ರಾಯಚೂರು:ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 399ನೇ ಪಟ್ಟಾಭಿಷೇಕ ಹಾಗೂ ಶ್ರೀರಾಯರ 425ನೇ ವರ್ಧಂತ್ಯುತ್ಸವದ ಶ್ರೀ ಗುರು ವೈಭವೋತ್ಸವ ಕಾರ್ಯಕ್ರಮ ಕಳೆದ ಏಳು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆ ಟಿಟಿಡಿಯ ಸಹಾಯಕ ಆಡಳಿತಾಧಿ ಕಾರಿ ಧರ್ಮಾರೆಡ್ಡಿ ತಂದ ಶೇಷವಸ್ತ್ರವನ್ನು ಮಂಗಳವಾದ್ಯಗಳ ಮೂಲಕ ಬರಮಾಡಿಕೊಂಡ ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು, ಅದನ್ನು ತಲೆ ಮೇಲೆ ಹೊತ್ತುಕೊಂಡು ಹೋಗಿ ರಾಯರ ಬೃಂದಾವನಕ್ಕೆ ಸಮರ್ಪಿಸಿದರು. ಬಳಿಕ ಮಠದ ಪ್ರಾಕಾರದಲ್ಲಿ ಪ್ರಹ್ಲಾದರಾಜರ ಉತ್ಸವ ಮೂರ್ತಿಯನ್ನಿಟ್ಟು ಚಿನ್ನದ ರಥೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಜರುಗಿಸಲಾಯಿತು. ರಾಯರ ಮೂಲ ಬೃಂದಾವನಕ್ಕೆ ಅಭಿಷೇಕ, ವಿಶೇಷ ಪುಷ್ಪಾಲಂಕಾರ, ಮೂಲರಾಮ ದೇವರಿಗೆ ಸಂಸ್ಥಾನ ಪೂಜೆ ನೆರವೇರಿಸಲಾಯಿತು.
ಬಳಿಕ ಮಠದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ನಾದಹಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ತಿರುಮಲ ತಿರುಪತಿ ದೇವಸ್ಥಾನ ಹಾಗೂ ಶ್ರೀ ರಾಘವೇಂದ್ರಸ್ವಾಮಿ ಮಠಕ್ಕೆ ಅವಿನಾಭಾವ ಸಂಬಂಧವಿದೆ. ಜಾತಿ, ಮತ ಬೇಧವಿಲ್ಲದೆ ತಿರುಪತಿ ತಿಮ್ಮಪ್ಪನನ್ನು ಜನರು ಆರಾ ಧಿಸುವಂತೆ ರಾಯರು ಕೂಡ ಸಕಲ ಭಕ್ತರ ಆರಾಧ್ಯ ದೈವವಾಗಿದ್ದಾರೆ. ಗುರು ರಾಯರನ್ನು ಆಶೀರ್ವದಿಸುವ ಮೂಲಕ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ವಿಶ್ವ ಗುರುವಾಗಿದ್ದಾರೆ ಎಂದರು.
ಮಂತ್ರಾಲಯ ಶ್ರೀಮಠವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಭಕ್ತರಿಗೆ ವಸತಿ, ಪ್ರಸಾದ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಲ್ಪಿಸುತ್ತಿದೆ. ತಿರುಪತಿಯಲ್ಲಿ ಟಿಟಿಡಿಯಿಂದ ಶ್ರೀಮಠಕ್ಕೆ ನೀಡಿರುವ ಭೂಮಿಯಲ್ಲಿ ರಾಯರ ಮೃತ್ತಿಕಾ ಬೃಂದಾವನ ನಿರ್ಮಿಸಿದ್ದು, ಭಕ್ತರ ಅನುಕೂಲಕ್ಕಾಗಿ ವಸತಿ ನಿಲಯ ಹಾಗೂ ಸಭೆ, ಸಮಾರಂಭ ನಡೆಸಲು ಸಭಾಂಗಣ ನಿರ್ಮಿಸಲಾಗುತ್ತಿದೆ. ಶ್ರೀಮಠದ ಗೋ ರಕ್ಷಣೆಗಾಗಿ ವಿಶೇಷ ಆದ್ಯತೆ ನೀಡಿದೆ. ಬೇಸಿಗೆ ವೇಳೆ ಗೋವುಗಳಿಗೆ ಬಿಸಿಲಿನ ತಾಪ ತಪ್ಪಿಸಲು 14 ಲಕ್ಷ ವೆಚ್ಚದಲ್ಲಿ ಹಸುಗಳಿಗಾಗಿ ಈಜುಕೊಳವನ್ನು ನಿರ್ಮಿಸಲಾಗುತ್ತಿದೆ ಎಂದರು.
ಶ್ರೀಮಠದ ಸಹಾಯಕ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸ, ಐ.ಪಿ.ನರಸಿಂಹಮೂರ್ತಿ, ಶ್ರೀ ಗುರುಸಾರ್ವಭೌಮ ವಿದ್ಯಾಪೀಠದ ಪ್ರಾಚಾರ್ಯ ಡಾ| ಎನ್.ವಾದಿರಾಜಾಚಾರ್, ವಿದ್ವಾನ್ ಗೌತಮಾಚಾರ್ ಉಪಸ್ಥಿತರಿದ್ದರು.
ನಾದಹಾರ ಆಕರ್ಷಣೆ
ರಾಯರ ವರ್ಧಂತ್ಯುತ್ಸವ ನಿಮಿತ್ತ ಪ್ರತಿ ವರ್ಷದಂತೆ ಈ ವರ್ಷವೂ ಮಠದ ಪ್ರಾಕಾರದಲ್ಲಿ ಚೆನ್ನೈನ ನಾದಹಾರಂ ಟ್ರಸ್ಟ್‌ನಿಂದ ಕಾರ್ಯಕ್ರಮ ಪ್ರಸ್ತುತಿ ಪಡಿಸಲಾಯಿತು. ಸುಮಾರು 100ಕ್ಕೂ ಅಧಿ ಕ ಸಂಗೀತ ವಿದ್ವಾಂಸರು ತಮ್ಮ ಗಾಯನ, ವಾದ್ಯ ಪ್ರಾವೀಣ್ಯ ಪ್ರದರ್ಶಿಸಿದರು. ಆ ಮೂಲಕ ರಾಯರಿಗೆ ಭಕ್ತಿ ಸಮರ್ಪಿಸಿದರು. ಕಳೆದ 16 ವರ್ಷಗಳಿಂದ ವಿದ್ವಾನ್ ಗಣೇಶನ್ ನೇತೃತ್ವದಲ್ಲಿ ನಾದಹಾರಂ ಸಂಗೀತ ಸೇವೆ ನಡೆದುಕೊಂಡು ಬರುತ್ತಿದೆ. ಈ ವರ್ಷವೂ ಐದು ಗಂಟೆಗಳ ಕಾಲ ನಿರಂತರವಾಗಿ ಶಾಸ್ತ್ರೀಯ ಗಾಯನ, ರಾಯರ ಕೀರ್ತನೆಗಳನ್ನು ಹಾಡಿದರು. ವಯೋಲಿನ್, ಮೃದಂಗ, ಘಟಂ, ಸಿತಾರ್, ಕೊಳಲು ವಾದ್ಯಗಳನ್ನು ನುಡಿಸುವ ಮೂಲಕ ಗಮನ ಸೆಳೆದರು.