ಎನ್.ಆರ್.ಪುರ: ಇಲ್ಲಿನ ಮಕ್ಕಳ ಚೌಡಮ್ಮ ಗುಡಿಯಲ್ಲಿ ದೀಪೋತ್ಸವದ ಅಂಗವಾಗಿ ವಿತರಿಸಿದ ಪ್ರಸಾದ ಸೇವಿಸಿ 150ಕ್ಕೂ ಹೆಚ್ಚು ಜನ ಅಸ್ಪಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ದೀಪೋತ್ಸವದ ಹಿನ್ನೆಲೆಯಲ್ಲಿ ಮಕ್ಕಳ ಚೌಡಮ್ಮಗೆ ಶನಿವಾರ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಪೂಜೆಗೆ ಬಂದ ಭಕ್ತರಿಗೆ ಪಲಾವ್, ಕೇಸರಿಬಾತ್, ಮೊಸರನ್ನವನ್ನು ಪ್ರಸಾದವಾಗಿ ನೀಡಲಾಗಿತ್ತು. ಭಕ್ತರಿಗೆ ಹಂಚಿದ ನಂತರವೂ ಪಲಾವ್ ಉಳಿದಿತ್ತು. ಸಂಜೆ ದೀಪೋತ್ಸವ ಮುಗಿದ ಬಳಿಕ ರಾತ್ರಿ 9ಗಂಟೆ ಸುಮಾರಿಗೆ ಭಕ್ತರಿಗೆ ಬೆಳಿಗ್ಗೆ ಉಳಿದಿದ್ದ ಪಲಾವ್, ಕೇಸರಿಬಾತ್, ಮೊಸರನ್ನ, ಮೊಸರು ಬಜ್ಜಿಯನ್ನು ಪ್ರಸಾದವಾಗಿ ವಿತರಿಸಲಾಯಿತು.
ರಾತ್ರಿ 10ರ ಸುಮಾರಿಗೆ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಶ್ವೇತಾ ಅವರ ಮಕ್ಕಳಾದ ಪೂಜಿತ್ ಹಾಗೂ ಪೂರ್ವಿಕಾಗೆ ಇದ್ದಕ್ಕಿದ್ದಂತೆ ವಾಂತಿ, ಬೇಧಿ ಆರಂಭವಾಗಿದೆ. ಕೂಡಲೇ ಇವರಿಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಇದಾದ ನಂತರ ಪ್ರಸಾದ ಸೇವಿಸಿದ್ದ ಹಲವರು ಅಸ್ವಸ್ಥರಾಗಿದ್ದಾರೆ. ಕೆಲವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಡರಾತ್ರಿ ವೇಳೆಗೆ ಪ್ರಸಾದ ಸೇವಿಸಿದ 60ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಭಾನುವಾರ ಮಧ್ಯಾಹ್ನದ ವೇಳೆಗೆ ಎಲ್ಲರೂ ವಾಪಸ್ ಮನೆಗೆ ತೆರಳಿದ್ದಾರೆ. ಕಾಲೋನಿಗೆ ಶಾಸಕರ ಭೇಟಿ: ದೀಪೋತ್ಸವದಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಗಳ ಮನೆಗೆ ಭಾನುವಾರ ಶಾಸಕ ಟಿ.ಡಿ.ರಾಜೇಗೌಡ ಯೋಗಕ್ಷೇಮ ವಿಚಾರಿಸಿದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಪ್ರಶಾಂತ್ ಶೆಟ್ಟಿ, ಜುಬೇದ, ಮುಖಂಡರಾದ ಕೆ.ಎಂ.ಸುಂದರೇಶ್, ಅಬೂಬಕರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್ ಇದ್ದರು.
ಫುಡ್ ಪಾಯಿಸನ್ ಆಗಿರುವ ಸಾಧ್ಯತೆ ಇದೆ. ಆರೋಗ್ಯ ನಿರೀಕ್ಷಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಸಾದದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ.
ಡಾ| ವೀರಪ್ರಸಾದ್,
ತಾಲೂಕು ವೈದ್ಯಾಧಿಕಾರಿ