Advertisement

ನಾಡ ಹಬ್ಬ: ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ

10:40 AM Oct 26, 2020 | Nagendra Trasi |

ಮೈಸೂರು: ನಾಡ ಹಬ್ಬ ಮೈಸೂರು ದಸರಾದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಕ್ಕೂ ಇತಿಹಾಸವಿದೆ. ಹಾಗೆಯೇ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತೂಯ್ಯುವ ಗಜ ಪಡೆಗೂ ಒಂದು ಇತಿಹಾಸವಿದೆ. ಅಂಬಾರಿ ಹೊರುವ ಆನೆಗಳ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ ಇಲ್ಲಿದೆ.

Advertisement

ಅಂಬಾರಿಯನ್ನು ಮೊದಲ ಬಾರಿಗೆ ಹೊತ್ತ ಆನೆಯ ಹೆಸರು ಜಯಮಾರ್ತಾಂಡ. ಇದು ಕೃಷ್ಣದೇವರಾಯ ಒಡೆಯರ್‌ ಕಾಲದಲ್ಲಿ ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಸೆರೆಸಿಕ್ಕ ಗಜ ಇದು. ಈ ಆನೆ , ಕೃಷ್ಣದೇವರಾಯ ಒಡೆಯರ್‌ ಕಾಲದಿಂದ ಪ್ರಾರಂಭವಾದ ವಿಜಯದಶಮಿಯಿಂದ ಸುಮಾರು 45 ವರ್ಷಗಳ ಕಾಲ ಚಿನ್ನದ ಅಂಬಾರಿಯನ್ನು ಹೊತ್ತು ಒಡೆಯರ ಪ್ರೀತಿಗೆ ಕಾರಣವಾಗಿತ್ತು. ಇದರ ಸವಿನೆನಪಿಗಾಗಿಯೇ ಅರಮನೆಯ ಮಹದ್ವಾರ ಒಂದಕ್ಕೆ ಜಯಮಾರ್ತಾಂಡ ಎಂದು ಹೆಸರಿಡಲಾಗಿದೆ.

ಈ ಆನೆಯ ನಂತರ ವಿಜಯಬಹದ್ದೂರ್‌, ನಂಜುಂಡ, ರಾಮಪ್ರಸಾದ್‌, ಮೋತಿಲಾಲ್‌, ಸುಂದರ್‌ ರಾಜ್‌, ಐರಾವತ ಎನ್ನುವ ಹೆಸರಿನ ಆನೆಗಳು ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದವು. ಇವುಗಳಲ್ಲಿ ಐರಾವತ ಆನೆ ಬಹು ಬೇಡಿಕೆಯ ಆನೆಯಾಗಿ ಗಮನ ಸೆಳೆಯುತ್ತದೆ.

ಇದನ್ನೂ ಓದಿ:401ನೇ ಜಂಬೂ ಸವಾರಿ; ಅಭಿಮನ್ಯುಗೆ ಚೊಚ್ಚಲ ಅಂಬಾರಿ

ಯಾಕೆಂದರೆ ಈ ಆನೆ ಕೇವಲ ಜಂಬೂ ಸವಾರಿಯಲ್ಲಿ ಮಾತ್ರವಲ್ಲ 1937ರಲ್ಲಿ ಸಾಕ್ಷ್ಯಚಿತ್ರಗಳ ನಿರ್ದೇಶಕ ರಾಬರ್ಟ್‌ ಜೆ ಫ್ಲೆಹೆರ್ಥಿ ನಿರ್ದೇಶಿಸಿದ ದಿ ಎಲಿಫೆಂಟ್‌ ಬಾಯ್‌ ಸಿನಿಮಾಕ್ಕೂ ಬಳಸಿಕೊಳ್ಳಲಾಯಿತು. ಚಿತ್ರಕ್ಕೆ ಆನೆ ಕಾವಾಡಿಗ ಏಳು ವರ್ಷದ ಹುಡುಗ ಮೈಸೂರು ಸಾಬು ಅವರನ್ನು ನಾಯಕನನ್ನಾಗಿ ತೆರೆಗೆ ತರಲಾಯಿತು. ಇದು ವಿಶ್ವದಾದ್ಯಂತ ಪ್ರದರ್ಶನಗೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು ಇತಿಹಾಸ. ಇದಾದ ನಂತರ ಗಜೇಂದ್ರ ಹಾಗೂ ಬಿಳಿಗಿರಿ ಜಂಬೂ ಸವಾರಿಯಲ್ಲಿ ಅಂಬಾರಿ ಯನ್ನು ಹೊತ್ತು ಸಾಗಿದವು. ರಾಜೇಂದ್ರ, ಈ ಆನೆಯನ್ನು ಮೈಸೂರು ದಸರಾಕ್ಕೆ ಹೋಗದಿದ್ದರೂ ನೀವೆಲ್ಲರೂ ನೋಡಿದ್ದೀರಿ.

Advertisement

ಕಾರಣ 1973ರಲ್ಲಿ ತೆರೆ ಕಂಡ ವಿಜಯ್‌ ನಿರ್ದೇಶನದ ಗಂಧದ ಗುಡಿ ಚಿತ್ರದಲ್ಲಿ ಡಾ.ರಾಜ್‌ಕುಮಾರ್‌ ಅವರು ಈ ಆನೆಯ ಮೇಲೆ ಕುಳಿತು ನಾವಾಡುವ ನುಡಿಯೇ ಕನ್ನಡ ನುಡಿ ಎನ್ನುವ ಹಾಡನ್ನು ಹಾಡಿದ್ದು. ಚಿತ್ರದುದ್ದಕ್ಕೂ ಇದು ಭಾಗವಹಿಸಿದೆ. ಡಾ. ರಾಜ್‌ ಕುಮಾರ್‌ ಅವರಿಗೆ ಅಚ್ಚುಮೆಚ್ಚಿನ ಆನೆ ಇದಾಗಿತ್ತು.

ಗಜೇಂದ್ರ ಮತ್ತು ಬಿಳಿಗಿರಿ ನಂತರ ಅಂಬಾರಿ ಹೊರುವ ಜವಾಬ್ದಾರಿ ದ್ರೋಣ ಹೆಸರಿನ ಆನೆಗೆ ಒಲಿಯಿತು. ಇದು 18 ವರ್ಷಗಳ ಕಾಲ ಅಂಬಾರಿ ಹೊತ್ತು ಗಮನ ಸೆಳೆಯಿತು. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ದಿ ಸೋರ್ಡ್‌ ಆಫ್ ಟಿಪ್ಪು ಸುಲ್ತಾನ್‌ ಎನ್ನುವ ಜನಪ್ರಿಯ ಧಾರಾವಾಹಿಯಲ್ಲಿ ಟಿಪ್ಪು ಪಾತ್ರಧಾರಿಯನ್ನು ಹೊತ್ತೂಯ್ದದ್ದು ಇದೇ ಆನೆ. ಇದು ಸುಮಾರು 10.25 ಅಡಿ ಎತ್ತರ, 6,400 ಕೆ.ಜಿ ತೂಕವಿತ್ತು.

1998ರಲ್ಲಿ ವಿದ್ಯುತ್‌ ತಂತಿ ತಗುಲಿ ದುರಂತ ಸಾವು ಕಂಡಿತು. ಆನಂತರ ಅರ್ಜುನ ಒಂದು ಬಾರಿ ಮಾತ್ರ ಅಂಬಾರಿಯನ್ನು ಹೊತ್ತ. ಅತಿ ಕೋಪಿಷ್ಟ ಅರ್ಜುನ ಮಾವುತನನ್ನೇ ಕೊಂದು ಅಂಬಾರಿ ಹೊರುವ ಅವಕಾಶದಿಂದ ವಂಚಿತನಾದ. ಬಳಿಕ ಶಾಂತ ಸ್ವಭಾವದ ಬಲರಾಮನಿಗೆ ಅಂಬಾರಿ ಹೊರಿಸಲಾಯಿತು. 1987ರಲ್ಲಿ ಕಟ್ಟೆಪುರದಲ್ಲಿ ಬಲರಾಮನನ್ನು ಸೆರೆ ಹಿಡಿಯಲಾಯಿತು.

ಇದನ್ನೂ ಓದಿ:ಜಂಬೂ ಸವಾರಿಗೆ ಸಿದ್ದವಾಗುತ್ತಿದೆ ಅಭಿಮನ್ಯು ನೇತೃತ್ವದ ಗಜಪಡೆ: ಇಲ್ಲಿದೆ ಆಕರ್ಷಕ ಚಿತ್ರಗಳು

ಇದರ ಜತೆಗೆ ಇನ್ನೂ ನಾಲ್ಕು ಆನೆಗಳನ್ನು ಸೆರೆ ಹಿಡಿಯಲಾಗಿತ್ತು. ಹನ್ನೊಂದು ವರ್ಷದ ಬಲರಾಮನಿಗೆ ನಿವೃತ್ತಿ ನೀಡಲಾಯಿತು. ನಂತರ ಮತ್ತೆ ಅರ್ಜುನ ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಯಿತು. ಸದ್ಯಕ್ಕೆ 60 ವರ್ಷವಾಗಿರುವ ಅರ್ಜುನ 2012ರಿಂದ 2019ರವರೆಗೆ ಯಶಸ್ವಿಯಾಗಿ ಅಂಬಾರಿ ಹೊತ್ತು ನಿವೃತ್ತಿ ಪಡೆದಿದ್ದಾನೆ.

ಅಭಿಮನ್ಯು ಹೆಗಲಿಗೆ ಅಂಬಾರಿ
ಅರ್ಜುನ ಆನೆಯ ನಿವೃತ್ತಿ ನಂತರ ಈ ಬಾರಿ ಇದೇ ಮೊದಲ ಬಾರಿಗೆ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಲ್ಲಿ ಸ್ಪೆಷಲಿಸ್ಟ್‌ ಎಂದೆ ಕರೆಸಿಕೊಳ್ಳುವ 45 ವರ್ಷದ ಅಭಿಮನ್ಯು ಆನೆಗೆ ಅಂಬಾರಿ ಹೊರುವ ಜವಾಬ್ದಾರಿ ನೀಡಲಾಗಿದೆ. ಈವರೆಗೆ ಎಲ್ಲಾ ರೀತಿಯ ತಾಲೀಮಿನಲ್ಲೂ ಯಶಸ್ವಿಯಾಗಿ ಭರವಸೆ ಮೂಡಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next