Advertisement

Mysuru ಅರಮನೆ ಆನೆಗಳಿಗೆ ಕೂಡಿಕೆ ಭಾಗ್ಯ: ಚಂಚಲೆ, ಪ್ರೀತಿಯೊಂದಿಗೆ ಮಹೇಂದ್ರ, ಭೀಮನ ಚಿನ್ನಾಟ

05:57 PM Oct 14, 2023 | Team Udayavani |

ಮೈಸೂರು: ಇಡೀ ವರ್ಷ ಬೇರೊಂದು ಆನೆಗಳ ಸಂಪರ್ಕವಿಲ್ಲದೆ ವಿರಹ ವೇದನೆಯಿಂದ ಬಳಲಿ ಬಾಡಿದ್ದ ಅರಮನೆ ಹೆಣ್ಣಾನೆಗಳಿಗೆ ಕೊನೆಗೂ ಕೂಡಿಕೆ ಭಾಗ್ಯ ಬಂದಿದೆ. ದಸರಾ ಗಜಪಡೆಯ ಗಂಡಾನೆಗಳು ಚಂಚಲೆ,ಪ್ರೀತಿಯೊಂದಿಗೆ ಚೆಲ್ಲಾಟವಾಡಿದವು.

Advertisement

ಹೌದು, ಕಳೆದ ಹಲವು ವರ್ಷಗಳಿಂದ ಅರಮನೆ ಮಂಡಳಿ ಉಸ್ತುವಾರಿ ಯಲ್ಲಿರುವ ಚಂಚಲೆ, ಪ್ರೀತಿ ಆನೆಗಳು ಅರಮನೆ ಕೋಟೆಯೊಳಗಷ್ಟೇ ಸೀಮಿತವಾಗಿದ್ದು, ತಮ್ಮ ಇಡೀ ಯೌವ್ವನವನ್ನು ಕೋಡಿ ರಾಮೇಶ್ವರ ದೇವಸ್ಥಾನದ ಬಳಿಯ ಅರಳಿಮರದಡಿ ಗಂಡಾನೆಗಳ ಸಂಘವಿಲ್ಲದೇ ವಿರಹ ವೇದ ನೆಯಿಂದ ಬಳಲಿದ್ದವು.

ಈ ಆನೆಗಳ ಮೂಕ ವೇದನೆಯ ಸೂಕ್ಷ್ಮವನ್ನರಿತ ಅರಣ್ಯಾಧಿಕಾರಿಗಳು ಕೆಲ ವರ್ಷಗಳಿಂದ ಪ್ರತಿಬಾರಿಯ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ದಸರಾ ಆನೆಗಳಲ್ಲಿ ಕೆಲಗಂಡಾನೆಗಳನ್ನು ಅರಮನೆ ಆನೆಗಳೊಂದಿಗೆ ಕೂಡಿಕೆಗೆ ಬಿಡುವ ಮೂಲಕ ಅವುಗಳ ಏಕತಾನತೆಯನ್ನು ಹೋಗಲಾಡಿಸುವ ಪ್ರಯೋಗ ಮಾಡಿದರು. ಅದರಂತೆ ಈ ಬಾರಿಯ ದಸರಾ ಉತ್ಸವದಲ್ಲಿ ಜಂಬೂ ಸವಾರಿ ಯಶಸ್ವಿಗೊಳಿಸಲು ಆಗಮಿಸಿರುವ
ಮಹೇಂದ್ರ, ಭೀಮ ಆನೆಗಳು ಚಂಚಲೆ ಮತ್ತು ಪ್ರೀತಿ ಆನೆಗಳೊಂದಿಗೆ ಕೂಡಿ ಚೆಲ್ಲಾಟವಾಡಿದವು.

ನಾಚಿ ನೀರಾದರು:ಪ್ರತಿ ಬಾರಿಯಂತೆ ಈ ಬಾರಿಯೂ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿ ರುವ ಗಜಪಡೆ ಗಂಡಾನೆಗಳಾದ ಅರ್ಜುನ, ಮಹೇಂದ್ರ, ಭೀಮ ಮತ್ತು ಧನಂಜಯ ಆನೆಗಳು ಅರಮನೆ ಆನೆಗಳೊಂದಿಗೆ ಬೆರೆತು ಅವುಗಳ ಏಕತಾನತೆ ಹೋಗಲಾಡಿಸಲು ಪ್ರಯತ್ನಿಸಿದವು. ಶುಕ್ರವಾರ ಬೆಳಗ್ಗೆ ಮದವೇರಿದ ಮಹೇಂದ್ರ ಪ್ರೀತಿಯೊಂದಿಗೆ ಸೇರಿ ಗಂಟೆಗೂ ಹೆಚ್ಚು ಕಾಲ ಏಕಾಂತವಾಸ ಅನುಭವಿಸಿದ. ಈ ವೇಳೆ ಆನೆಗಳ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೌತುಕದಿಂದ ಕಂಡು ನಾಚಿ ನೀರಾದ ದೃಶ್ಯವೂ ಕಂಡು ಬಂದಿತು.

ಅರಮನೆ ಸುಪರ್ದಿಯಲ್ಲಿ
ರಾಜವಂಶಸ್ಥರಿಗೆ ವಿಜಯದಶಮಿಯಂದು ಮತ್ತು ಇತರೆ ಧಾರ್ಮಿಕ ಕಾರ್ಯ ಗಳಿಗೆ ಆನೆ, ಒಂಟೆ, ಗೋವು ಅಗತ್ಯವಿದ್ದು ಅದರಂತೆ ಒಂಟೆ, ಗೋವು ಮತ್ತು ಆನೆಗಳನ್ನು ಅರಮನೆಯಲ್ಲೇ ಸಲಹಲಾಗುತ್ತಿದೆ. ಅರಣ್ಯ ಇಲಾಖೆ ಕಾನೂನು ಮತ್ತಷ್ಟು ಬಲಗೊಂಡು ವನ್ಯಜೀವಿಗಳನ್ನು ಖಾಸಗಿಯವರು ಅನ್ಯ ಉದ್ದೇಶಕ್ಕೆ ಬಳಕೆ ಮಾಡದಂತೆ ನಿಯಮ ರೂಪಿತವಾದಾಗ ವಿವಿಧ ಸರ್ಕಸ್‌ ಕಂಪನಿಗಳಲ್ಲಿದ್ದ ಆನೆಗಳನ್ನು ವಶಪಡಿಸಿಕೊಂಡ ಅರಣ್ಯ ಇಲಾಖೆ ಕೆಲವನ್ನು ಸಾಕಾನೆ ಶಿಬಿರಕ್ಕೆ ಕಳಿಸಿದರೆ ಇನ್ನೂ ಕೆಲವನ್ನು ಅರಮನೆಗೆ ನೀಡಿತ್ತು.

Advertisement

ಇಲಾಖೆ ನೀಡಿದ್ದ 7 ಆನೆಗಳ ಪೈಕಿ 5 ಆನೆ 2 ವರ್ಷಗಳ ಹಿಂದಿನವರಗೆ ಅರಮನೆಯಲ್ಲೇ ಇದ್ದವು. ಆದರೆ, ಅವುಗಳ ಪಾಲನೆ ದೃಷ್ಟಿಯಿಂದ ಗುಜರಾತ್‌ಗೆ ನೀಡಲಾಯಿತು. ಸದ್ಯಕ್ಕೆ ಅರಮನೆಯಲ್ಲಿ ಚಂಚಲೆ, ಪ್ರೀತಿ ಆನೆಗಳಷ್ಟೇ ಅರಮನೆ ಸುಪರ್ದಿಯಲ್ಲಿ ಉಳಿದಿವೆ.

ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next