ಮಂಡ್ಯ: ಮೈಸೂರು ಸಕ್ಕರೆ ಕಾರ್ಖಾನೆ ಖಾಸಗೀಕರಣಗೊಳಿಸುವ ವಿಚಾರದಲ್ಲಿ ರಾಜ್ಯಸರ್ಕಾರ ಜೆಡಿಎಸ್ ಶಾಸಕರನ್ನು ಕತ್ತಲಲ್ಲಿಟ್ಟು ತೀರ್ಮಾನ ಕೈಗೊಂಡಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಪುಟ್ಟರಾಜು ಆರೋಪಿಸಿದರು. ಜೆಡಿಎಸ್ ಶಾಸಕರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿ, ಮೈಷುಗರ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸುವ ಬಗ್ಗೆ ಸರ್ಕಾರ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ನಮ್ಮೊಂದಿಗೆ ಯಾವುದೇ ಸಭೆಯನ್ನೂ ನಡೆಸದೆ, ಅಭಿಪ್ರಾಯವನ್ನೂ ಸಂಗ್ರಹಿಸ ದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ದೂರಿದರು.
ಸರಿಯಲ್ಲ: ಕಂಪನಿಯ ಷೇರುದಾರರನ್ನು ಸಂಪೂರ್ಣವಾಗಿ ಕಡೆಗ ಣಿಸಿ, ಸರ್ವಸದಸ್ಯರ ಸಭೆಯನ್ನೇ ನಡೆಸದೆ ಕಂಪನಿಯನ್ನು ಖಾಸ ಗೀಕರಣಗೊಳಿಸುವ ಬಗ್ಗೆ ಒಲವು ತೋರಿದೆ. ಇದು ಸರಿಯಾದ ಕ್ರಮವಲ್ಲ. ನಾವು ಶಾಸಕರು ಈ ವಿಚಾರದ ಬಗ್ಗೆ ಸಮಾಲೋಚನೆ ನಡೆಸುತ್ತೇವೆ. ಬಳಿಕ ರೈತ ಮುಖಂಡರು ಹಾಗೂ ಕಬ್ಬು ಬೆಳೆಗಾರರೊಂ ದಿಗೆ ಚರ್ಚಿಸಿ ಅವರ ಅಭಿಪ್ರಾಯವನ್ನೂ ಕ್ರೋಢೀಕರಿಸಿ ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದರು.
ಹೊಸ ಕಾರ್ಖಾನೆ: ಕಳೆದ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಅನುಕೂಲವಾಗುವಂತೆ ಹೊಸ ಕಾರ್ಖಾನೆ ಸ್ಥಾಪಿಸುವ ಮಹತ್ವಾಕಾಂಕ್ಷೆ ಹೊಂದಿದ್ದರು. ಅದಕ್ಕಾಗಿ ಪ್ರಥಮ ಹಂತದಲ್ಲಿ 100 ಕೋಟಿ ರೂ. ಹಣವನ್ನೂ ಮೀಸಲಿಟ್ಟಿದ್ದರು. ಆ ಯೋಜನೆಯನ್ನು ಕಾರ್ಯಗತಗೊಳಿಸುವ ಬಗ್ಗೆ ಸರ್ಕಾರದ ಗಮನಸೆಳೆಯಲಾಗುವುದು ಎಂದರು.
ಸರ್ವ ಸದಸ್ಯರ ಸಭೆ: ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಮಾತ ನಾಡಿ, ರಾಜ್ಯ ಸರ್ಕಾರ ಆನ್‌ಲೈನ್‌ನಲ್ಲಿ ಸರ್ವಸದಸ್ಯರ ಸಭೆ ಕರೆದು ಚರ್ಚಿಸಲು ನಿರ್ಧರಿಸಿದೆ. ಈ ಪ್ರಕ್ರಿಯೆಯಲ್ಲಿ ಎಷ್ಟು ಮಂದಿ ಕಬ್ಬು ಬೆಳೆಗಾರರು ಪಾಲ್ಗೊಳ್ಳಲು ಸಾಧ್ಯ. ಕಂಪನಿಯ ವಿಚಾರವಾಗಿ ಏನೇ ತೀರ್ಮಾನಗಳನ್ನು ಕೈಗೊಂಡರೂ ಕಾರ್ಖಾನೆಯ ಆವರಣದಲ್ಲಿ ಸದಸ್ಯರ ಸಭೆ ಕರೆದು ಚರ್ಚಿಸಿ ಎಲ್ಲರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಶಾಸಕರಾದ ತಮ್ಮಣ್ಣ, ಶ್ರೀನಿವಾಸ್, ಡಾ.ಅನ್ನದಾನಿ, ಸುರೇಶ್‌ಗೌಡ, ರವೀಂದ್ರ ಶ್ರೀಕಂಠಯ್ಯ, ಶ್ರೀಕಂಠೇಗೌಡ, ಅಪ್ಪಾಜಿಗೌಡ ಮತ್ತಿತರರಿದ್ದರು.
ಎರಡು ಕಾರ್ಖಾನೆಗಳ ಕಾರ್ಯಾರಂಭ ಅನುಮಾನ: ಪ್ರಸಕ್ತ ಸಾಲಿನಲ್ಲಿ ಮೈಷುಗರ್, ಪಿಎಸ್ ಎಸ್‌ಕೆ ಸಕ್ಕರೆ ಕಾರ್ಖಾನೆಗಳು ಕಾರ್ಯಾರಂ ಭಿಸುವುದು ಅನುಮಾನ. ಈಗಾಗಲೇ ಕಬ್ಬು ಕಟಾವಿಗೆ ಬಂದಿದೆ. ಕಬ್ಬು ಅರೆಯುವಿಕೆಗೆ ಇದುವರೆಗೂ ರಾಜ್ಯಸರ್ಕಾರ ಕಾರ್ಖಾನೆಗಳನ್ನು ಸಜ್ಜುಗೊಳಿಸಿಲ್ಲ. ಒಂದೆರಡು ತಿಂಗಳಲ್ಲಿ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವುದಕ್ಕೆ ವ್ಯವಸ್ಥೆ ಮಾಡಲೂ ಸಾಧ್ಯವಿಲ್ಲ.
ಹಾಗಾಗಿ ಎರಡೂ ಕಾರ್ಖಾನೆಗಳು ಈ ಸಾಲಿನಲ್ಲಿ ಕಬ್ಬು ಅರೆಯುವುದು ಅನುಮಾನ. ಕಬ್ಬು ಸಾಗಿಸಲು ಮಧ್ಯವರ್ತಿಗಳ ಹಾವಳಿ ತಡೆಯುವ ಅಗತ್ಯವಿದೆ. ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನೋಡಲ್ ಅಧಿಕಾರಿಗಳನ್ನು ತಾಲೂಕು, ಹೋಬಳಿ, ಪಂಚಾಯಿತಿ ಮಟ್ಟದಲ್ಲಿ ನೇಮಿಸಿ ಅವರ ಮೂಲಕ ಕಬ್ಬು ಸಾಗಣೆಗೆ ವ್ಯವಸ್ಥೆ ಮಾಡಬೇಕು ಎಂದು ಪುಟ್ಟರಾಜು ಹೇಳಿದರು.