ಮೈಸೂರು: ಮೈಸೂರು ದಸರಾ ಉತ್ಸವಕ್ಕೆ ಈ ಬಾರಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದಲ್ಲಿ 15 ಆನೆಗಳನ್ನು ಕರೆತರಲು ನಿರ್ಧರಿಸಿದ್ದು, ಈಗಾಗಲೇ 20 ಆನೆಗಳ ಪಟ್ಟಿ ಸಿದ್ಧಪಡಿಸಲಾಗಿದೆ.
ಈ ಬಾರಿ ಎರಡು ತಿಂಗಳು ಮುಂಚೆಯೇ ಗಜಪಡೆಯನ್ನು ಮೈಸೂರಿಗೆ ಕರೆತಂದು ಎಲ್ಲಾ ಹಂತದ ತಾಲೀಮು ನಡೆಸಲು ಮೈಸೂರು, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿರುವ ಆನೆ ಶಿಬಿರಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಪ್ರಮುಖ ಆನೆಗಳ ಶಿಬಿರಗಳಾದ ಮತ್ತಿಗೋಡು, ಆನೆಕಾಡು, ದುಬಾರೆ, ದೊಡ್ಡಹರವೆ, ಬಳ್ಳೆ ಹಾಗೂ ಬಂಡೀಪುರ ಅರಣ್ಯದಲ್ಲಿನ ರಾಮಾಪುರ ಆನೆ ಶಿಬಿರಗಳಿಗೆ ಭೇಟಿ ನೀಡಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ 30 ಆನೆಗಳ ಆರೋಗ್ಯ ಸ್ಥಿತಿಗತಿ, ಅವುಗಳ ನಡವಳಿಕೆ ಬಗ್ಗೆ ಪರಿಶೀಲಿಸಿದ್ದಾರೆ.
ಈ 30 ಆನೆಗಳ ಪೈಕಿ 20 ಆನೆಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಇಂದು ಸರ್ಕಾರಕ್ಕೆ ಪಟ್ಟಿಯನ್ನು ಕಳಿಸಿಕೊಡಲಿದ್ದಾರೆ.
ನಾಳೆ (ಜು.19) ಬೆಂಗಳೂರಿನಲ್ಲಿ ಸಿಎಂ ನೇತೃತ್ವದಲ್ಲಿ ನಡೆಯಲಿರುವ ದಸರಾ ಉನ್ನತ ಸಮಿತಿ ಸಭೆಯಲ್ಲಿ ವನ್ಯಜೀವಿ ವಿಭಾಗದ ಪಿಸಿಸಿಎಫ್ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ 15 ಆನೆಗಳನ್ನು ಅಂತಿಮಗೊಳಿಸಲಿದ್ದಾರೆ.