Advertisement
ಕ್ರಿಕೆಟ್ ಆಟಗಾರರನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸುವ ವಿಚಾರದಲ್ಲಿ ನಾಡಾ ನಿರ್ಧಾರವನ್ನು ಬಿಸಿಸಿಐ ಆರಂಭದಿಂದಲೂ ವಿರೋಧಿಸುತ್ತಲೇ ಬಂದಿದೆ. ಸಮಸ್ಯೆ ಶಮನಗೊಳಿಸಿ ಬಿಸಿಸಿಐ ಅನ್ನು ಮನವೊಲಿಸಿ ಕ್ರಿಕೆಟಿಗರನ್ನು ಪೂರ್ಣ ಪ್ರಮಾಣದಲ್ಲಿ ಉದ್ದೀಪನ ಪರೀಕ್ಷೆಗೆ ಒಳಪಡಿಸುವಂತೆ ವಾಡಾ (ವಿಶ್ವ ಉದ್ದೀಪನ ನಿಗ್ರಹ ಸಮಿತಿ) ಕಟ್ಟುನಿಟ್ಟಾಗಿ ನಾಡಾಕ್ಕೆ ಸೂಚಿಸಿತ್ತು. ಆದರೆ ಕ್ರಿಕೆಟಿಗರನ್ನು ಉದ್ದೀಪನ ಪರೀಕ್ಷೆಗೆ ಒಳಪಡಿಸಲು ಬಿಸಿಸಿಐ ವಿಫಲವಾಗಿದೆ. ಹೀಗಾಗಿ ವಾಡಾ ಈ ಕುರಿತಂತೆ ಐಸಿಸಿ ಉನ್ನತ ಮಟ್ಟಕ್ಕೆ ದೂರು ನೀಡಿ ಈಗ ಒತ್ತಡ ಹೇರಿದೆ.
ವಾಡಾದ ವರದಿಗೆ ಇದುವರೆಗೆ ಐಸಿಸಿನಿಂದಾಗಲೀ ಅಥವಾ ಬಿಸಿಸಿಐನಿಂದಾಗಲೀ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಬೆನ್ನಲ್ಲೇ ಕೇಂದ್ರ ಕ್ರೀಡಾ ಸಚಿವ ರಾಜವರ್ಧನ ಸಿಂಗ್ ರಾಥೋಡ್‌ಗೆ ವಾಡಾ ಪ್ರಧಾನ ನಿರ್ದೇಶಕ ಒಲಿವಿಯರ್ ನಿಗ್ಲಿ ಪತ್ರ ಬರೆದಿದ್ದಾರೆ. “ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕು. ಬಿಸಿಸಿಐ ಅಧೀನದಲ್ಲಿರುವ ಕ್ರಿಕೆಟ್ ಆಟಗಾರರನ್ನು ಪೂರ್ಣ ಪ್ರಮಾಣದಲ್ಲಿ ನಾಡಾ ನಡೆಸುವ ಉದ್ದೀಪನ ಪರೀಕ್ಷೆಗೆ ಒಳಪಡಿಸಬೇಕು. ತಪ್ಪಿದರೆ ವಾಡಾ ಜತೆಗಿನ ಸಂಬಂಧವನ್ನು ನಾಡಾ ಕಳೆದುಕೊಳ್ಳಲಿದೆ’ ಎಂದು ಪರಿಸ್ಥಿತಿಯ ಗಂಭೀರತೆಯನ್ನು ಸಚಿವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದೆ. ಒಂದು ವೇಳೆ ನಾಡಾ ಮಾನ್ಯತೆ ಕಳೆದುಕೊಂಡರೆ ದೇಶದಲ್ಲಿ ನಡೆಯಲಿರುವ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ನಾಡಾದಿಂದ ಉದ್ದೀಪನ ಪರೀಕ್ಷೆ ಇರುವುದಿಲ್ಲ. ಆಗ ಭಾರತ ವಿಶ್ವ ಮಟ್ಟದ ಮಾನ್ಯತೆಯನ್ನೂ ಕಳೆದುಕೊಳ್ಳಲಿದೆ.