Advertisement

Mysuru Dasara: ಅರಮನೆಗೆ ಬಂದಿಳಿದ ಗಜಪಡೆಯ 2ನೇ ತಂಡ

04:28 PM Sep 26, 2023 | Team Udayavani |

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಗಜಪಡೆಯ 2ನೇ ತಂಡ ಸೋಮವಾರ ಸಂಜೆ ಅರಮನೆಗೆ ಆಗಮಿಸಿದವು. ಈ ಹಿಂದೆ ಅಂಬಾರಿ ಆನೆ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದಲ್ಲಿ 09 ಆನೆಗಳನ್ನು ಸೆ.1ರಂದು ಕರೆತರಲಾಗಿತ್ತು. ಸೆ.25ರ ಸೋಮವಾರ ಸಂಜೆ ವಿವಿಧ ಆನೆ ಶಿಬಿರಗಳಿಂದ ಸುಗ್ರೀವ, ಪ್ರಶಾಂತ, ಲಕ್ಷ್ಮೀ, ರೋಹಿತ್‌ ಮತ್ತು ಹಿರಣ್ಯಾ ಆನೆಗಳ 2ನೇ ತಂಡ ಟ್ರಕ್‌ಗಳ ಮೂಲಕ ನೇರವಾಗಿ ಅರಮನೆಗೆ ಬಂದಿಳಿದವು.

Advertisement

3 ಹೊಸ ಆನೆ: ಸೋಮವಾರ ಅರಮನೆಗೆ ಬಂದಿಳಿದ 05 ಆನೆಗಳಲ್ಲಿ 03 ಹೊಸ ಆನೆಗಳಿರುವುದು ವಿಶೇಷ. ರಾಂಪುರ ಆನೆ ಶಿಬಿ ರದ ಹಿರಣ್ಯಾ, ರೋಹಿತ್‌, ದೊಡ್ಡಹರವೆ ಶಿಬಿರದ ಲಕ್ಷ್ಮೀ ಆನೆಇದೇ ಮೊದಲ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿವೆ. ಉಳಿದಂತೆ ದುಬಾರೆ ಶಿಬಿರದ ಪ್ರಶಾಂತ ಮತ್ತು ಸುಗ್ರೀವ ಆನೆ ಈ ಹಿಂದಿನ ದಸರಾ ಉತ್ಸವದಲ್ಲಿ ಪಾಲ್ಗೊಂಡಿವೆ. ವಿಶೇಷ ಪೂಜೆ: 2ನೇ ತಂಡದಲ್ಲಿ ಬಂದ 5 ಆನೆಗಳಿಗೆ ಅರಮನೆ ಆವರಣದ ಕೋಡಿ ಸೋಮೇಶ್ವರನಾಥ ದೇವಾಲಯ ಬಳಿ ಪಾದ ತೊಳೆದು, ಅರಿಶಿಣ-ಕುಂಕುಮ ಹಚ್ಚಿ ಸೇವಂತಿಗೆ ಹೂ ಧರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಎಲ್ಲಾ ಆನೆಗಳಿಗೂ ಕಬ್ಬು-ಬೆಲ್ಲ ನೀಡಲಾಯಿತು. ಡಿಸಿಎಫ್ ಸೌರಭ್‌ ಕುಮಾರ್‌, ಅರಮನೆ ಮಂಡಳಿ ನಿರ್ದೇಶಕ ಸುಬ್ರಹ್ಮಣ್ಯ, ಎಸಿಪಿ ಚಂದ್ರಶೇಖರ್‌, ಇನ್ಸ್‌ಪೆಕ್ಟರ್‌ ಆನಂದ್‌ ಇದ್ದರು.

2ನೇ ತಂಡದ ಆನೆಗಳಿಗೆ ಎರಡು ದಿನ ವಿಶ್ರಾಂತಿ:

ಮೈಸೂರು: ಅಂಬಾರಿ ಆನೆ ಅಭಿಮನ್ಯುವಿಗೆ 750 ಕೆ.ಜಿ. ಭಾರ ಹಾಕಿ ಅರಮನೆಯಿಂದ ಬನ್ನಿಮಂಟಪದವರೆಗೆ ತಾಲೀಮು ನಡೆಸಲಾಗಿದೆ ಎಂದು ಡಿಸಿಎಫ್ ಸೌರಭ್‌ಕುಮಾರ್‌ ತಿಳಿಸಿದರು.

ಗಜಪಡೆಯ 2ನೇ ತಂಡವನ್ನು ಸ್ವಾಗತಿಸಿ ಮಾತನಾಡಿದ ಅವರು, 2ನೇ ತಂಡದಲ್ಲಿ 5 ಆನೆ ಮೈಸೂರಿಗೆ ಬಂದಿದ್ದು, ಈಗ 14 ಆನೆಗಳಿವೆ. ಅಭಿಮನ್ಯು, ಮಹೇಂದ್ರ, ಧನಂಜಯ, ಭೀಮ ಮತ್ತು ಕಂಜನ್‌ ಆನೆಗೆ 550 ಕೆ.ಜಿ. ಭಾರ ಹಾಕಿ ತಾಲೀಮು ನಡೆಸಿದ್ದು, ಎಲ್ಲಾ ಆನೆ ತಾಲೀಮನ್ನು ಯಶಸ್ವಿಗೊಳಿಸಿವೆ. ಸೋಮವಾರ ಅಭಿಮನ್ಯುವಿಗೆ 750 ಕೆ.ಜಿ. ಭಾರ ಹೊರಿಸಿ ತಾಲೀಮು ನಡೆಸಿದ್ದು, ನಿರಾಯಾಸವಾಗಿ ಬನ್ನಿಮಂಟಪಕ್ಕೆ ತೆರಳಿದ್ದಾನೆ. ಮಂಗಳವಾರ ಮಹೇಂದ್ರ, ಧನಂಜಯ ಆನೆಗಳಿಗೂ ಈ ತಾಲೀಮು ನಡೆಸುವ ಮೂಲಕ 2ನೇ ಹಂತದ ಅಂಬಾರಿ ಆನೆಗಳಾಗಿ ಸಜ್ಜುಗೊಳಿಸಲಾಗುತ್ತಿದೆ ಎಂದರು.

Advertisement

2ನೇ ತಂಡದ ಆನೆಗೆ 2 ದಿನ ವಿಶ್ರಾಂತಿ ನೀಡಿ ಬಳಿಕ ತಾಲೀಮಿನಲ್ಲಿ ಸೇರಿಸಿಕೊಳ್ಳಲಾಗುತ್ತದೆ. ಹೊಸ ಆನೆ ಕಂಜನ್‌ ಕೂಡ ನಗರ ವಾತಾವರಣಕ್ಕೆ ಒಗ್ಗಿಕೊಂಡಿದೆ ಎಂದರು. ಮಾವುತ-ಕಾವಡಿಗಳ ಕುಟುಂಬ ಉಳಿದುಕೊಳ್ಳಲು ಟೆಂಟ್‌ ನಿರ್ಮಿಸಲಾಗಿದೆ. ಜತೆಗೆ ಅವರ ಮಕ್ಕಳ ಕಲಿಕೆಗೆ ಟೆಂಟ್‌ ಶಾಲೆ ಆರಂಭಿಸಲಾಗುತ್ತಿದ್ದು, ಶೀಘ್ರ ಸಚಿವರಿಂದ ಚಾಲನೆ ಕೊಡಿಸಲಾಗುವುದೆಂದರು.

 

Advertisement

Udayavani is now on Telegram. Click here to join our channel and stay updated with the latest news.

Next