ಸಕಲೇಶಪುರ: ತಾಲೂಕಿನ ಬೆಳಗೋಡು ಹೋಬಳಿ ನಾಡಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಕಡಿತವಾದಾಗ ಯುಪಿಎಸ್ ಹಾಗೂ ಜನರೇಟರ್
ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಬೆಳಗೋಡು ಹೋಬಳಿ ನಾಡಕಚೇರಿಯಲ್ಲಿ ಯುಪಿಎಸ್, ಜನರೇಟರ್ ವ್ಯವಸ್ಥೆ ಇಲ್ಲದ ಕಾರಣ ಪ್ರತಿಯೊಂದು ಕೆಲಸ ಕಾರ್ಯಗಳು ವಿದ್ಯುತ್ ಬರುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಮಲೆನಾಡುಪ್ರದೇಶವಾಗಿರುವುದರಿಂದ ವಿದ್ಯುತ್ ಅಡಚಣೆ ಸಹಜವಾಗಿದ್ದು, ಇದಕ್ಕೆ ಬದಲಿ ವ್ಯವಸ್ಥೆ ಮಾಡದೆ ಇರುವುದು ದುರದೃಷ್ಟ ಕರವಾದ ಸಂಗತಿಯಾಗಿದೆ. ದಿನನಿತ್ಯ ಸಾವಿರಾರು ಜನರು ಬೆಳೆಗೋಡಿನ ನಾಡ ಕಚೇರಿಗೆ ವಿವಿಧ ಕೆಲಸ ಕಾರ್ಯಗಳಿಗೆ ಬರುವ ಜನ ಕೆಲಸವಾಗದ ಕಾರಣ ಹಾಗೆಯೇ ಹಿಂತಿರುಗಬೇಕಾದ ಪರಿಸ್ಥಿತಿ ಇದೆ. ನಾಡ ಕಚೇರಿಯ ಸಿಬ್ಬಂದಿ ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಜನರಿಗೆ ನಾಳೆ ಬನ್ನಿ ಅಥವಾ ಸಂಜೆ ತನಕ ಕಾಯಿರಿ ಕರೆಂಟ್ ಬಂದಾಗ ನಿಮ್ಮ ಕೆಲಸ ಮಾಡಿ ಕೊಡುತ್ತೇವೆ ಎಂಬುದಾಗಿ ಹೇಳುತ್ತಾರೆ.
ಇದನ್ನೂ ಓದಿ:ಸೆ.5 ರಂದು ರೈತರ ಮಕ್ಕಳ ಶಿಷ್ಯವೇತನ ಬಿಡುಗಡೆಗೆ ಚಾಲನೆ: ಸಿಎಂ ಬೊಮ್ಮಾಯಿ
ಕಳೆದ ಆರೇಳು ತಿಂಗಳ ಹಿಂದೆ ಇದೇ ನಾಡಕಚೇರಿಗೆ ಜಿಲ್ಲಾಧಿಕಾರಿ ಅವರು ಭೇಟಿ ಕೊಟ್ಟಾಗ ಅಲ್ಲಿನ ನಿವಾಸಿಯಾದ ಬೆಳಗೋಡು ಬಸವರಾಜ್ ಎಂಬುವವರು ಜಿಲ್ಲಾಧಿಕಾರಿಯವರಿಗೆ ನಾಡಕಚೇರಿಯಲ್ಲಿ, ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂಬುದಾಗಿ ಮನವಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಅವರು ಅಲ್ಲೇ ಇದ್ದ ಉಪತಹಶೀಲ್ದಾರ್, ಹಿಂದಿನ ಉಪವಿಭಾಗಧಿಕಾರಿ ಹಾಗೂ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ನಾಡಕಚೇರಿಗೆ ತ್ವರಿತಗತಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸುವಂತೆ ಸೂಚಿಸಿದ್ದರು. ಆದರೂ ಇಲ್ಲಿಯವರೆಗೆ ಯಾವುದೇ ಕಾರ್ಯಗಳು ಆಗಿಲ್ಲ. ಇದರಿಂದ ಸಣ್ಣಪುಟ್ಟ ಕಾರ್ಯಗಳಿಗೂ ಜನಸಾಮಾನ್ಯರು ಅಲೆದಾಡುವಂತಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಉಪತಹಶೀಲ್ದಾರ್ ಅವರು ಬದಲೀ ವ್ಯವಸ್ಥೆಯ ಬಗ್ಗೆ ಗಮನ ಕೊಡದೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಇನ್ನು ನಾಡಕಚೇರಿಗೆ ಹಾಕಿರುವ ಸಿಸಿ ಕ್ಯಾಮೆರಾ ಸಹ ಯಾವುದೇ ಉಪಯೋಗಕ್ಕೆ ಬಾರದಾಗಿದೆ. ಸಣ್ಣಪುಟ್ಟ ಕೆಲಸಗಳಿಗೆ ಇಲ್ಲಿ ವ್ಯಾಪಕ ಲಂಚ ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕರಆಕ್ರೋಶಕ್ಕೆ ಕಾರಣವಾಗಿದೆ.
ಮುಂದಿನ ದಿನಗಳಲ್ಲಿ ನಾಡಕಚೇರಿಯಲ್ಲಿ ವಿದ್ಯುತ್ ಕಡಿತವಾದಾಗಯುಪಿಎಸ್ ಹಾಗೂ ಜನರೇಟರ್ ವ್ಯವಸ್ಥೆ ಮಾಡದಿದ್ದಲ್ಲಿ ಬೆಳಗೋಡಿನ ನಾಡಕಚೇರಿಯ ಮುಂದೆ ಸಾರ್ವಜನಿಕ ಧರಣಿ ಮಾಡಬೇಕಾಗುತ್ತದೆ.
-ಕಾಕನಮನೆ ಹೆನ್ರಿ, , ಸಮಾಜ ಚಿಂತಕ