Advertisement

ಏಕ ಶಿಕ್ಷಣ ನೀತಿ ಜಾರಿಯಾಗಲಿ

05:43 PM Sep 06, 2019 | Naveen |

ಎನ್‌.ಆರ್‌.ಪುರ: ರಾಜ್ಯದಲ್ಲಿ ಏಕ ಶಿಕ್ಷಣ ನೀತಿ ಜಾರಿಯಾಗಬೇಕೆಂದು ಬೆಂಗಳೂರು ಗಾಂಧಿಯಾನ ಪ್ರತಿಷ್ಠಾನದ ಅಧ್ಯಕ್ಷ ವೈ.ಎಸ್‌.ವಿ.ದತ್ತ ಹೇಳಿದರು.

Advertisement

ಪಟ್ಟಣದ ಗುರುಭವನದಲ್ಲಿ ಗುರುವಾರದಂದು ನಡೆದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಶಿಕ್ಷಕ ವೃತ್ತಿ ಬಗ್ಗೆ ನನಗೆ ಹೆಮ್ಮೆ ಹಾಗೂ ಅತ್ಯಂತ ಸ್ವಾಭಿಮಾನವಿದೆ ಎಂದರು.

16ನೇ ವಯಸ್ಸಿನಿಂದಲೇ ನಾನು ಪಾಠ ಮಾಡಲು ಆರಂಭಿಸಿದ್ದೆ. ನಾನು ಕಡೂರು ತಾಲೂಕಿನ ಯಗಟಿಯ ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿದವನು. ನೀವು ತಿದ್ದಿ, ತೀಡಿದ ಶಿಷ್ಯ ವೃಂದ ಮುಂದೊಂದು ದಿನ ಉನ್ನತ ಮಟ್ಟಕ್ಕೆ ಹೋದಾಗ ನಿಮಗೆ ಅವರು ಕೊಡುವ ಗೌರವ ಎಷ್ಟು ಕೋಟಿ ಕೊಟ್ಟರೂ ಸಿಗದಷ್ಟು ಸಂತೋಷವಾಗುತ್ತದೆ ಎಂದರು.

ಶಿಕ್ಷಕರಿಗೆ ಹೊಸ ನೀತಿ ಜಾರಿ ಮಾಡಿ ವರ್ಗಾವಣೆ ವಿಚಾರ ಬಂದಾಗ ಗೊಂದಲ ಸೃಷ್ಟಿ ಮಾಡುತ್ತಾರೆ. ಇಂದು ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗಿದೆ. ಆರ್‌ಟಿಇ ನೀತಿಯಿಂದ ಸರ್ಕಾರಿ ಶಾಲೆಯ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸಿ ಒಂದಷ್ಟು ಹಣದ ರೂಪದಲ್ಲಿ ಸಹಾಯ ಮಾಡಿ, ಕನ್ನಡ ಶಾಲೆ ಸೇರಿದಂತೆ ಸರ್ಕಾರಿ ಶಾಲೆ ಮುಚ್ಚುತ್ತದೆ. ಅರಸನಿಂದ ಜವಾನನವರೆಗೂ ಏಕ ಶಿಕ್ಷಣ ನೀತಿ ಜಾರಿಯಾಗಬೇಕು. ಎಸ್‌.ಎಂ.ಕೃಷ್ಣ ಅವರು ಸಿಎಂ ಆದ ಸಂದರ್ಭದಲ್ಲಿ ಆರ್‌ಟಿಇ ಜಾರಿಯಾಯಿತು. ನಾನು ಶಾಸಕನಾಗಿದ್ದ ಅವಧಿಯಲ್ಲಿ ಸರ್ಕಾರ ಮೂರು ಸಾವಿರ ಕೋಟಿ ರೂ. ಅನ್ನು ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ನೀಡಿದೆ ಎಂದರು.

ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಜಿಪಂ ಸದಸ್ಯ ಪಿ.ಆರ್‌.ಸದಾಶಿವ, ಶಿಕ್ಷಕರು ತಮ್ಮ ಜೀವನವನ್ನು ಪರಿವರ್ತನೆ ಮಾಡಿಕೊಳ್ಳಬೇಕು. ಸರಿಯಾದ ಸಮಯ ಪಾಲನೆ ಮಾಡಬೇಕು. ಶಿಕ್ಷಕರಿಗೆ ಬೇರೆ ಇಲಾಖೆಯ ಕೆಲಸವನ್ನು ನೀಡಬಾರದು. ಅವರ ಪಾಡಿಗೆ ಪಾಠ ಮಾಡಲು ಬಿಡಬೇಕೆಂದು ಜಿಪಂ ಸಭೆಯಲ್ಲಿ ನಿಮ್ಮ ಪರವಾಗಿ ಚರ್ಚಿಸಿದ್ದೇನೆ. ಗ್ರಾಮೀಣ ಭಾಗದ ಶಿಕ್ಷಕರಿಗೆ ಬಹಳಷ್ಟು ಸಮಸ್ಯೆಗಳಿವೆ. ಆದ್ದರಿಂದ, ಅಂತಹ ಶಿಕ್ಷಕರಿಗೆ ಗಿರಿ ಭತ್ಯೆ ನೀಡಬೇಕೆಂದು ಒತ್ತಾಯಿಸಿದ್ದೇನೆ ಎಂದು ತಿಳಿಸಿದರು.ತಾಪಂ ಅಧ್ಯಕ್ಷೆ ಈ.ಸಿ.ಜಯಶ್ರೀ ಮೋಹನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಎಚ್.ಟಿ.ರಾಜೇಂದ್ರ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್‌.ನಾಗೇಶ್‌, ಪಪಂ ಸದಸ್ಯರಾದ ಪ್ರಶಾಂತ್‌.ಎಲ್.ಶೆಟ್ಟಿ, ಜುಬೇದಾ, ಮುನಾವರ್‌ ಪಾಷಾ, ತಹಶೀಲ್ದಾರ್‌ ಎಚ್.ಎಂ.ನಾಗರಾಜ್‌, ತಾಪಂ ಇಒ ಎಸ್‌.ನಯನ, ಬಿಇಒ ಪಿ.ನಾಗರಾಜ್‌, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಚ್.ಎಸ್‌.ರವಿಕುಮಾರ್‌, ಪಪಂ ಮುಖ್ಯಾಧಿಕಾರಿ ಕುರಿಯಕೋಸ್‌, ಡಿಎಸ್‌ಎಸ್‌ ಸಮಿತಿಯ ಡಿ.ರಾಮು, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಶ್ರೀನಿವಾಸ್‌, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಡಿ.ರಾಜಪ್ಪ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಭದ್ರೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ನಂಜುಂಡಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇದೂರು, ಬಿಆರ್‌ಸಿ ಮಥಾಯಿ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಫ್‌.ಎಂ.ಛಲವಾದಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಸುಜಾತಾ, ಕಟ್ಟಿನಮನೆ ಶಾಲೆಯ ಶಿಕ್ಷಕ ಹರೀಶ್‌ ಅವರಿಗೆ ತಾಲೂಕಿನ ಪ್ರೌಢಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರಾಥಮಿಕ ಶಾಲಾ ಶಿಕ್ಷಕರ ವಿಭಾಗದಿಂದ ತಾಲೂಕಿನ ಮೂಡಬಾಗಿಲು ಶಾಲೆ ಶಿಕ್ಷಕ ಅರುಣ್‌ಕುಮಾರ್‌, ಬಾಳೆಹೊನ್ನೂರು ಆರ್‌.ಪಿ.ಮಠ ಶಾಲೆಯ ಶಿಕ್ಷಕಿ ರೂಪಾ, ಆಲ್ದಾರ ರಾಜಪ್ಪ, ಕಾರ್ಮಲ್ ಶಾಲೆಯ ಶಿಕ್ಷಕಿ ಡಯಾನಾ, ಸೀತೂರು ಶಾಲೆ ಶಿಕ್ಷಕ ಬಸಪ್ಪ, ಶೆಟ್ಟಿಕೊಪ್ಪ ಶಾಲೆಯ ಮುಖ್ಯ ಶಿಕ್ಷಕಿ ಪುಟ್ಟಮ್ಮ ಅವರಿಗೆ ತಾಲೂಕಿನ ಪ್ರಾಥಮಿಕ ಶಾಲೆಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ತನುಶ್ರೀ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಶರತ್‌ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ತಾಲೂಕಿನ ಮಾಗುಂಡಿಯ ಸರ್ಕಾರಿ ಪ್ರೌಢಶಾಲೆಗೆ ಉತ್ತಮ ಪ್ರೌಢಶಾಲೆ ಹಾಗೂ ದಿಂಡಿನಕೊಪ್ಪ ಸರ್ಕಾರಿ ಪ್ರಾಥಮಿಕ ಪಾಠಶಾಲೆ, ಕಬ್ಬಿನಮಣ್ಣು ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳಿಗೆ ಉತ್ತಮ ಪ್ರಾಥಮಿಕ ಶಾಲೆ ಪ್ರಶಸ್ತಿ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next