Advertisement

ಎನ್‌.ಕೊಟ್ರೇಶ್‌ ಜೆಡಿಎಸ್‌ ಹುರಿಯಾಳು

04:33 PM Apr 24, 2018 | Team Udayavani |

ಹರಪನಹಳ್ಳಿ: ಕಳೆದ ಹತ್ತು ವರ್ಷದಿಂದ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದ ನನಗೆ ಪಕ್ಷದವರು ಮೋಸ ಮಾಡಿದರು. ಹಾಗಾಗಿ ರೈತಪರವಾದ ಜಾತ್ಯತೀತ ಜನತಾದಳಕ್ಕೆ ನಾನು ಸೇರ್ಪಡೆಗೊಂಡಿದ್ದೇನೆ ಎಂದು ಸ್ಥಳೀಯ ಮುಖಂಡ ಅರಸೀಕೆರೆ ಎನ್‌.ಕೊಟ್ರೇಶ್‌ ತಿಳಿಸಿದರು.

Advertisement

ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಬಿಜೆಪಿ ತೊರೆದು ಜೆಡಿಎಸ್‌ ಸೇರ್ಪಡೆಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿಗೆ ತನುಮನ ಅರ್ಪಿಸಿದ್ದೆ. ತಾಲೂಕಿನ ಜನರ ಆಶಯದಂತೆ ಸ್ಥಳೀಯರಿಗೆ ಟಿಕೆಟ್‌ ನೀಡಬೇಕು ಎಂದು ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದೆವು. ಕೊನೆ ಕ್ಷಣದವರಿಗೂ ನೀವೇ ಕ್ಷೇತ್ರದ ಅಭ್ಯರ್ಥಿ ಎಂದು ಹೇಳುತ್ತಾ ಪಕ್ಷ ಸಂಘಟನೆಗೆ ನೀವು ಒತ್ತು ನೀಡಿ ಎಂದು ನಾನು ಹಾಗೂ ನನ್ನ ನಂಬಿದ ಕಾರ್ಯಕರ್ತರಿಗೆ ದ್ರೋಹ ಬಗೆದರು ಎಂದರು.

ಏ. 24ರಂದು ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ತೆರಳಿ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ. ಹರಿಹರ ಶಾಸಕ ಎಚ್‌.ಎಸ್‌. ಶಿವಶಂಕರ, ಜೆಡಿಎಸ್‌ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದರು.

ಜೆಡಿಎಸ್‌ ಮುಖಂಡ ಪಾಟೀಲ ಬೆಟ್ಟನಗೌಡ ಮಾತನಾಡಿ, ಜೆಡಿಎಸ್‌ ಪಕ್ಷದ ದೃಷ್ಟಿಯಿಂದ ತಾಲೂಕಿಗೆ ಇಂದು ಸುದಿನ. ತಾಲೂಕಿಗೆ ಒಳ್ಳೆಯ ಆಡಳಿತ ಹಾಗೂ ಸ್ಥಳೀಯರಿಗೆ ಆದ್ಯತೆ ನೀಡುವ ಉದ್ದೇಶ ಪಕ್ಷದ್ದಾಗಿದೆ. ಜೆಡಿಎಸ್‌ ಅಭ್ಯರ್ಥಿ ಆಗಿರುವ ರೈತ ನಾಯಕ ಎನ್‌.ಕೊಟ್ರೇಶ್‌ ಅವರನ್ನು ಗೆಲ್ಲಿಸುವ ಜವಾಬ್ದಾರಿ ಪಕ್ಷದ ಮುಖಂಡರು, ಕಾರ್ಯಕರ್ತರ ಮೇಲಿದೆ ಎಂದರು.

ಜಿಪಂ ಸದಸ್ಯ ಡಾ| ಮಂಜುನಾಥ್‌ ಉತ್ತಂಗಿ, ಮುಖಂಡರಾದ ಸಾಸ್ವಿಹಳ್ಳಿ ಚನ್ನಬಸವನಗೌಡ, ನಿಚ್ಚವನಹಳ್ಳಿ ಪರಶುರಾಮಪ್ಪ, ಶಿಕಾರಿ ಬಾಲಪ್ಪ, ಶಿರಹಟ್ಟಿ ದಂಡ್ಯೆಪ್ಪ, ವೆಂಕಟೇಶರೆಡ್ಡಿ, ಮೈದೂರು ರಾಮಪ್ಪ, ವಕೀಲ ಜಗದಪ್ಪ, ಕಂಚಿಕೆರೆ ಕೆಂಚಪ್ಪ, ನೇಮ್ಯನಾಯ್ಕ, ಅರಸೀಕೆರೆ ಅಜೇಯ, ತೆಲಗಿ ಮಂಜುನಾಥ, ಡಂಕಿ ಇಮ್ರಾನ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next