Advertisement

Hunasur: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ತಿಪಟೂರಿನ ಮಹಿಳೆ!

09:05 PM Oct 30, 2024 | Team Udayavani |

ಹುಣಸೂರು: ಎರಡೂವರೆ ವರ್ಷಗಳ ಹಿಂದೆ ಮದುವೆಯಾಗಿದ್ದ ಗೃಹಿಣಿಯೊಬ್ಬರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ವರದಕ್ಷಿಣೆಗಾಗಿ ಕೊಲೆ  ಮಾಡಿದ್ದಾರೆಂದು ಆರೋಪಿಸಿ ಅಳಿಯನ ಕುಟುಂಬದ ವಿರುದ್ದ ದೂರು ನೀಡಿರುವ ಘಟನೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ.

Advertisement

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕೂಡ್ಲೂರು ನಿವಾಸಿ ಅಂತೋಣಿ ಕಿರಣ್ ಪತ್ನಿ ನಿತ್ಯ ನಿರ್ಮಲಾ (25) ಮೃತಪಟ್ಟವರು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಸಣ್ಣೇನಹಳ್ಳಿಯ ತೆರೆಸಮ್ಮರ ಎರಡನೇ ಪುತ್ರಿಯನ್ನು ಎರಡೂವರೆ ವರ್ಷ ಹಿಂದೆ ಕೂಡ್ಲೂರಿನ ಅಂತೋಣಿ ಕಿರಣ್‌ ಜೊತೆ ಮದುವೆ ಮಾಡಿದ್ದರು. ಒಂದು ವರ್ಷದ ಮಗು ಇದೆ.

ಘಟನೆ ವಿವರ:
ಕೆಲವು ದಿನಗಳಿಂದ ಪತಿ ಅಂತೋಣಿ ಕಿರಣ್ ಮದುವೆ ವೇಳೆ ವರದಕ್ಷಿಣೆ ಕೊಟ್ಟಿಲ್ಲ. ಬೇರೆಯವರ ಮದುವೆಯಾಗಿದ್ದರೆ ಲಕ್ಷಾಂತರ ರೂಪಾಯಿ ವರದಕ್ಷಿಣೆ ಸಿಗುತ್ತಿತ್ತು, ಮನೆ ಕಟ್ಟುತ್ತಿದ್ದೇನೆ ಈಗಲಾದರೂ ತವರು ಮನೆಯಿಂದ ಹಣ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಈ ಬಗ್ಗೆ 2-3 ಬಾರಿ ನ್ಯಾಯ ಪಂಚಾಯ್ತಿಯೂ ನಡೆದಿತ್ತು. ಪುತ್ರಿಯ ಸಮಾಧಾನ ಮಾಡಿ ಕಳುಹಿಸಿಕೊಟ್ಟಿದ್ದರು. ಇತ್ತೀಚೆಗೆ ಪತಿಯ ಕಿರುಕುಳ ಹೆಚ್ಚಾಗಿದ್ದರಿಂದ ಈ ಬಗ್ಗೆ ತಾಯಿಯೊಂದಿಗೆ ತನ್ನ ಸಂಕಷ್ಟ ನಿರ್ಮಲಾ ಹೇಳಿಕೊಂಡಿದ್ದಳು. ಆದರೆ ಸರಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ತಾಯಿ ತೆರೆಸಮ್ಮ ಊರಿನವರಿಗೆ ಗೊತ್ತಾದರೆ ಮರ್ಯಾದೆ ಹೋಗುವುದು ಎಂದು ಅಂಜಿ ಮಗಳನ್ನು ಸಮಾಧಾನಿಸುತ್ತಲೇ ಬಂದಿದ್ದರು.

ರಕ್ಷಿಸುವಂತೆ ತಾಯಿಗೆ ಫೋನ್ ಕರೆ:
ಮಂಗಳವಾರ ಬೆಳಗ್ಗೆ 10 ಗಂಟೆಗೆ ನಿರ್ಮಲಾ ತನ್ನ ತಾಯಿಗೆ ಪೋನ್ ಮಾಡಿ ನನಗೆ ಹಣ ತರುವಂತೆ ಚಿತ್ರ ಹಿಂಸೆ ನೀಡುತ್ತಿದ್ದಾರೆ. ಸಾಯಿಸುತ್ತೇನೆಂದು ಪತಿ ಹೊಡೆಯುತ್ತಿದ್ದರೆ. ಬಂದು ನನ್ನನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದಳು. ತೆರೆಸಮ್ಮ ಮಗಳಿಗೆ ಸಮಾಧಾನ ಹೇಳಿ, ಆಮೇಲೆ ಬರುವೆ ಎಂದು ಕರೆ ಕಟ್ ಮಾಡಿದ್ದರು. ನಂತರ ಪುತ್ರಿಗೆ ಫೋನ್ ಮಾಡಿದರೆ ಸ್ವಿಚ್‌ ಆಫ್ ಆಗಿತ್ತು. ಗಾಬರಿಯಾಗಿ ಕೂಡ್ಲೂರಿನ ಮಗಳ ಮನೆಯ ಅಕ್ಕಪಕ್ಕದವರಿಗೆ ಪೋನ್ ಮಾಡಿದಾಗ ಮಗಳ ಸಾವಿನ ಸುದ್ದಿ ತಿಳಿದು ಕಂಗೆಟ್ಟು. ಗ್ರಾಮಸ್ಥರೊಂದಿಗೆ ಕೂಡ್ಲೂರಿಗೆ ಹೋದ ವೇಳೆ ಪತ್ನಿ ನಿತ್ಯ ನಿರ್ಮಲಾ ಕಡಿಮೆ ರಕ್ತದ ಒತ್ತಡದಿಂದ ಮೃತಪಟ್ಟಿದ್ದಾಳೆಂದು ಅಂತ್ಯಕ್ರಿಯೆಗೆ ತಯಾರಿ ಮಾಡಿದ್ದರು.

ಮಾಹಿತಿ ನೀಡದೆ ಅಂತ್ಯಸಂಸ್ಕಾರಕ್ಕೆ ತಯಾರಿ:
ಎರಡೂ ಕಡೆಯವರ ನಡುವೆ ಗಲಾಟೆ ನಡೆದು ಶವವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕುತ್ತಿಗೆ ಬಿಗಿದು ಗಾಯವಾಗಿರುವುದು ಪತ್ತೆಯಾಗಿ ಅನುಮಾನಗೊಂಡ ತೆರೆಸಮ್ಮ ಗ್ರಾಮಾಂತರ ಪೊಲೀಸರಿಗೆ ಮಗಳನ್ನು ಗಂಡನ ಮನೆಯವರು ಕೊಲೆ ಮಾಡಿ ನೇಣು ಹಾಕಿದ್ದಲ್ಲದೆ. ಮಾಹಿತಿಯೂ ನೀಡದೆ ಅಂತ್ಯ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಮಗಳ ಸಾವಿಗೆ ಗಂಡನ ಮನೆಯವರೇ ಕಾರಣವೆಂದು ದೂರು ನೀಡಿದ ಅನ್ವಯ ಎಸ್.ಐ.ರಾಧಾ, ತಹಸೀಲ್ದಾರ್ ಮಂಜುನಾಥ್ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಶವವನ್ನು ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬದವರಿಗೆ ಹಸ್ತಾಂತರಿಸಿದ್ದು, ತಿಪಟೂರಿನ ಸಣ್ಣೇನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದೆಂದು ಕುಟುಂಬದವರು ತಿಳಿಸಿದರು.

Advertisement

ತಾಯಿ-ಮಗನಿಗೆ ನ್ಯಾಯಾಂಗ ಬಂಧನ
ಮೃತ ಮಹಿಳೆಯ ಮನೆಯವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಅಂತೋಣಿ ಕಿರಣ್  ಮತ್ತು ಆತನ ಕುಟುಂಬದವರ ವಶಕ್ಕೆ ಪಡೆದಿದ್ದು ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next