Advertisement

ಪುರಾಣ ಕತೆ: ಮುಚುಕುಂದ 

03:45 AM May 04, 2017 | |

ಕೃಷ್ಣನು ಮಥುರೆಗೆ ಹಿಂದಿರುಗಿದ. ಬಲರಾಮನನ್ನು ನಗರದ ರಕ್ಷಣೆಗೆ ಬಿಟ್ಟು ತಾನು ಊರ ಹೆಬ್ಟಾಗಿಲಿಗೆ ಬಂದ. ಆ ಹೊತ್ತಿಗೆ ಕಾಲಯವನನು ಅಲ್ಲಿ ಬೀಡುಬಿಟ್ಟಿದ್ದ. ಅವನು ಕೃಷ್ಣನನ್ನು ನೋಡಿರಲಿಲ್ಲವಾದರೂ ಅವನ ರೂಪದಿಂದ ಗುರುತು ಹಿಡಿದ. ಅವನನ್ನು ಕಂಡು ಕೃಷ್ಣನು ಹೆದರಿಕೊಂಡವನಂತೆ ಓಡಲಾರಂಭಿಸಿದ. ಕಾಲಯವನನು ಅಟ್ಟಿಸಿಕೊಂಡು ಬಂದ. ಕೃಷ್ಣನು ಬೆಟ್ಟಗಳಲ್ಲಿ ಒಂದು ಗುಹೆಯನ್ನು ಹೊಕ್ಕ. ಕಾಲಯವನನೂ ಗುಹೆಗೆ ನುಗ್ಗಿದ. ಗುಹೆಯಲ್ಲಿ ಕಗ್ಗತ್ತಲು. ಕಾಲಯವನನಿಗೆ ಯಾರೋ ಮಲಗಿರುವುದು ಅಸ್ಪಷ್ಟವಾಗಿ ಕಂಡಿತು. ಕೃಷ್ಣನೇ ಇರಬೇಕೆಂದು ಮಲಗಿದ್ದವನನ್ನು ಒದ್ದ. 

Advertisement

ಮಲಗಿದ್ದವನು ಎದ್ದು ಕೋಪದಿಂದ ಅವನನ್ನು ನೋಡಿದ. ಕಾಲಯವನನು ಸುಟ್ಟು ಬೂದಿಯಾದ. ಆಗ ಕೃಷ್ಣನು ಅವನಿಗೆ ಕಾಣಿಸಿಕೊಂಡ. ಕೃಷ್ಣನ ದಿವ್ಯಮಂಗಲ ರೂಪವನ್ನು ಕಂಡು, ಮಲಗಿ ಎದ್ದಾತನಲ್ಲಿ ಭಕ್ತಿ ಉಕ್ಕಿತು. ತಾನು ಯಾರೆಂದು ಹೇಳಿಕೊಂಡ. ಅವನು “ಮುಚುಕುಂದ’ ಎಂಬ ರಾಜ. ದೇವತೆಗಳಿಗೆ ರಾಕ್ಷಸರಿಂದ ಕಾಟ ಹೆಚ್ಚಾದಾಗ ಅವರ ನೆರವಿಗೆ ಹೋದ. ಬಹಳ ಕಾಲ ನಿದ್ರೆ ಇರಲಿಲ್ಲ. ಅಲ್ಲಿಂದ ಬಂದವನು ನಿರಾತಂಕವಾಗಿ ನಿದ್ರೆ ಮಾಡುತ್ತಿದ್ದ. ತನ್ನ ಮುಂದೆ ಇರುವುದು ಕೃಷ್ಣ ಎಂದು ತಿಳಿಯುತ್ತಲೇ ಅವನು ನಮಸ್ಕರಿಸಿ ತನಗೆ ಮೋಕ್ಷವನ್ನು ಅನುಗ್ರಹಿಸಬೇಕೆಂದು ಬೇಡಿದ. ಕೃಷ್ಣನು ಅವನು ಮುಂದಿನ ಜನ್ಮದಲ್ಲಿ ಬ್ರಹ್ಮಜ್ಞಾನಿಯಾಗಿ ಮೋಕ್ಷವನ್ನು ಪಡೆಯುವನೆಂದು ಭರವಸೆಯನ್ನು ಕೊಟ್ಟ.

ಕಾಲಯವನು ಸತ್ತ ಮೇಲೆ ಮಥುರೆಯ ಹೊರಗೆ ಬೀಡುಬಿಟ್ಟಿದ್ದ ಅವನ ಸೈನ್ಯವನ್ನು ಸೋಲಿಸುವುದು ಕೃಷ್ಣನಿಗೆ ಕಷ್ಟವಾಗಲಿಲ್ಲ. ಆ ಸೈನ್ಯವನ್ನು ಸೋಲಿಸಿದಾಗ ಅವನಿಗೆ ಬೇಕಾದಷ್ಟು ಧನವು ಸಿಕ್ಕಿತು. ಅದನ್ನು ಮಥುರೆಗೆ ಸಾಗಿಸುತ್ತಿದ್ದಾಗ ಜರಾಸಂಧನು ತನ್ನ ಇಪ್ಪತ್ತಮೂರು ಅಕ್ಷೋಹಿಣಿ ಸೈನ್ಯದೊಂದಿಗೆ ಮಥುರೆಯನ್ನು ಮುತ್ತಿದ. ಈ ಬಾರಿ ಬಲರಾಮ ಕೃಷ್ಣರು ಅವನೊಡನೆ ಯುದ್ಧಮಾಡಲಿಲ್ಲ. ಸಾಗಿಸುತ್ತಿದ್ದ ಧನವನ್ನು ಬಿಟ್ಟು ಓಡಿಹೋದರು. ಜರಾಸಂಧ ಅಟ್ಟಿಸಿಕೊಂಡು ಬಂದ. ರಾಮ, ಕೃಷ್ಣರು ಒಂದು ಬೆಟ್ಟವನ್ನು ಹತ್ತಿದರು. ಜರಾಸಂಧನು ಬೆಟ್ಟದ ಸುತ್ತ ಸೌದೆಯನ್ನು ಒಟ್ಟಿಸಿ ಬೆಂಕಿಹಾಕಿಸಿದ. ರಾಮ, ಕೃಷ್ಣರು ತಪ್ಪಿಸಿಕೊಂಡು ದ್ವಾರಕೆಗೆ ಹೋದರು. ಜರಾಸಂಧನು ಅವರಿಬ್ಬರೂ ಬೆಂಕಿಯಲ್ಲಿ ಹತರಾಗಿರಬೇಕೆಂದು ಯೋಚಿಸಿ, ಮಗಧ ದೇಶಕ್ಕೆ ಹಿಂದಿರುಗಿದ.

ಎಲ್‌. ಎಸ್‌ ಶೇಷಗಿರಿ ರಾವ್‌
(“ಕಿರಿಯರ ಭಾಗವತ’ ಪುಸ್ತಕದಿಂದ)

Advertisement

Udayavani is now on Telegram. Click here to join our channel and stay updated with the latest news.

Next