ಬೆಳಗಾವಿ: ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಮರಾಠಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬೆರೆತ ಶಿಕ್ಷಣ ಸಚಿವ ಸುರೇಶಕುಮಾರ ಅವರು, ಮರಾಠಿ ಮಾಧ್ಯಮ ಮಕ್ಕಳಿಂದಲೇ ನಾಡಗೀತೆ ಹಾಡಿಸಿದರು.
ಖಾನಾಪುರ ತಾಲೂಕಿನ ಕಾಡಂಚಿನ ಮಂಗೇನಕೊಪ್ಪ, ಜಾಂಬೋಟಿ ಸೇರಿದಂತೆ ಇತರೆ ಶಾಲೆಗಳಿಗೆ ಸೋಮವಾರ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಪರಿಶೀಲಿಸಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಶಾಲೆಯೊಳಗೆ ಹೋಗಿ ಮಕ್ಕಳಿಂದ ಶಿಕ್ಷಣದ ಗುಣಮಟ್ಟ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು. ಮರಾಠಿ ಮಾಧ್ಯಮ ಶಾಲೆಯ ಮಕ್ಕಳಿಂದಲೇ ನಾಡಗೀತೆಯನ್ನು ಹಾಡಿಸಿದರು. ಮರಾಠಿ ಶಾಲೆ ವಿದ್ಯಾರ್ಥಿಗಳಿಗೆ ನಾಡಗೀತೆ ಹಾಡಿಸುವುದಿಲ್ಲ ಎಂಬ ಕನ್ನಡ ಸಂಘಟನೆಗಳ ಆರೋಪ ಹಿನ್ನೆಲೆಯಲ್ಲಿ ಖುದ್ದಾಗಿ ಪರಿಶೀಲಿಸಿದರು.
ಇದನ್ನೂ ಓದಿ :ಶೈಕ್ಷಣಿಕ ಗುಣಮಟ್ಟ ಹೆಚ್ಚಲಿ : ಸುರೇಶ ಕುಮಾರ
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಳೆಯ ವಿಷಯವನ್ನು ಕೆಣಕುವುದು ಸರಿಯಲ್ಲ. ಮಹಾರಾಷ್ಟ್ರ ನಾಯಕರು ಪ್ರಬುದ್ಧರಾಗುವುದು ಒಳ್ಳೆಯದು. ಅವರ ರಾಜ್ಯ, ಸಮಾಜದ ದೃಷ್ಟಿಯಿಂದ ಸರ್ಕಾರ ಪ್ರಬುದ್ಧವಾಗುವುದು ಒಳ್ಳೆಯದು.
ಉತ್ತಮ ಆಡಳಿತ ನಡೆಸಲು ಆಗದವರು ವಿಷಯವನ್ನು ಬೇರೆ ಕಡೆಗೆ ತಿರುಗಿಸುವ ಕೆಲಸಕ್ಕಿಳಿಯುತ್ತಾರೆ. ಎಲ್ಲ ಮಕ್ಕಳು ಕಡ್ಡಾಯವಾಗಿ ಒಂದು ಭಾಷೆಯಾಗಿ ಕನ್ನಡವನ್ನು ಕಲಿಯಲೇಬೇಕು. ಇದು ರಾಜ್ಯದ ಎಲ್ಲ ಶಾಲೆಗಳಿಗೂ ಅನ್ವಯವಾಗುತ್ತದೆ. ಗಡಿ ಭಾಗದ ಶಾಲೆಗಳಿಗೆ ಆಗಾಗ ಭೇಟಿ ನೀಡುತ್ತಿದ್ದೇನೆ. ಆಂಧ್ರದ ಗಡಿಭಾಗ, ತಮಿಳುನಾಡಿನ ಗಡಿಭಾಗಕ್ಕೆ ಭೇಟಿ ನೀಡಿ ಶಾಲೆಗಳ ಸ್ಥಿತಿಗತಿ ಪರಿಶೀಲಿಸಲಾಗಿದೆ. ಮುಂದಿನ ವಾರ ಯಾದಗಿರಿ ಬಳಿಯ ಮಹಾರಾಷ್ಟ್ರ ಗಡಿ ಭಾಗಕ್ಕೆ ಭೇಟಿ ನೀಡಲಾಗುವುದು ಎಂದರು.