ಟೆಕ್ಸಾಸ್: ಭಯಾನಕ ಚಂಡ ಮಾರುತ ಹಾಗೂ ಭಾರೀ ಮಳೆಯಿಂದ ತತ್ತರಿಸಿದ ಟೆಕ್ಸಾಸ್ ನಗರ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಆದರೆ ಸಮುದ್ರ ತೀರ ಪ್ರದೇಶ ನಾನಾ ಕಾರಣಗಳಿಂದ ಸುದ್ದಿಯಾಗುತ್ತಿದೆ.
ಅಂದಹಾಗೆ, ಮೊನ್ನೆ ಮೊನ್ನೆಯಷ್ಟೇ ನೈಋತ್ಯ ಟೆಕ್ಸಾಸ್‌ನ ಬೀಚ್‌ನಲ್ಲಿ ಭಾರಿ ಗಾತ್ರದ ಕೋರೆ ಹಲ್ಲುಗಳಿಂದ ಕೂಡಿದ ನಿಗೂಢ ಸಮುದ್ರ ಜೀವಿಯೊಂದರ ಮೃತದೇಹ ಪತ್ತೆಯಾಗಿದೆ. ಮೇಲ್ನೋಟಕ್ಕೆ ಫಾಂಗೂrಥ್ ಗಣಕ್ಕೆ ಸೇರಿದ ಭಾರೀ ಗಾತ್ರದ ಹಾವಿನ ಹೋಲಿಕೆ ಕಂಡುಬರುವ ಈ ಜೀವಿ ಪರಿಚಯ ಮಾಡುವುದೇ ಕಷ್ಟಸಾಧ್ಯವಾಗಿದೆ.
ಈ ನಿಗೂಢ ಜೀವಿ ಚಂಡಮಾರುತದ ವೇಳೆ ಆಘಾತಕ್ಕೊಳಗಾಗಿ ಅಥವಾ ಬಲವಾದ ಪೆಟ್ಟು ಬಿದ್ದು ಸಾವು ಸಂಭವಿಸಿರಬಹುದೆಂದು ಅಂದಾಜಿಸಲಾಗುತ್ತಿದೆ. ನ್ಯಾಶನಲ್ ಅಡು ಬಾನ್ ಸೊಸೈಟಿಯ ಸಾಮಾಜಿಕ ಜಾಲತಾಣ ಗಳ ವ್ಯವಸ್ಥಾಪಕಿ, ಅನಿವಾಸಿ ಭಾರತೀಯ ಮಹಿಳೆ ಪ್ರೀತಿ ದೇಸಾಯಿ ಈ ನಿಗೂಢ ಜೀವಿಯ ಚಿತ್ರವೊಂದನ್ನು ಟ್ವೀಟ್ ಮಾಡಿದ್ದು, “ಇದಾವ ಜೀವಿ ಇರಬಹುದು?’ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ.
ಗಾಲ್ವೆಸ್ಟಾನ್‌ನಿಂದ ಅಂದಾಜು 15 ಮೈಲು ದೂರದಲ್ಲಿ ಈ ಜೀವಿ ಬೀಚ್‌ನಲ್ಲಿ ಕಾಣಿಸಿ ಕೊಂಡಿದೆ ಎಂದು ಬರೆದುಕೊಂಡಿರುವ ದೇಸಾಯಿ, “ಈ ಜೀವಿ ಬಗ್ಗೆ ಮಾಹಿತಿ ಸಂಗ್ರಹಿಸಲಿಕ್ಕಾಗಿ ಸಾಕಷ್ಟು ವಿಜ್ಞಾನಿಗಳನ್ನು, ಅಧ್ಯಯನಕಾರರನ್ನು ಸಂಪರ್ಕಿಸಿದ್ದೇನೆ. ಬಳಿಕ ಒಬ್ಬರು ಜೀವಶಾಸ್ತ್ರಜ್ಞ ಕೆನ್ನೆಥ್ ಟಿಘೇ ಅವರನ್ನು ಸಂಪರ್ಕಿಸಲು ಹೇಳಿದರು. ಅವರಲ್ಲಿ ಕೇಳಿದಾಗ, ಇದು ಫಾಂಗೂrಥ್ ಹಾವಿನ ಜಾತಿಗೆ ಸೇರಿದ್ದಾಗಿರಬಹುದು. ಒಟ್ಟಾರೆ ಅಪ್ಲಾಟಾಫಿಸ್ ಚೌಲಿಯಾಡಸ್ ಮಾದರಿ ಹಾವಿನ ಗಣಕ್ಕೇ ಸೇರಿದ್ದೆಂದು ತಿಳಿಸಿದ್ದಾರೆ.