Advertisement
ಜು.24ರಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆಯಲಿರುವ ಹಿನ್ನೆಲೆ ಜಿಲ್ಲಾಧಿಕಾರಿ ರಂದೀಪ್ ಡಿ., ಶುಕ್ರವಾರ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದರು.
Related Articles
Advertisement
ಬನ್ನಿಮಂಟಪ ಪಂಜಿನ ಕವಾಯತು ಮೈದಾನದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಅಂದಾಜು 30 ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಬಹುದು ಎಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ತಿಳಿಸಿದರು. ಬರಗಾಲದ ಹಿನ್ನೆಲೆ ಕಳೆದ ಎರಡು ವರ್ಷಗಳಿಂದ ಪಂಜಿನ ಕವಾಯತು ವೇಳೆ ಲೇಸರ್ ಶೋ ಕೈ ಬಿಡಲಾಗಿತ್ತು. ಈ ವರ್ಷ ಲೇಸರ್ ಶೋ ಆಯೋಜಿಸುವ ಪ್ರಸ್ತಾವನೆ ಇಡಬಹುದು ಎಂದು ಡಿಸಿಪಿ ವಿಕ್ರಂ ಅಮಟೆ ಸಲಹೆ ನೀಡಿದರು.
ಕಳೆದ ವರ್ಷ ದಸರಾ ಭದ್ರತೆಗಾಗಿ ಪೊಲೀಸ್ ಇಲಾಖೆಗೆ 1.33 ಕೋಟಿ ನೀಡಲಾಗಿದೆ. ಈ ವರ್ಷ ಅನಾವಶ್ಯಕ ವೆಚ್ಚಗಳನ್ನು ತಡೆಗಟ್ಟಿ, ವಿಜಯದಶಮಿ ಮೆರವಣಿಗೆಯ ದಿನ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವಂತೆ ಹೇಳಿದರು. ಕಳೆದ ವರ್ಷ ನಗರದ ವಿದ್ಯುತ್ ದೀಪಾಲಂಕಾರಕ್ಕೆ ಸೆಸ್ಕ್ 72 ಲಕ್ಷ ರೂ. ಖರ್ಚು ಮಾಡಿದ್ದು, ಸಯ್ನಾಜಿರಾವ್ ವೃತ್ತ, ಕೆ.ಆರ್.ವೃತ್ತ ಹೊರತುಪಡಿಸಿ ಉಳಿದೆಡೆ ಎಲ್‌ಇಡಿ ಬಲ್ಬ್ ಹಾಕಲಾಗಿತ್ತು. ಈ ವರ್ಷ ಸಂಪೂರ್ಣವಾಗಿ ಎಲ್‌ಇಡಿ ಬಲ್ಬ್ ಬಳಸುವುದಾಗಿ ತಿಳಿಸಿದ ಸೆಸ್ಕ್ ಎಂಜಿನಿಯರ್, ಅನುದಾನಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಬೇಡಿಕೆ ಇಟ್ಟರು.
ವಿಶ್ವ ಪ್ರವಾಸೋದ್ಯಮ ದಿನ: ದಸರಾ ಮಹೋತ್ಸವದ ಮಧ್ಯೆಯೇ ಸೆ.27ರಂದು ವಿಶ್ವ ಪ್ರವಾಸೋದ್ಯಮ ದಿನ ಬರುವುದರಿಂದ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮೈಸೂರಿನಲ್ಲೇ ಆಯೋಜಿಸಲು ಸರ್ಕಾರವನ್ನು ಕೋರಲು ನಿರ್ಧರಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ, ಮುಡಾ ಆಯುಕ್ತ ಡಾ.ಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ್, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸೂಕ್ತ ವ್ಯವಸ್ಥೆ ಕಲ್ಪಿಸಬೇಕು: ಈ ಬಾರಿ ವಿಶೇಷವಾಗಿ ದಸರಾ ಆನೆಗಳನ್ನು ಹೆಚ್ಚು ಜನರು ಕಣ್ತುಂಬಿಕೊಳ್ಳಲಿ ಎಂಬ ಕಾರಣಕ್ಕೆ ಹುಣಸೂರು ತಾಲೂಕು ನಾಗಾಪುರ ಗಿರಿಜನ ಆಶ್ರಮ ಶಾಲೆಯ ಆವರಣದಲ್ಲಿ ನಡೆಯುವ ಗಜಪಯಣ ಕಾರ್ಯಕ್ರಮಕ್ಕೆ ಹೆಚ್ಚಿನ ಜನರನ್ನು ಸೇರಿಸುವುದು ಹಾಗೂ ಕಾಡಿನಿಂದ ಕರೆತರಲಾದ ಆನೆಗಳನ್ನು ಅರಮನೆಗೆ ಸ್ವಾಗತಿಸುವ ದಿನ ಕೂಡ ಹೆಚ್ಚಿನ ಜನರನ್ನು ಸೇರಿಸುವ ಜತೆಗೆ ದಸರಾ ಆನೆಗಳ ಜತೆಗೆ ಬರುವ ಮಾವುತರು, ಕಾವಾಡಿಗಳ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು.
ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ದಸರಾ ಉನ್ನತಮಟ್ಟದ ಸಭೆಯಲ್ಲಿ ಅದ್ಧೂರಿ, ಸರಳ, ಸಾಂಪ್ರದಾಯಿಕ ಹೀಗೆ ಯಾವ ದಸರಾ ಆಚರಣೆಗೆ ನಿರ್ಧರಿಸಲಾಗುತ್ತದೆಯೋ ಅದರಂತೆ ಅನುದಾನ ಕೋರಲಾಗುವುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಪ್ರವಾಸಿಗರಿಗೆ ದಸರಾ ಪರಿಣಾಮಕಾರಿ ಅನುಭವವಾಗುವಂತೆ ಕ್ರಮ ಕೈಗೊಳ್ಳಲಾಗುವುದು.-ರಂದೀಪ್ ಡಿ., ಜಿಲ್ಲಾಧಿಕಾರಿ