ಮೈಸೂರು: ವಿಶ್ವವಿಖ್ಯಾತ ಜಂಬೂ ಸವಾರಿಯ ಪ್ರಮುಖ ತಾರ ಆಕರ್ಷಣೆಯಾಗಿದ್ದ ಅಂಬಾರಿ ಆನೆ ಅರ್ಜುನ ಈ ಬಾರಿ ವಯಸ್ಸಿನ ಕಾರಣಕ್ಕೆ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿಲ್ಲ. ಬದಲಿಗೆ ಅರ್ಜುನನ ಸ್ಥಾನವನ್ನು ಅಭಿಮನ್ಯು ತುಂಬಲಿದ್ದಾನೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಎಂಟು ಬಾರಿ ಅಂಬಾರಿ ಹೊತ್ತ ಅರ್ಜುನ ಆನೆಗೆ 60 ವರ್ಷ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಅಭಿಮನ್ಯುವಿಗೆ ಅಂಬಾರಿ ಹೊರಿಸಲು ತೀರ್ಮಾನಿಸಲಾಗಿದೆ. ಅಭಿಮನ್ಯು ಸಾಕಷ್ಟು ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಪ್ರತಿವರ್ಷ ಭಾರ ಹೊರುವ ತಾಲೀಮು ನಡೆಸಿದ್ದಾನೆ. ಹೀಗಾಗಿ ಅಭಿಮನ್ಯುವಿಗೆ ಭಾರಹೊರುವುದು ದೊಡ್ಡ ಸವಾಲಾಗುವುದಿಲ್ಲ. ಜೊತೆಗೆಈಬಾರಿಯ ದಸರಾಕ್ಕೆ ಅರ್ಜುನನ್ನುಕರೆತರುತ್ತಿಲ್ಲ ಎಂದು ಹೇಳಿದರು.
ಅರ್ಜುನ ಅತ್ಯುತ್ತಮ ಆನೆ: ಅರ್ಜುನ 8 ವರ್ಷಗಳ ಕಾಲ ತನಗೆ ವಹಿಸಿದ ಅಂಬಾರಿ ಹೊರುವ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾನೆ. ಅರ್ಜುನ ಅತ್ಯುತ್ತಮ ಆನೆ. ಆದರೆ, ವಯಸ್ಸಿನ ಕಾರಣಕ್ಕೆ ಈ ಬಾರಿ ದಸರಾ ಉತ್ಸವಕ್ಕೆ ಕರೆ ತರಲು ಸಾಧ್ಯವಾಗುತ್ತಿಲ್ಲ. ಅರ್ಜುನನಿಗೆ ಒಂದು ಒಳ್ಳೆಯ ವಿದಾಯ ಸಿಗಲಿಲ್ಲ ಎಂಬ ಭಾವನೆ ಬೇಡ. ಅಂಬಾರಿ ಹೊತ್ತ ಆನೆಗಳಿಗೆ ವಿದಾಯ ನೀಡುವ ಸಂಪ್ರದಾಯ ಮೊದಲಿನಿಂದಲೂ ಇಲ್ಲ. ನಮಗೆ ದಸರಾ ಉತ್ಸವ ನಡೆಸಲು ಒಂದು ಆನೆ ಬೇಕಾಗಿದೆ ಅಷ್ಟೆ. ಅರ್ಜುನನ ಮೂಲಕವೇ ದಸರಾ ನಡೆಸಬೇಕೆಂದೇನು ಇಲ್ಲ. ಒಂದು ವೇಳೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರ್ಜುನನೇ ಈ ಬಾರಿಯೂ ಅಂಬಾರಿ ಹೊರಲಿ ಎಂದು ನಿರ್ದೇಶನ ನೀಡಿದರೆ ಈ ಬಾರಿಯೂ ಅರ್ಜುನನೇ ಅಂಬಾರಿ ಹೊರಲಿದ್ದಾನೆ ಎಂದು ತಿಳಿಸಿದರು.
ಪಟ್ಟಿ ಸಲ್ಲಿಕೆ: ತಾತ್ಕಾಲಿಕವಾಗಿ ಸಿದ್ಧಪಡಿಸಿರುವ ಪಟ್ಟಿಯಲ್ಲಿ ಅಭಿಮನ್ಯು ಅಂಬಾರಿ ಆನೆಯಾಗಿ ಸ್ಥಾನ ಪಡೆದಿದ್ದು, ಗೋಪಿ ಪಟ್ಟದ ಆನೆಯಾಗಿ, ವಿಕ್ರಮ ನಿಶಾನೆಯಾಗಿ, ವಿಜಯ ಮತ್ತು ಕಾವೇರಿ ಕುಮ್ಕಿ ಆನೆಗಳಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಈ ಪಟ್ಟಿಯನ್ನು ಈಗಾಗಲೇ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲಾಗಿದೆ. ಈ ಪಟ್ಟಿಗೆ ಅವರು ಒಪ್ಪಿಗೆ ಸೂಚಿಸಿದರೆ ಈ ಐದು ಆನೆಗಳೇ ಅಂತಿಮಗೊಳ್ಳಲಿವೆ ಎಂದು ಮಾಹಿತಿ ನೀಡಿದರು.
ತಾಲೀಮು: ಈ ಬಾರಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿರುವುದು ಹಾಗೂ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಐದು ಆನೆಗಳಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಪ್ರತಿ ವರ್ಷ 12 ರಿಂದ 15 ಆನೆಗಳು ದಸರಾ ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದವು. ತಾಲೀಮಿಗೆ ಸಾಕಷ್ಟು ಸಮಯ ಇದೆ. ಆಯ್ಕೆ ಮಾಡಿರುವ ಎಲ್ಲ ಆನೆಗಳು ಈ ಹಿಂದೆ ದಸರಾ ಉತ್ಸವದಲ್ಲಿ ಪಾಲ್ಗೊಂಡು ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ತಾಲೀಮಿನ ಕುರಿತು ಯಾವುದೇ ಸಂದೇಹ ಬೇಡ ಎಂದರು.
ಆನೆಗಳಿಗೂ ಕೋವಿಡ್ ತಪಾಸಣೆ?
ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಆನೆ ಮಾವುತರು, ಕಾವಾಡಿಗರು ಹಾಗೂ ಆನೆಗಳ ಆರೋಗ್ಯ ಕಾಪಾಡಲು ಹೆಚ್ಚಿನ ಒತ್ತು ನೀಡಲಾಗುವುದು. ಫ್ರಾನ್ಸ್ ಮೃಗಾಲಯದಲ್ಲಿ ಹುಲಿಗೆ ಕೋವಿಡ್ ಕಾಣಿಸಿಕೊಂಡ ಉದಾಹರಣೆ ಇದೆ.ಆದರೆ, ಇದುವರೆಗೆ ಪ್ರಪಂಚದ ಯಾವುದೇಭಾಗದಲ್ಲಿ ಆನೆಗಳಿಗೆ ಕೋವಿಡ್ ಕಾಣಿಸಿಕೊಂಡಿರುವ ಉದಾಹರಣೆ ಇಲ್ಲ.ಆದರೆ, ಈ ವಿಚಾರದಲ್ಲಿ ನಾವು ನಿರ್ಲಕ್ಷ್ಯ ವಹಿಸದೇ, ತಜ್ಞರ ವರದಿ ಪಡೆದು ಅಗತ್ಯಬಿದ್ದರೆ ಆನೆಗಳಿಗೂಕೊರೊನಾ ತಪಾಸಣೆ ನಡೆಸಲಾಗುವುದು ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಅಲೆಕ್ಸಾಂಡರ್ ತಿಳಿಸಿದರು.