Advertisement

ಟ್ವಿಟರ್‌ ಗುರುತಿಸಿದ 6 ಮಹಿಳೆಯರಲ್ಲಿ ಮೈಸೂರು ಯುವತಿಗೂ ಸ್ಥಾನ

02:45 PM Nov 20, 2021 | Team Udayavani |

ಮೈಸೂರು: ಅವತ್ತು ಇಡೀ ಜಗತ್ತಿನಲ್ಲಿ ವಿಮಾನ ಸಂಚಾರವೇ ಬಂದ್‌ ಆಯಿತು. ಭಾರತವೂ ಇದಕ್ಕೆ ಹೊರತಾಗಲಿಲ್ಲ. ಅಂದು ಅಮೆರಿಕಕ್ಕೆ ಹೊರಡಬೇಕಿದ್ದ ಅವರು ಆ ದೇಶಕ್ಕೆ ವಿಮಾನಯಾನವೇ ಬಂದ್‌ ಆಗಿದ್ದರಿಂದ ತಮ್ಮ ಊರಿನಲ್ಲೇ ಉಳಿದು ಬಿಟ್ಟರು. ಇದು ಅವರ ಪಾಲಿಗೆ ವರವಾಯಿತು. ಇವತ್ತು ಅವರು ಟ್ವಿಟರ್‌ ಇಂಡಿಯಾ ಗುರುತಿಸಿರುವ ಕೋವಿಡ್‌ ಸಂದರ್ಭದಲ್ಲಿ ನೆರವಾದ ದೇಶದ ಆರು ಮಂದಿ ಮಹಿಳೆಯರಲ್ಲಿ ಅವರೂ ಒಬ್ಬರು. ಅವರು ಮೈಸೂರಿನ ಇನ್ಫೋಸಿಸ್‌ ಸಂಸ್ಥೆಯ ಸಾಫ್ಟ್ವೇರ್‌ ಎಂಜಿನಿಯರ್‌ 34 ವರ್ಷದ ಫ‌ತಹಿನ್‌ ಮಿಸ್ಬಾ.

Advertisement

ಕೋವಿಡ್‌ ಸಂದರ್ಭದಲ್ಲಿ ಟ್ವಿಟರ್‌ ಸಾಮಾಜಿಕ ಜಾಲತಾಣವನ್ನು ಬಳಸಿ ಕೋವಿಡ್‌ ಸಂತ್ರಸ್ತರಿಗೆ ಹಾಗೂ ಅವರ ಬಂಧುಗಳಿಗೆ ನೆರವಾಗುತ್ತಿರುವ ಫ‌ತಹಿನ್‌ ಮಿಸ್ಬಾ ಇಂದು ತಮ್ಮ ಈ ಸಾಮಾಜಿಕ ಸೇವೆಗೆ ಕೋವಿಡ್‌ ಶಿರೋಸ್‌ ಎಂದು ಟ್ವಿಟರ್‌ ಇಂಡಿಯಾದಿಂದ ಗುರುತಿಸಲ್ಪಟ್ಟಿದ್ದಾರೆ.

ರಾಷ್ಟ್ರಮಟ್ಟದ ಈ ಮಾನ್ಯತೆ ಅವರಲ್ಲಿ ಸಂತಸ ಮೂಡಿಸಿದೆ. ಸಾಮಾಜಿಕ ಸೇವೆಯಲ್ಲಿ ಮತ್ತಷ್ಟು ತಮ್ಮನ್ನು ತೊಡಗಿಸಿಕೊಳ್ಳಲು ಅವರಿಗೆ ಪ್ರೇರಣೆ ನೀಡಿದೆ. ಕೋವಿಡ್‌ ಶಿರೋಸ್‌ ಅಭಿಯಾನ ಕಳೆದ ಆಗಸ್ಟ್ ನಲ್ಲಿ ಆರಂಭವಾಗಿತ್ತು. ಟ್ವಿಟರ್‌ ಬಳಸಿ ಕೋವಿಡ್‌ ಸಂತ್ರಸ್ತರಿಗೆ ನೆರವಾದ ಮಹಿಳೆಯರನ್ನು ಗುರುತಿಸುವಂತೆ ಟ್ವಿಟರ್‌ ದೇಶದ ಜನರಿಂದ ನಾಮಿನೇಶನ್‌ ಆಹ್ವಾನಿಸಿತ್ತು.

ಅದು ಮಾರ್ಚ್‌, 2020 ಸಮಯ. ಜಗತ್ತಿನಲ್ಲಿ ಕೊರೊನಾ ಮಹಾಮಾರಿಯ ಅಟ್ಟಹಾಸ. ಆಗ ಅಮೆರಿಕಕ್ಕೆ ಹೊರಡಬೇಕಿದ್ದ ಫ‌ತಹಿನ್‌ ಮಿಸ್ಬಾ ವಿಮಾನ ಸಂಚಾರಗಳೇ ಬಂದ್‌ ಆಗಿದ್ದರಿಂದ ಮೈಸೂರಿನ ತಮ್ಮ ಉದಯಗಿರಿಯ ಮನೆಯಲ್ಲೇ ಉಳಿದುಕೊಂಡರು. ಕೋವಿಡ್‌ ರೋಗಿಗಳಿಗೆ, ಅವರ ಬಂಧುಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ನೆರವಿನ ಹಸ್ತ ಚಾಚಿದರು.

ಕೋವಿಡ್‌ ಸಂತ್ರಸ್ತರಿಗೆ ನೆರವು

Advertisement

ಟ್ವಿಟರ್‌ ಜಾಲತಾಣ ಬಳಸಿ ಕೊರೊನಾ ರೋಗಿಗಳಿಗೆ ರಕ್ತ ಪೂರೈಕೆ, ಪ್ಲಾಸ್ನಾ ಲಭ್ಯವಾಗಲು ನೆರವಾಗುವುದು, ಕೋವಿಡ್‌ ರೋಗಿಗಳಿಗೆ ಯಾವ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿದೆ ಎಂಬ ಮಾಹಿತಿ ಒದಗಿಸುವುದು, ಆಸ್ಪತ್ರೆಗಳಿಗೆ ಕರೆ ಮಾಡಿ ಹಾಸಿಗೆಗಳ ಲಭ್ಯತೆಯ ಮಾಹಿತಿ ಪಡೆದು ರವಾನಿಸುವುದು, ಕೊರೊನಾ ರೋಗಿಗಳಿಗೆ ಔಷಧಿಗಳನ್ನು ತಲುಪಿ ಸುವುದು- ಹೀಗೆ ಅನೇಕ ಕಾರ್ಯಗಳನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಫ‌ತಹಿನ್‌ ಮಿಸ್ಬಾ ಕೈಗೊಂಡರು. ಈ ಮಧ್ಯೆ ಮೈಸೂರು ಮಹಾನಗರ ಪಾಲಿಕೆ ಯೊಂದಿಗೂ ಸೇರಿ ಕೋವಿಡ್‌ ಸಂತ್ರಸ್ತರಿಗೆ ನೆರವಾದರು.

ಇದನ್ನೂ ಓದಿ:ಭೀಮಾ ತೀರದಲ್ಲಿ ಮತ್ತೆ ಸುಪಾರಿ ಗ್ಯಾಂಗ್ ಹಾವಳಿ: ಬೀದರ್ ಯುವಕನ ಅಪಹರಿಸಿ, ಚಿತ್ರಹಿಂಸೆ

ರಾಷ್ಟ್ರ ಮಟ್ಟದ ಮಾನ್ಯತೆ

ಕೋವಿಡ್‌ ರೋಗಿಗಳು ಹಾಗೂ ಅವರ ಬಂಧುಗಳಿಗೆ ನೆರವಾಗಲು ಯಾವ ದಾರಿಯಲ್ಲಿ ಹೋಗ್ಬೇಕು ಅಂತ ಮೊದಲು ಗೊತ್ತಾಗಲಿಲ್ಲ. ಹೋಗ್ತಾ ಹೋಗ್ತಾ ಯಾವುದೋ ದಾರಿ ಹಿಡ್ಕೋಂಡು ಹೋದೆ. ಗಮ್ಯ ತಲುಪಿದೆ. ನನ್ನ ಸೇವೆಗೆ ರಾಷ್ಟ್ರಮಟ್ಟದಲ್ಲಿ ಇಂತಹ ಮಾನ್ಯತೆ ಸಿಗುತ್ತೆ ಅಂತ ತಿಳಿದಿರಲಿಲ್ಲ. ಅವತ್ತು ಅಮೆರಿಕಕ್ಕೆ ವಿಮಾನ ಸಂಚಾರ ಇದ್ದಿದ್ದರೆ ಕೋವಿಡ್‌ ಲಾಕ್‌ಡೌನ್‌ ವೇಳೆ ಸಾಮಾಜಿಕ ಸೇವೆ ಸಲ್ಲಿಸುವ ಅವಕಾಶ ಸಿಗುತ್ತಿರಲಿಲ್ಲ. ವಿಮಾನ ಸಂಚಾರ ರದ್ದಾಗಿದ್ದೇ ನನ್ನ ಪಾಲಿಗೆ ವರವಾಯಿತು ಎಂದು ಫ‌ತಹಿನ್‌ ಮಿಸ್ಬಾ ಶುಕ್ರವಾರ ಉದಯವಾಣಿಗೆ ತಿಳಿಸಿದರು.

ಸಾಮಾಜಿಕ ಜಾಲತಾಣವನ್ನು ಮಹಿಳಾ ಸಬಲೀಕರಣಕ್ಕಾಗಿ ಬಳಸಲು ಮುಂದಾಗಿದ್ದೇನೆ. ಸಾಮಾಜಿಕ ಸೇವೆ ನಿರಂತರವಾಗಿರುತ್ತದೆ ಎನ್ನುತ್ತಾರೆ ಫ‌ತಹಿನ್‌ ಮಿಸ್ಬಾ. ಫ‌ತಹಿನ್‌ ಮಿಸ್ಬಾ ಅವರ ತಂದೆ ಮೊಹಮ್ಮದ್‌ ಖಲೀಲ್‌ ಅವರು ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ತಾಯಿ ಜಬೀನ್‌ ಅವರು ಗೃಹಿಣಿ. ಫ‌ತಹಿನ್‌ ಮಿಸ್ಬಾ ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಈಗ ಮೈಸೂರಿನ ಇನ್ಫೋಸಿಸ್‌ನಲ್ಲಿ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದಾರೆ.

ಇನ್ಫೋಸಿಸ್‌ ಫೌಂಡೇಷನ್‌ನ ಡಾ.ಸುಧಾ ಮೂರ್ತಿ ಅವರು ನನ್ನ ಸಾಮಾಜಿಕ ಸೇವೆಗೆ ಸ್ಫೂರ್ತಿಯಾಗಿದ್ದಾರೆ. ಯಾರಿಗೆ ನೆರವಿನ ಅಗತ್ಯವಿರುತ್ತದೆಯೋ ಅಂಥವರಿಗೆ ನೆರವಾಗಬೇಕು ಎಂಬುದನ್ನು ಡಾ.ಸುಧಾ ಮೂರ್ತಿ ಅವರಿಂದ ಕಲಿತಿದ್ದೇನೆ. ಸಾಮಾಜಿಕ ಕಾರ್ಯ ನನಗೆ ಆತ್ಮ ತೃಪ್ತಿಯನ್ನು ತಂದು ಕೊಡುತ್ತದೆ. -ಫ‌ತಹಿನ್‌ ಮಿಸ್ಬಾ, ಸಾಮಾಜಿಕ ಕಾರ್ಯಕರ್ತೆ

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next