ತೆಲಂಗಾಣ: ಇಲ್ಲಿನ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಸುಮಾರು 40 ಮಂಗಗಳು ಮತ್ತು ಅವುಗಳ ಮರಿಗಳ ಮೃತದೇಹ ಪತ್ತೆಯಾಗಿದೆ. ಒಮ್ಮೆಲೆ ಇಷ್ಟೊಂದು ಪ್ರಮಾಣದ ವಾನರಗಳು ಸಾವಿಗೀಡಾಗಿವುದು ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ವಿಷಪ್ರಾಶನವಾಗಿರುವ ಶಂಕೆ ವ್ಯಕ್ತವಾಗಿದೆ.
ಮಾತ್ರವಲ್ಲದೆ ಈ ಘಟನೆಯ ಹಿಂದೆ ತೆಲಂಗಾಣದ ಕೆಲವು ಪ್ರಾಣಿ ಸೆರೆಹಿಡಿಯುವವರ ಕೈವಾಡವಿದೆ ಎಂಬ ಅನುಮಾನವು ವ್ಯಕ್ತವಾಗಿದೆ.
ಮಂಗಗಳ ಮೃತ ದೇಹವು ಮೆಹಬೂಬಾಬಾದ್ ನಗರದ ಸನಿಗಪುರಂ ಗ್ರಾಮದ ವಿದ್ಯುತ್ ಸಬ್ ಸ್ಟೇಷನ್ ಬಳಿ ಇರುವ ಗುಡ್ಡವೊಂದರಲ್ಲಿ ಕಂಡುಬಂದಿದೆ. ಶವಗಳನ್ನು ಗೋಣಿ ಚೀಲದಲ್ಲಿ ಹಾಕಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸುತ್ತ ಮುತ್ತಲ ಪರಿಸರದಲ್ಲಿ ದುರ್ವಾಸನೆ ಬಂದ ಬಳಿಕ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ತಕ್ಷಣವೇ ಪೊಲೀಸ್ ಹಾಗೂ ಅರಣ್ಯ ಅಧೀಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ಘಟನೆ ನಡೆದು 6 ದಿನ ಕಳೆದಿದ್ದು, ಈಗ ಬೆಳಕಿಗೆ ಬಂದಿದೆ ಎಂದು ಮೆಹಬೂಬಾಬಾದ್ ಇನ್ಸ್ ಪೆಕ್ಟರ್ ಸಿ.ಹೆಚ್ ರಮೇಶ್ ಬಾಬು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಇದು ಕೇವಲ ದುರಂತ ಮಾತ್ರ ಅಲ್ಲ ಬದಲಾಗಿ ಇದೊಂದು ದುಷ್ಕೃತ್ಯ. ಈ ಘಟನೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ ಅನ್ವಯ ಸೆಕ್ಷನ್ 429 ,ಸೆಕ್ಷನ್ 11(1)ರ ಪ್ರಕಾರ ಕೇಸ್ ದಾಖಲಿಸಲಾಗುವುದು ಎಂದು ರಮೇಶ್ ಬಾಬು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರಾಣಿಗಳನ್ನು ಸೆರೆಹಿಡಿಯುವವರು ಕಾಡಿನಿಂದ ಪ್ರಾಣಿಗಳನ್ನು ಸಾಗಿಸುವಾಗ ಅವುಗಳನ್ನು ಶಾಂತಗೊಳಿಸಲು ಮಂಪರು ಔಷಧಿಗಳನ್ನು ನೀಡುತ್ತಾರೆ. ಈ ಔಷಧಿ ಪ್ರಾಮಾಣ ಹೆಚ್ಚಾದ ಕಾರಣದಿಂದ ಮಂಗಗಳು ಸಾವನಪ್ಪಿರುವ ಶಂಕೆ ಇದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.