ಬೆಂಗಳೂರು: ಇನ್ನು ಮುಂದೆ ಶಾಲೆಗಳ ದೈನಂದಿನ ಚಟುವಟಿಕೆ ಆರಂಭಗೊಳ್ಳುವ ಮುನ್ನ ಮಾತ್ರವಲ್ಲದೆ ಸರಕಾರದ ಇಲಾಖೆಗಳು, ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳ ಪ್ರಾರಂಭದಲ್ಲಿ ನಾಡಗೀತೆ ಹಾಡುವುದನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ.
ದಿ. ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ 2022ರ ಸೆ. 25ರಂದು ಹೊರಡಿಸಿದ ಆದೇಶ ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್ ಅರ್ಜಿಯ ವಿಚಾರಣೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠದ ಮುಂದೆ ವಿಚಾರಣೆ ನಡೆಯುವ ವೇಳೆ ಸರಕಾರ ತಾನು ಈ ರೀತಿ ತಿದ್ದುಪಡಿ ಮಾಡಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದೆ.
ಈ ಹಿಂದಿನ ಆದೇಶದಲ್ಲಿ ಎಲ್ಲ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆ ಆರಂಭವಾಗುವ ಮುನ್ನ ಹಾಗೂ ಎಲ್ಲ ಸಾಂಸ್ಕೃತಿಕ, ಸಾಹಿತ್ಯಕ ಹಾಗೂ ಇತರ ಅಧಿಕೃತ ಕಾರ್ಯಕ್ರಮಗಳಲ್ಲಿ ಹಾಡುವುದು ಎಂದು ಹೇಳಲಾಗಿತ್ತು. ಆದರೆ ಫೆ. 1ರಂದು ಈ ಆದೇಶದಲ್ಲಿ ತಿದ್ದುಪಡಿ ಮಾಡಿ ಎಲ್ಲ ಶಾಲೆಗಳ ಜತೆಗೆ ಸರಕಾರ ಇಲಾಖೆಗಳು ಮತ್ತು ಅರೆ ಸರಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳ ಪ್ರಾರಂಭದಲ್ಲಿ ಹಾಡುವಂತೆ ಸೂಚಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಸರಕಾರ ತಿಳಿಸಿದೆ.
ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ತಿದ್ದುಪಡಿ ಆದೇಶದಲ್ಲಿ ಎಲ್ಲ ಶಾಲೆಗಳಲ್ಲಿ ಎಂಬ ಪದವನ್ನು ಬಳಸಲಾಗಿದೆ. ಎಲ್ಲ ಶಾಲೆಗಳು ಎಂದಾಗ ಖಾಸಗಿ ಶಾಲೆಗಳು ಸಹ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತದೆಯೇ ಎಂಬುದನ್ನು ಸ್ಪಷ್ಟಪಡಿಸುವಂತೆ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿತು. ಈ ಸಂದರ್ಭ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎಸ್.ಎ. ಅಹಮದ್, ಈ ಕುರಿತು ರಾಜ್ಯ ಸರಕಾರದಿಂದ ಅಗತ್ಯ ಮಾಹಿತಿ ಪಡೆದು ವಿವರಣೆ ನೀಡುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು.
ವಿಚಾರಣೆಯ ಆರಂಭದಲ್ಲಿ ಎಸ್.ಎ. ಅಹಮದ್, ನಾಡಗೀತೆಯನ್ನು ಇಂತಹುದೇ ಧಾಟಿಯಲ್ಲಿ ಹಾಡಬೇಕೆಂದು ಸರಕಾರದ ಆದೇಶ ಇರುವಾಗ ಮತ್ತೂಂದು ಧಾಟಿಯಲ್ಲಿ ಹಾಡಲು ಅವಕಾಶ ನೀಡಬೇಕೆಂಬ ಮನವಿಗಳನ್ನು ಪುರಸ್ಕರಿಸಬಾರದು ಎಂದು ರಾಜ್ಯ ಸರಕಾರ ನ್ಯಾಯಾಲಯವನ್ನು ಕೋರಿತ್ತು.
ಜಯಭಾರತ ಜನನಿಯ ತನುಜಾತೆ ಗೀತೆಯು ಅರ್ಥಗರ್ಭಿತವಾದ ಮತ್ತು ಸುಂದರವಾದ ಪದ್ಯ. ಇದರ ಬಗ್ಗೆ ಹೆಚ್ಚು ಬಡಿದಾಡಿಕೊಳ್ಳಬೇಡಿ. ಬೇಕಿದ್ದರ ಉಭಯ ಪಕ್ಷಗಾರರೂ ಒಂಡೆಡೆ ಕಲೆತು ಗೌರವಯುತವಾದ ಒಮ್ಮತದ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿ ನ್ಯಾಯಾಲಯ ವಿಚಾರಣೆ ಮುಂದೂಡಿತು.