Advertisement

ಮೈಶುಗರ್: ನಿರ್ವಹಣೆ ಮಾತ್ರ ಖಾಸಗಿಯವರಿಗೆ?

07:12 AM Jul 11, 2020 | Lakshmi GovindaRaj |

ಬೆಂಗಳೂರು: ಮಂಡ್ಯದ ಮೈಶುಗರ್‌ ಕಾರ್ಖಾನೆಯನ್ನು ಮಾರಲೂ ಆಗದೇ ಇಟ್ಟುಕೊಳ್ಳಲೂ ಆಗದೆ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರ, ಕಾರ್ಖಾನೆ ಪುನಶ್ಚೇತನಕ್ಕೆ ಪರ್ಯಾಯ ಮಾರ್ಗ ಹುಡುಕುತ್ತಿದೆ. ಖಾಸಗಿಯವರಿಗೆ ಲೀಸ್‌ ನೀಡುವ ಬದಲು ನಿರ್ವಹಣೆಗೆ ಮಾತ್ರ ನೀಡಿ, ಉಳಿದ ವ್ಯವಹಾರಗಳನ್ನು ತನ್ನ ವ್ಯಾಪ್ತಿಯಲ್ಲಿಯೇ ಉಳಿಸಿಕೊಳ್ಳಲು ಚಿಂತನೆ ನಡೆಸಿದೆ.

Advertisement

ಈ ಕುರಿತು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯ ಸಂಪುಟ ಉಪ ಸಮಿತಿ ಒಂದು ಸುತ್ತಿನ ಮಾತುಕತೆ  ನಡೆಸಿದ್ದು, ಮೈಶುಗರ್‌ ಕಾರ್ಖಾನೆ ನಿರ್ವಹಣೆಗೆ ವಾರ್ಷಿಕ ತಗಲುವ ವೆಚ್ಚ, ಕಾರ್ಮಿಕರ ಸಂಬಳ, ಕಬ್ಬು ಬೆಳೆಯುವ ಪ್ರದೇಶ, ಕಬ್ಬಿನ ಉತ್ಪಾದನೆ ಪ್ರಮಾಣ ಎಲ್ಲ ಮಾಹಿತಿ ಸಂಗ್ರಹಿಸಿ ಉಪ ಸಮಿತಿಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ  ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಸರ್ಕಾರದ ಹಿಡಿತ: ಮೈಶುಗರ್‌ ಕಾರ್ಖಾನೆಯೊಂ ದಿಗೆ ಹಳೇ ಮೈಸೂರು ಭಾಗದ ರೈತರು ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಅದೇ ಕಾರಣಕ್ಕೆ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಅಥವಾ ಗುತ್ತಿಗೆ  ನೀಡುವುದಕ್ಕೂ ಸ್ಥಳೀಯವಾಗಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ. ಆದರೆ, ಈ ಕಾರ್ಖಾನೆ ನಿರ್ವಹಣೆಗೆ ಸರ್ಕಾರ ಪ್ರತಿ ವರ್ಷ ಹಣ ನೀಡಿದರೂ ಕಾರ್ಖಾನೆ ನಷ್ಟದ ಹಾದಿಯಿಂದ ಹೊರ ಬರಲು ಸಾಧ್ಯವಾಗಿಲ್ಲ.

ಹೀಗಾಗಿ  ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಖಾನೆ  ಯನ್ನು ಸರ್ಕಾರದ ವ್ಯಾಪ್ತಿಯಲ್ಲಿಯೇ ಉಳಿಸಿಕೊಂಡು ಉತ್ತಮ ನಿರ್ವಹಣೆ ಮಾಡಿ, ರೈತರಿಗೆ ಅನುಕೂಲವಾಗುವ ರೀತಿ ಯೋಜನೆ ರೂಪಿಸುವಂತೆ ಸಂಪುಟ ಉಪ ಸಮಿತಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಅದಕ್ಕಾಗಿ ಕಬ್ಬು ಬೆಳೆಯುವ ಲಾಭ ನಷ್ಟದ ಅನುಭವ ಇರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನೂ ಸಮಿತಿ ಸದಸ್ಯರನ್ನಾಗಿ ಮಾಡಿ, ಸೂಕ್ತ ಯೋಜನೆ ರೂಪಿಸುವಂತೆ ನಿರ್ದೇಶನ  ನೀಡಿದ್ದಾರೆಂದು ತಿಳಿದು ಬಂದಿದೆ.

ನಿರ್ವಹಣೆಗೆ ಮಾತ್ರ ಖಾಗಿಯವರಿಗೆ: ಡಿಸಿಎಂ ಗೋವಿಂದ ಕಾರಜೋಳ ನೇತೃತ್ವದ ಸಂಪುಟ ಉಪ ಸಮಿತಿ ಮೊದಲ ಸಭೆಯಲ್ಲಿ ಖಾಸಗಿಯವರಿಗೆ ನಿರ್ವಹಣೆಗೆ ಮಾತ್ರ ನೀಡುವ ಕುರಿತು ಚರ್ಚೆ ನಡೆಸಿ, ಅದಕ್ಕೆ ಅಗತ್ಯವಾದ ಮಾಹಿತಿ  ಸಂಗ್ರಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದು ಬಂದಿದೆ. ಸರ್ಕಾರದ ಯೋಜನೆ ಪ್ರಕಾರ ಖಾಸಗಿ ಸಂಸ್ಥೆಯವರಿಗೆ ಸರ್ಕಾರವೇ ವಾರ್ಷಿಕ ನಿರ್ದಿಷ್ಟ ಹಣ ನೀಡುವುದು.

Advertisement

ಆ ಹಣದಲ್ಲಿ ನಿರ್ವಹಣೆ ಜವಾಬ್ದಾರಿ ವಹಿಸಿಕೊಂಡ  ಖಾಸಗಿ ಸಂಸ್ಥೆ ಕಾರ್ಖಾನೆಯನ್ನು ಸುಸ್ಥಿತಿಯಲ್ಲಿಡುವುದು ಹಾಗೂ ಕಾರ್ಮಿಕರಿಗೆ ಸೂಕ್ತ ವೇತನ ನೀಡುವುದು, ಸರಿಯಾದ ಸಮಯಕ್ಕೆ ಕಬ್ಬು ನುರಿಸುವ ಜವಾಬ್ದಾರಿ ವಹಿಸುವುದು. ಉಳಿದಂತೆ ಸರ್ಕಾರವೇ ಸಕ್ಕರೆಯನ್ನು ಮಾರಾಟ  ಮಾಡಿ ಹಣ ಪಡೆದು  ಕೊಳ್ಳುವುದು. ರೈತರಿಗೆ ಕಬ್ಬಿನ ಬೆಲೆ ನೀಡುವುದು. ಆಗ ಸರ್ಕಾರಕ್ಕೆ ಪ್ರತಿವರ್ಷ ಬರುವ ಆದಾಯದ ಮೇಲೆ ಲಾಭ ನಷ್ಟದ ಲೆಕ್ಕ ತಿಳಿಯಲು ಸಾಧ್ಯವಾಗುತ್ತ ದೆ ಎನ್ನುವುದು ಲೆಕ್ಕಾಚಾರವಾಗಿದೆ.

ಟೆಂಡರ್‌: ಯಾವುದೇ ಖಾಸಗಿ ಸಂಸ್ಥೆಗೆ ನಿರ್ವಹಣೆಗೆ ಜವಾಬ್ದಾರಿ ವಹಿಸಲು ಟೆಂಡರ್‌ ಕರೆಯಲು ಸರ್ಕಾರ ತೀರ್ಮಾನಿಸಿದೆ. ಒಂದು ಸಂಸ್ಥೆಗೆ ಕನಿಷ್ಠ 5 ಅಥವಾ 10 ವರ್ಷ ನಿರ್ವಹಣೆ ಜವಾಬ್ದಾರಿ ನೀಡುವ ಬಗ್ಗೆ ಸಂಪುಟ ಉಪ ಸಮಿತಿಯಲ್ಲಿ ಚರ್ಚೆಯಾಗಿದೆ. ಆದರೆ, ಸ್ಪಷ್ಟ  ನಿರ್ಧಾರಕ್ಕೆ ಬಂದಿಲ್ಲ. ಕಾರ್ಖಾನೆಯ ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ನಂತರ ನಿರ್ವಹಣೆಗೆ ನೀಡುವ ಅವಧಿಯನ್ನು ನಿರ್ಧರಿಸಲು ಉಪ ಸಮಿತಿ ತೀರ್ಮಾನಿಸಿದೆ  ಎಂದು ತಿಳಿದು ಬಂದಿದೆ.‌

ಮೈಶುಗರ್‌ ಕಾರ್ಖಾನೆಗೆ ಸಂಬಂಧಿಸಿದಂತೆ ಸಂಪುಟ ಉಪ ಸಮಿತಿ ಮೊದಲ ಸಭೆ ನಡೆಸಿದ್ದೇವೆ. ಕಾರ್ಖಾನೆಯ ಒಟ್ಟು ನಿರ್ವಹಣಾ ವೆಚ್ಚದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳ ವರದಿ  ಬಂದ ನಂತರ ಚರ್ಚಿಸಿ ತೀರ್ಮಾನ ಮಾಡುತ್ತೇವೆ.
-ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿ

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next