Advertisement

ದಸರಾ ಮಹೋತ್ಸವದ ಭಿತ್ತಿಚಿತ್ರ ಬಿಡುಗಡೆ

06:35 AM Sep 27, 2018 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಗಾಳಿಪಟ ಉತ್ಸವ, ವಿಂಟೇಜ್‌ ಕಾರ್‌ ರ್ಯಾಲಿ, ದಸರಾ ಆಟೋಕ್ರಾಸ್‌ ಕಾರುಗಳ ರೇಸ್‌ ಸೇರಿದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ದಸರಾ ಕಾರ್ಯಕಾರಿ ಸಮಿತಿ ಅಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ದಸರಾ ಭಿತ್ತಿಚಿತ್ರ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗಾಳಿಪಟದ ಸಂಸ್ಕೃತಿಯನ್ನು ಎಲ್ಲರಿಗೂ ಪರಿಚಯಿಸುವ ಮೂಲಕ ಮಕ್ಕಳು ಹಾಗೂ ಯುವ ಜನತೆಯಲ್ಲಿ ಸೃಜನಶೀಲತೆ, ಸ್ಪರ್ಧಾತ್ಮಕ ಮನೋಭಾವ, ಚಿಂತನೆ ಬೆಳೆಸಲು ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೆ.29,30ರಂದು ಲಲಿತಮಹಲ್‌ ಹೆಲಿಪ್ಯಾಡ್‌ ಮೈದಾನದಲ್ಲಿ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಮಂಗಳೂರು, ಮುಂಬೈ, ಅಹಮದಾಬಾದ್‌, ಸೂರತ್‌ ನಗರಗಳಿಂದ ವೃತ್ತಿ ನಿರತ ಗಾಳಿಪಟ ಹಾರಿಸುವವರು ಪಾಲ್ಗೊಳ್ಳಲಿದ್ದಾರೆ ಎಂದರು.

ಕಾರು ರ್ಯಾಲಿಗೆ ಚಾಲನೆ:
ಸೆ.30ರಂದು ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿ ಕುಮಾರಸ್ವಾಮಿ ವಿಂಟೇಜ್‌ ಕಾರುಗಳ ರ್ಯಾಲಿಗೆ ಚಾಲನೆ ನೀಡಲಿದ್ದು, ಅ.1ರಂದು ಮೈಸೂರಿನಲ್ಲಿ ವಿಂಟೇಜ್‌ ಕಾರುಗಳನ್ನು ಸ್ವಾಗತಿಸಲಾಗುವುದು. ಸೆ.30 ರಿಂದ ಅ.6ರವರೆಗೆ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ನಡೆಯಲಿದೆ. ಇಲ್ಲಿ ಆಯ್ಕೆಯಾದ ಕಾಲೇಜು ವಿದ್ಯಾರ್ಥಿಗಳ ತಂಡಗಳಿಗೆ ಅ.10ರಿಂದ 17ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಯುವ ದಸರಾದಲ್ಲಿ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ಕಲಾತಂಡಗಳ ಮೆರವಣಿಗೆ:
ಅ.14ರಂದು ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅರಮನೆಯಿಂದ ಬನ್ನಿಮಂಟಪ ಮೈದಾನದವರೆಗೆ ವಿವಿಧ ಕಲಾತಂಡಗಳ ಮೆರವಣಿಗೆ ಆಯೋಜಿಸಲಾಗಿದೆ. ಹೋಬಳಿ ಮಟ್ಟದಲ್ಲಿ ಗ್ರಾಮೀಣ ದಸರಾ ಆಯೋಜಿಸುವ ಸಂಬಂಧ ಅ.1ರಂದು ಶಾಸಕರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.

ದಸರಾ ಸಂದರ್ಭದಲ್ಲಿ ಅಂತಾರಾಜ್ಯ ಪ್ರವಾಸಿ ವಾಹನಗಳಿಗೆ ಪ್ರವೇಶ ತೆರಿಗೆ ವಿನಾಯಿತಿ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇನ್ನೂ ಸರ್ಕಾರದಿಂದ ಆದೇಶವಾಗಿಲ್ಲ ಎಂದರು.

Advertisement

ಅ.3ಕ್ಕೆ ಆಹ್ವಾನ:
ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸುವಂತೆ ಅ.3ರಂದು ರಾಜ್ಯಪಾಲರು, ಮುಖ್ಯಮಂತ್ರಿ, ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ, ದಸರಾ ಉದ್ಘಾಟಕರಾದ ಡಾ.ಸುಧಾಮೂರ್ತಿ ಅವರಿಗೆ ಜಿಲ್ಲಾಡಳಿತದ ವತಿಯಿಂದ ಆಹ್ವಾನ ನೀಡಲಾಗುವುದು ಎಂದು ಹೇಳಿದರು.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಜಿಲ್ಲಾಧಿಕಾರಿ ಅಭಿರಾಮ್‌ ಜಿ.ಶಂಕರ್‌, ಜಿಪಂ ಸಿಇಒ ಕೆ.ಜ್ಯೋತಿ, ನಗರ ಪೊಲೀಸ್‌ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರಾವ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮಿತ್‌ ಸಿಂಗ್‌, ಪಾಲಿಕೆ ಆಯುಕ್ತ ಕೆ.ಎಚ್‌.ಜಗದೀಶ್‌, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಜನಾರ್ದನ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಉಪ ಸಮಿತಿಗೆ ಹೆಸರು ಬಂದಿಲ್ಲ
ನಾಡಹಬ್ಬ ದಸರಾ ಮಹೋತ್ಸವ ಆಚರಣೆ ಸಂಬಂಧ ರಚಿಸಲಾಗುವ 16 ಉಪ ಸಮಿತಿಗಳಿಗೆ ಇದೇ ಮೊದಲ ಬಾರಿಗೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರನ್ನು ಸೇರಿಸಲು ಉತ್ಸುಕತೆ ತೋರಿಸುವ ಸಚಿವ ಜಿ.ಟಿ.ದೇವೇಗೌಡ ಅವರು, ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ ಮೂರು ಪಕ್ಷಗಳ ಅಧ್ಯಕ್ಷರುಗಳಿಗೆ ಪತ್ರ ಬರೆದು ಸಮಿತಿಗಳಿಗೆ ತಲಾ ಐದು ಹೆಸರುಗಳನ್ನು ನೀಡುವಂತೆ ಕೋರಿದ್ದರೂ ಈವರೆಗೆ ಯಾದ ಪಕ್ಷದವರೂ ಪಟ್ಟಿ ಕಳುಹಿಸಿಲ್ಲ. ಹೀಗಾಗಿ ಉಪ ಸಮಿತಿಗಳಿಗೆ  ಜನಪ್ರತಿನಿಧಿಗಳನ್ನು ಸೇರಿಸುವ ಕಾರ್ಯ ವಿಳಂಬವಾಗಿದೆ. ಒಂದೆರಡು ದಿನಗಳಲ್ಲಿ ಈ ಕೆಲಸ ಆಗುತ್ತದೆ ಎಂದ ಸಚಿವರು, ಸ್ವತಃ ನಾನೇ ಶಾಸಕ ತನ್ವೀರ್‌ ಸೇs…ಗೆ ದೂರವಾಣಿ ಕರೆ ಮಾಡಲು ಪ್ರಯತ್ನಿಸಿದರೂ ಸಿಗುತ್ತಿಲ್ಲ ಎಂದು ಹೇಳಿದರು.

ದಸರಾ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಡಾಂಬರೀಕರಣದ ಮುಂದುವರಿದ ಕಾಮಗಾರಿಗಳು ನಡೆಯುತ್ತಿವೆ. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ನಗರಾಭಿವೃದ್ಧಿ ಹಾಗೂ ಲೋಕೋಪಯೋಗಿ ಇಲಾಖೆಗೆ 216 ಕೋಟಿ ಅನುದಾನ ಕೇಳಲಾಗಿದ್ದು, ಹಣಕಾಸು ಇಲಾಖೆಯಿಂದ ಒಂದೆರಡು ದಿನಗಳಲ್ಲಿ ಒಪ್ಪಿಗೆ ಸಿಗಲಿದೆ.
– ಜಿ.ಟಿ.ದೇವೇಗೌಡ, ಜಿಲ್ಲಾ ಉಸ್ತುವಾರಿ ಸಚಿವ.ಮೈಸೂರು ಭಾಗದ ಪ್ರವಾಸೋದ್ಯಮ ರಾಯಭಾರಿಯಾಗಲು ಒಪ್ಪಿರುವ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರೊಂದಿಗೆ ಅ.4 ಅಥವಾ 5ರಂದು ಸಭೆ ನಡೆಸಿ, ರಾಯಭಾರಿಯಾಗಿ ಬಳಸಿಕೊಳ್ಳುವ ಸಂಬಂಧ ರೂಪುರೇಷೆ ಸಿದ್ಧಪಡಿಸಲಾಗುವುದು.

– ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next