ಮಣಿಪಾಲ: ಮಣಿಪಾಲ ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಪೈಯವರ ಸೆಕ್ರೆಟೇರಿಯಲ್ ಕೋ ಆರ್ಡಿನೇಟರ್, ಕುಂಜಿಬೆಟ್ಟು ನಿವಾಸಿ ಎನ್.ವಿ. ಬಲ್ಲಾಳ್ (ನಿಡಂಬೂರು ವೆಂಕಟರಮಣ ಬಲ್ಲಾಳ್-91) ಅವರು ಆ. 27ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ ಮತ್ತು ಪುತ್ರ, ಮಣಿಪಾಲ ದಂತ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ| ವಾಸುದೇವ ಬಲ್ಲಾಳ್ ಹಾಗೂ ಪ್ರಾಧ್ಯಾಪಕಿ ಡಾ| ವಿನುತಾ ಭಟ್ ಸಹಿತ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಮಣಿಪಾಲದಲ್ಲಿ ಕೆಎಂಸಿ ಆರಂಭವಾಗುವ ಹಿಂದಿನ ದಿನ ಸ್ಥಾಪಕ ಡಾ| ಟಿ.ಎಂ.ಎ. ಪೈಯವರ ಆಪ್ತ ಕಾರ್ಯದರ್ಶಿಯಾಗಿ ಕೆಲಸಕ್ಕೆ ಸೇರಿದ್ದ ಬಲ್ಲಾಳರು ಇದೇ ಆಗಸ್ಟ್ 4ರ ವರೆಗೂ ಸುದೀರ್ಘ 69 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಉತ್ತಮ ಆಂಗ್ಲ ಭಾಷಾ ಜ್ಞಾನ ಹೊಂದಿದ್ದ ಬಲ್ಲಾಳರು ಶೀಘ್ರ ಲಿಪಿಕಾರರೂ (ಶಾರ್ಟ್‌ಹ್ಯಾಂಡ್ ಎಕ್ಸ್‌ಪರ್ಟ್) ಆಗಿದ್ದರು. ಸರಳ ವ್ಯಕ್ತಿತ್ವದ ಬಲ್ಲಾಳ್ ಸಂಸ್ಥೆಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದರು.
ಗಣ್ಯರ ಸಂತಾಪ
ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್ ಎಂ. ಪೈ, ಎಂಇಎಂಜಿ ಅಧ್ಯಕ್ಷ ಡಾ| ಟಿ. ರಂಜನ್ ಪೈ, ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್, ಕುಲಪತಿ ಲೆ|ಜ| ಡಾ| ಎಂ.ಡಿ.ವೆಂಕಟೇಶ್, ಕುಲಸಚಿವ ಡಾ| ನಾರಾಯಣ ಸಭಾಹಿತ್ ಅವರು ಸಂತಾಪ ಸೂಚಿಸಿದ್ದಾರೆ.