ಮೈಸೂರು: ಮಧ್ಯವಯಸ್ಸಿನ ಹಾಗೂ ವಿಧವಾ ಮಹಿಳೆಯರನ್ನ ನಂಬಿಸಿ ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ವಂಚಕನನ್ನು ಕುವೆಂಪು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಬನಶಂಕರಿ ಬಡಾವಣೆ ನಿವಾಸಿ ಮಹೇಶ್ (35)ಬಂಧಿತ ಆರೋಪಿ. ಈತನಿಂದ 2 ಲಕ್ಷ ನಗದು,2 ಕಾರು,ಒಂದು ಬ್ರೇಸ್ ಲೈಟ್,ಒಂದು ಉಂಗುರ, ಎರಡು ಚಿನ್ನದ ಬಳೆ, ಒಂದು ನೆಕ್ಲೆಸ್ ಹಾಗೂ 7 ಮೊಬೈಲ್ ಗಳನ್ನ ವಶಪಡಿಸಿಕೊಳ್ಳಲಾಗಿದೆ.
ಮೈಸೂರಿನ ನಿವಾಸಿ ಹೇಮಲತಾ ಎಂಬುವರಿಗೆ ತಾನು ಡಾಕ್ಟರ್ ಎಂದು ಹೇಳಿಕೊಂಡು ಶಾದಿ ಡಾ.ಕಾಂ ನಲ್ಲಿ ಪರಿಚಯಿಸಿಕೊಂಡು ನಂಬಿಸಿ ನಂತರ ಮದುವೆಯಾಗಿ ನಗದು ಹಾಗೂ ಚಿನ್ನಾಭರಣಗಳೊಂದಿಗೆ ಮಹೇಶ್ ಪರಾರಿಯಾಗಿದ್ದ. ಈ ಸಂಬಂಧ ಹೇಮಲತಾ ರವರು ಕುವೆಂಪುನಗರ ಪೊಲೀಸರಿಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಈತ ತಾನು ಡಾಕ್ಟರ್,ಇಂಜಿನಿಯರ್,ಸಿವಿಲ್ ಕಂಟ್ರಾಕ್ಟರ್ ಎಂದು ಹೇಳಿಕೊಂಡು ಸುಮಾರು 15 ಮಹಿಳೆಯರಿಗೆ ದೋಖಾ ಮಾಡಿರುವುದು ಬೆಳಕಿಗೆ ಬಂದಿದೆ.
ಶಾಧಿ.ಡಾ.ಕಾಂ ಮೂಲಕ ಹೇಮಲತಾ ರವರನ್ನ ಸಂಪರ್ಕ ಮಾಡಿದ ಮಹೇಶ್,ಮೈಸೂರಿನ ವಿಜಯನಗರದಲ್ಲಿರುವ ಮನೆ ತೋರಿಸಿ ನಂಬಿಸಿದ್ದಾನೆ. ಈತನ ಮಾತುಗಳನ್ನ ನಂಬಿದ ಹೇಮಲತಾ ಕಳೆದ ಜ. 1 ರಂದು ವಿಶಾಖಪಟ್ನಂ ನಲ್ಲಿ ಮದುವೆಯಾಗಿದ್ದಾರೆ. ನಂತರ ಮೈಸೂರಿನ ಮನೆಗೆ ಬಂದು ನೆಲೆಸಿದ್ದಾರೆ.ತಾನು ಕ್ಲಿನಿಕ್ ಓಪನ್ ಮಾಡಬೇಕು ಎಂದು ಕಾರಣ ನೀಡಿ 70 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾನೆ.ಹಣ ಕೊಡಲು ಹೇಮಲತಾ ಒಪ್ಪದೇ ಇದ್ದಾಗ ಕೊಲೆ ಬೆದರಿಕೆ ಹಾಕಿದ್ದಾನೆ.ನಂತರ ಹೇಮಲತಾ ಮನೆಯಲ್ಲಿ ಇಲ್ಲದಿರುವ ಸಮಯ ನೋಡಿಕೊಂಡು 15 ಲಕ್ಷ ಹಣ ಹಾಗೂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾನೆ.ನಂತರ ಈತ ಮನೆಗೆ ಹಿಂದಿರುಗಿಲ್ಲ.ಕೆಲವೇ ದಿನಗಳಲ್ಲಿ ಬೆಂಗಳೂರಿನ ದಿವ್ಯಾ ಎಂಬುವರು ಹೇಮಲತಾ ರವರನ್ನ ಸಂಪರ್ಕಿಸಿ ತನ್ನನ್ನೂ ಮದುವೆ ಆಗಿದ್ದಾರೆಂದು ಮಾಹಿತಿ ತಿಳಿಸಿದ್ದಾರೆ. ಮಹೇಶ್ ವಂಚನೆಗೆ ಬೇಸತ್ತ ಹೇಮಲತಾ ನ್ಯಾಯಕ್ಕಾಗಿ ಕುವೆಂಪುನಗರ ಪೊಲೀಸರ ಮೊರೆ ಹೋಗಿದ್ದಾರೆ.ದೂರು ದಾಖಲಿಸಿಕೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ವಂಚಕನನ್ನು ಬಂಧಿಸಿದ್ದಾರೆ.
ಮಹಿಳೆಯರಿಗೆ ವಂಚಿಸುವ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದರೂ ಸಹ ಅಮಾಯಕ ಮಹಿಳೆಯರು ಮೋಸ ಹೋಗುತ್ತಿದ್ದು, ಇನ್ನು ಮುಂದಾದರೂ ಸಹ ಮದುವೆಯ ವೆಬ್‌ಸೈಟ್‌ಗಳಲ್ಲಿ ವೆಬ್‌ಸೈಟ್‌ಗಳಲ್ಲಿ ಬರುವ ಆಫರ್‌ಗಳನ್ನು ಏಕಾಏಕಿ ನಂಬದೆ ಪರಿಶೀಲಿಸಿ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಸಲಹೆ ನೀಡಿದ್ದಾರೆ.
ಪತ್ತೆ ಕಾರ್ಯವನ್ನು ಡಿಸಿಪಿ ಮುತ್ತುರಾಜು ಅವರ ಮಾರ್ಗದರ್ಶನದಲ್ಲಿ ಕೆ.ಆರ್. ವಿಭಾಗದ ಎಸಿಪಿ ಗಂಗಾಧರ ಸ್ವಾಮಿ ಉಸ್ತುವಾರಿಯಲ್ಲಿಕುವೆಂಪುನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಲ್.ಅರುಣ್, ಎಸ್‌ಐ ಎಂ. ರಾಧ, ಎಸ್.ಪಿ.ಗೋಪಾಲ್, ಎಎಸ್‌ಐ ನಂಜುಂಡಸ್ವಾಮಿ, ಸಿಬ್ಬಂದಿಗಳಾದ ಎಂ.ಪಿ.ಮಂಜುನಾಥ, ಆನಂದ್, ಎನ್.ಕೆ.ಪುಟ್ಟಪ್ಪ , ಹಜರತ್, ಸುರೇಶ್, ತಾಂತ್ರಿಕ ವಿಭಾಗದ ಕುಮಾರ್ ಮಾಡಿದ್ದಾರೆ.