ್ಲ.
 
ಆಧಾರ್‌ ಸೇವೆ  ಶೀಘ್ರ  ಸುಲಲಿತ
ಅಟಲ್‌ಜೀ ಕೇಂದ್ರಗಳಲ್ಲಿ ಆಧಾರ್‌ ಸಂಬಂಧಿತ ಸೇವೆಗಳ ತಾಂತ್ರಿಕ ಸಮಸ್ಯೆಗೆ ಅತ್ಯಂತ ಶೀಘ್ರ ಪರಿಹಾರ ಸಿಗಲಿದೆ. ಹೊಸ ಆವೃತ್ತಿ ಬಿಡುಗಡೆಗೊಂಡಿದ್ದು, ಎಲ್ಲ ಕೇಂದ್ರ ಗಳಲ್ಲಿ ಅಳವಡಿಸಲಾಗುವುದು. ಜಿಲ್ಲಾ ಸಮಾಲೋಚಕರು ಹಾಗೂ ಕಂದಾಯ ಅಧಿಕಾರಿಗಳ ಸಂಘಟಿತ ಪ್ರಯತ್ನದಿಂದ ಉನ್ನತ ಸ್ಥಾನಗಳನ್ನು ಕಾಯ್ದುಕೊಳ್ಳಲು ಸಾಧ್ಯವಾಗಿದೆ. 
ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ಜಿಲ್ಲಾಧಿಕಾರಿ

Advertisement

ಅಶ್ವಿ‌ನ್‌ ಲಾರೆನ್ಸ್‌  ಮೂಡುಬೆಳ್ಳೆ

Advertisement

Udayavani is now on Telegram. Click here to join our channel and stay updated with the latest news.

Next